ಚಿತ್ರ: ಕಾಮನ್ ಮ್ಯಾನ್
ನಿರ್ದೇಶನ: ಓಂ ಸಾಯಿ ಪ್ರಕಾಶ್
ನಿರ್ಮಾಣ: ಡಾ.ಎನ್. ನರಸಿಂಹಮೂರ್ತಿ
ತಾರಾಗಣ: ಗೌರಿಶಂಕರ್, ಸೋನ ಲಾಡ್ವ ಮತ್ತು ಡಾ. ಎನ್ ನರಸಿಂಹಮೂರ್ತಿ ಮೊದಲಾದವರು…
ರೇಟಿಂಗ್ : 3/5
ಓರ್ವ ವಕೀಲಿ ವೃತ್ತಿಯಲ್ಲಿರುವಾತ ಕಾನೂನಿನ ಎಲ್ಲ ಅಂಶಗಳನ್ನು ಸರಿಯಾಗಿ ಅರಿತುಕೊಂಡು ಹೋರಾಟಕ್ಕೆ ನಿಂತರೆ, ಆತ ಯಾವ ಮಟ್ಟಕ್ಕೆ ಹೋಗಬಲ್ಲ ಎಂದು ತೋರಿಸುವಂಥ ಚಿತ್ರವೇ ಕಾಮನ್ ಮ್ಯಾನ್.
ಚಿತ್ರದಲ್ಲಿ ಕಾಮನ್ ಮ್ಯಾನ್ ಅಂದರೆ ಕುಮಾರ ಕಂಸಾಳೆ. ಆತ ವೃತ್ತಿಯಲ್ಲಿ ಲಾಯರ್. ಆದರೆ ಅನ್ಯಾಯ ಕಂಡರೆ ಸರ್ಕಾರದ ವಿರುದ್ಧವೇ ಹೋರಾಡಬಲ್ಲ ಕಿಚ್ಚು. ಇಂಥ ಹೋರಾಟದ ಒಂದು ಹಂತದಲ್ಲಿ ವಿಧಾನಸೌಧದಲ್ಲೇ ಪಾಲು ಕೇಳುವ ತನಕ ಹೋರಾಟ ನಡೆಯುತ್ತದೆ. ಕೋರ್ಟ್ ನಲ್ಲಿ ದಾವೆ ಹೂಡುತ್ತಾರೆ. ಆಡಳಿತದಲ್ಲಿರುವ ಮುಖ್ಯಮಂತ್ರಿ ಸ್ಪಂದಿಸಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅಧಿಕಾರದಲ್ಲಿರುವ ಸಿ.ಎಮ್ ಮಾವಳ್ಳಿ ಸದಾಶಿವರಾವ್ ಕೈಗೊಳ್ಳುವ ತೀರ್ಮಾನವೇನು? ಅದಕ್ಕೆ ನಾಯಕನ ಪ್ರತಿತಂತ್ರಗಳೇನು ಎನ್ನುವುದನ್ನು ಪರದೆಯ ಮೇಲೆ ನೋಡಬಹುದು.
ಕುಮಾರ ಕಂಸಾಳೆಯ ಪಾತ್ರವನ್ನು ಗೌರಿಶಂಕರ್ ಅಭಿನಯಿಸಿದ್ದಾರೆ. ಚುರುಕು ಮಾತಿನ ಯುವಕನಾಗಿ ಕಾಣಿಸಿರುವ ಗೌರಿಶಂಕರ್ ಲಾಯರ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮತ್ತೊಂದು ಕಡೆ ಕಾನೂನು ಯುದ್ಧದಲ್ಲಿ ಪ್ರೇಯಸಿಯೇ ಎದುರಾಗುತ್ತಾಳೆ. ಆತ ಎಷ್ಟೊಂದು ಕಠಿಣ ಹೃದಯಿಯಾಗಿರುತ್ತಾನೆ ಎನ್ನುವುದನ್ನು ನಿರ್ದೇಶಕರು ಇಂಥ ದೃಶ್ಯಗಳ ಮೂಲಕ ಸಾಬೀತು ಮಾಡಿದ್ದಾರೆ.
