ತದ್ವಿರುದ್ಧ

Movie Review: ಹಂತಕರ ಹಿಂದಿನ ವಂಚನೆಯ ಕರಗಳು

ಚಿತ್ರ: ತದ್ವಿರುದ್ಧ
ನಿರ್ದೇಶನ: ವಿನೋದ್‌ ಜೆ ರಾಜ್‌
ನಿರ್ಮಾಣ: ವಿಕ್ರಮ್‌ ರಾಮಯ್ಯ
ತಾರಾಗಣ: ಸುಚೇಂದ್ರ ಪ್ರಸಾದ್‌, ಸುಮನ್‌ ರಂಗನಾಥ್‌, ವಿಕ್ರಮ್‌ ರಾಮಯ್ಯ, ಐಶ್ವರ್ಯಾ ಶೆಟ್ಟಿ ಮುಂತಾದವರು.
ರೇಟಿಂಗ್: 3.5

ಕಾಣೆಯಾದ ಮಹಿಳೆಯೊಬ್ಬರ ಬಗ್ಗೆ ನಡೆಯುವ ತನಿಖೆ ಒಂದು ಕೊಲೆಯ ಕಥೆ ಹೇಳುತ್ತದೆ. ಆದರೆ ನಿಜವಾಗಿ ಸತ್ತಿದ್ದಾದರೂ ಯಾರು? ಕೊಲೆ ಮಾಡಿದ್ದಾದರೂ ಯಾರು? ಈ ಗೊಂದಲ ಮೂಡಿಸುತ್ತಲೇ, ಪ್ರತಿಕ್ಷಣವೂ ಕಾಡಿಸುತ್ತಲೇ ಸಾಗುವ ಚಿತ್ರ ತದ್ವಿರುದ್ಧ.

ನಾಪತ್ತೆಯಾದ ಮಹಿಳೆಯ ಹೆಸರು ಮಯೂರಿ ವರ್ಮ. ಈಕೆ ಕಾಣೆಯಾದ ಮೂರು ವರ್ಷಗಳ ಬಳಿಕ ತನಿಖೆ ಶುರುವಾಗುತ್ತದೆ. ತನಿಖೆ ಶುರು ಮಾಡುವ ವರ್ಷ 1993. ಅಂದಿನ ಕಾಲಘಟ್ಟದಲ್ಲಿ ಪೊಲೀಸ್‌ ತನಿಖೆಯೊಂದು ಹೇಗೆ ನಡೆಯಬಹುದು ಎನ್ನುವುದನ್ನು ಕಣ್ಣಿಗೆ ಕಟ್ಟುವಂತೆ ತೋರಿಸಲಾಗಿದೆ. ಆರೋಪಿಗಳು ಕಾನೂನಿನ ಕಣ್ಣಿನಿಂದ ಪಾರಾಗಲು ಏನೆಲ್ಲ ಕ್ರಮ ಕೈಗೊಳ್ಳುತ್ತಾರೆ? ಆದರೆ ಸಣ್ಣದೊಂದು ಎಳೆಯನ್ನೇ ಹಿಡಿದುಕೊಂಡು ತನಿಖಾಧಿಕಾರಿ ಹೇಗೆ ಸತ್ಯವನ್ನು ಭೇದಿಸುತ್ತಾ ಹೋಗುತ್ತಾನೆ ಎನ್ನುವುದನ್ನು ರೋಚಕವಾಗಿ ತೋರಿಸಲಾಗಿದೆ.

ಮಯೂರಿ ವರ್ಮ ಇದ್ದಂಥ ಜಾಗ ಜೆಡಿ ಕೆರೆ ಎಸ್ಟೇಟ್.‌ ಈ ಮಹಿಳೆಯ ಪಾತ್ರದಲ್ಲಿ ಸುಮನ್‌ ರಂಗನಾಥ್‌ ಕಾಣಿಸಿದ್ದಾರೆ. ಈಕೆಯ ಪತಿ ಭೂಷಣ್‌ ವರ್ಮ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್‌ ಅಭಿನಯಿಸಿದ್ದಾರೆ. ಘಳಿಗೆಗೆ ಒಮ್ಮೆ ಎನ್ನುವಂತೆ ತದ್ವಿರುದ್ಧವಾಗಿ ವರ್ತಿಸುವ ವ್ಯಕ್ತಿತ್ವ ಭೂಷಣ್‌ ವರ್ಮದು. ಅದನ್ನು ಸುಚೇಂದ್ರ ಪ್ರಸಾದ್‌ ಸಮರ್ಥವಾಗಿ ನಿಭಾಯಿಸಿದ್ದಾರೆ. ಪ್ರಕರಣವನ್ನು ಮೊದಲು ಕೈಗೆತ್ತಿಕೊಳ್ಳುವ ಪೊಲೀಸ್‌ ಅಧಿಕಾರಿ ಕಲ್ಪನಾ ಪಾತ್ರದಲ್ಲಿ ಪೂಜಾ ಗೌಡ ನಟಿಸಿದ್ದಾರೆ. ಬಳಿಕ ತನಿಖೆ ನಡೆಸುವ ಮೇಲಧಿಕಾರಿಯಾಗಿ ವಿಕ್ರಮ್‌ ರಾಮಯ್ಯ ಕಾಣಿಸಿದ್ದಾರೆ. ಮತ್ತೊಂದು ಪ್ರಧಾನ ಪಾತ್ರವಾದ ಸೈಕಿಯಾಟ್ರಿಸ್ಟ್‌ ರೋಲ್‌ ಗೆ ಐಶ್ವರ್ಯಾ ಶೆಟ್ಟಿ ನ್ಯಾಯ ಒದಗಿಸಿದ್ದಾರೆ.

ಪಾತ್ರಧಾರಿಗಳ ಆಯ್ಕೆ, ಅವರಿಂದ ಅಗತ್ಯಕ್ಕೆ ತಕ್ಕ ಅಭಿನಯ ತೆಗೆಸುವಲ್ಲಿ ನಿರ್ದೇಶಕ ವಿನೋದ್‌ ಜೆ ರಾಜ್‌ ಗೆದ್ದಿದ್ದಾರೆ. ಮಾತ್ರವಲ್ಲ ನಿರ್ದೇಶನದ ಜೊತೆಗೆ ಛಾಯಾಗ್ರಹಣವೂ ಅದ್ಭುತವಾಗಿದೆ. ಚಿತ್ರಕ್ಕೆ ಬೇಕಾದ ಮೂಡ್‌ ಒದಗಿಸುವಲ್ಲಿ ಹಿನ್ನೆಲೆ ಸಂಗೀತ ಕೂಡ ಪ್ರಧಾನ ಪಾತ್ರ ವಹಿಸಿದೆ. ಈ ವರ್ಷ ಬಿಡುಗಡೆಗೊಂಡ ಚಿತ್ರಗಳಲ್ಲಿ ಬೆರಳೆಣಿಕೆಯ ಗುಣಮಟ್ಟದ ಸಿನಿಮಾಗಳ ಪಾಲಿಗೆ ತದ್ವಿರುದ್ಧ ಕೂಡ ಸೇರ್ಪಡೆಯಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!