ಕುಮಾರ ಕಂಸಾಳೆಯ ಹೋರಾಟದ ಹಿಂದೆ ಒಂದು ಫ್ಲ್ಯಾಶ್ ಬ್ಯಾಕ್ ಸ್ಟೋರಿ ಇದೆ. ಅದರಲ್ಲಿ ಆತನ ತಂದೆ ಧರ್ಮತೇಜ ಕಂಸಾಳೆಯ ಕಥೆ ಅನಾವರಣಗೊಳ್ಳುತ್ತದೆ. ಧರ್ಮತೇಜ ಕಂಸಾಳೆ ಪಾತ್ರವನ್ನು ಬಲರಾಜವಾಡಿ ಚೆನ್ನಾಗಿ ನಿಭಾಯಿಸಿದ್ದಾರೆ. ಅದರಲ್ಲೂ ರಂಗಭೂಮಿಯ ದೃಶ್ಯಗಳನ್ನು ತುಂಬ ಚೆನ್ನಾಗಿ ನಟಿಸಿ ತೋರಿಸಿದ್ದಾರೆ.
ಪದವಿಯಲ್ಲಿರುವ ಮುಖ್ಯಮಂತ್ರಿ ಮಾವಳ್ಳಿ ಸದಾಶಿವರಾವ್ ಪಾತ್ರದಲ್ಲಿ ಚಿತ್ರದ ನಿರ್ಮಾಪಕ ಡಾ.ಎನ್.ನರಸಿಂಹಮೂರ್ತಿಯವರೇ ಕಾಣಿಸಿದ್ದಾರೆ. ಭ್ರಷ್ಟ ರಾಜಕಾರಣಿಯ ಆಷಾಢಭೂತಿತನ, ಆಸೆಬುರುಕುತನ, ಭಯ ಎಲ್ಲವನ್ನೂ ನೋಟದಲ್ಲೇ ಪ್ರದರ್ಶಿಸಿದ್ದಾರೆ. ನಿರ್ಮಾಪಕರಾಗಿ ಮಾತ್ರವಲ್ಲದೆ, ಕಲಾವಿದರಾಗಿಯೂ ತಮಗೆ ಭವಿಷ್ಯವಿದೆ ಎಂದು ಸಾಬೀತು ಪಡಿಸಿದ್ದಾರೆ.
ನಾಯಕಿಯಾಗಿ ಸೋನ ಲಡ್ವಗೆ ಪ್ರೀತಿ, ಪ್ರೇಮದ ದೃಶ್ಯಗಳಲ್ಲಿ ಕಾಣಿಸುವ ಅವಕಾಶ ದೊರಕಿದೆ. ಹಾಡುಗಳಲ್ಲಿ ಕೂಡ ಮನಸೆಳೆಯುತ್ತಾರೆ.
ತೂಮಿನಾಡು ಅವರು ಮುಖ್ಯಮಂತ್ರಿಯ ಪಿ.ಎ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಸ್ವಾಮೀಜಿಯ ಪಾತ್ರದಲ್ಲಿ ಪಿ.ಡಿ ಸತೀಶ್ಚಂದ್ರ ಅವರ ನಟನೆ ಅಮೋಘ. ನೈಜ ಸ್ವಾಮೀಜಿಯಂತೆ ಕಾಣಿಸಿಕೊಂಡಿದ್ದಾರೆ.
ವಿನಯ್ ಚಂದ್ರ ಅವರ ಸಂಗೀತದಲ್ಲಿನ ಹಾಡುಗಳು ಆಲಿಸುವಂತೆ ಇವೆ. ಅದರಲ್ಲಿ ನಾಗೇಂದ್ರ ಪ್ರಸಾದ್ ಸಾಹಿತ್ಯಕ್ಕೂ ಕ್ರೆಡಿಟ್ ಸಂದಾಯವಾಗುತ್ತದೆ. ಭ್ರಷ್ಟಾಚಾರದ ವಿರುದ್ಧದ ಹೋರಾಟದ ಕಥೆಯಾದರೂ ಪ್ರೇಮಕತೆಗಳ ಪ್ರಿಯರಿಗೂ ಇಷ್ಟವಾಗುವಂತೆ ಚಿತ್ರವನ್ನು ರೂಪಿಸಿರುವ ಕೀರ್ತಿ ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರಿಗೆ ಸಲ್ಲುತ್ತದೆ.





Be the first to comment