ಚಿತ್ರ: ಸ್ಪಾರ್ಕ್
ನಿರ್ದೇಶನ: ಮಹಾಂತೇಶ ಹಂದ್ರಾಳ್
ನಿರ್ಮಾಣ: ಗರೀಮಾ ಅವಿನಾಶ್
ತಾರಾಗಣ: ನಿರಂಜನ್ ಸುಧೀಂದ್ರ, ಪ್ರೇಮ್ ಮತ್ತು ಭಾವನಾ ಮೊದಲಾದವರು.
ರೇಟಿಂಗ್ : 3.5/5
ರಾಜಕಾರಣಿಗಳು ನೇರವಾಗಿ ಭ್ರಷ್ಟಾಚಾರದಲ್ಲಿ ತೊಡಗಿರುವ ಎಷ್ಟೋ ಕಥೆಗಳನ್ನು ಪರದೆಯ ಮೇಲೆ ನೋಡಿದ್ದೇವೆ. ಆದರೆ ಜನಸಾಮಾನ್ಯರ ಸಹಕಾರಿ ಬ್ಯಾಂಕ್ ಗಳಲ್ಲಿ ಕೂಡ ರಾಜಕೀಯದ ಹಸ್ತಕ್ಷೇಪ ಯಾವ ಮಟ್ಟಿಗೆ ಇದೆ? ಅದರಲ್ಲಿ ಜಾತಿಭೇದವನ್ನು ತುರುಕಿದರೆ ಏನಾಗುತ್ತದೆ ಮುಂತಾದ ಹೊಸ ರೀತಿಯ ಚಿಂತನೆಗಳಿಂದ ಕೂಡಿದ ಚಿತ್ರ ಸ್ಪಾರ್ಕ್.
ಸ್ಪಾರ್ಕ್ ಚಿಂತನೆಗೆ ಕಿಡಿ ಹಚ್ಚುವ ಚಿತ್ರ. ಹಾಗಂತ ಮನರಂಜನೆಗೆ ಕೊರತೆಯೇನೂ ಇಲ್ಲ. ಪೂರ್ತಿ ಸಿನೆಮಾದಲ್ಲಿ ಹೊಸ ಹೊಸ ತಿರುವುಗಳಿಗೆ ಕೊರತೆಯೇ ಇಲ್ಲ. ಚಿತ್ರದ ನಾಯಕ ಒಬ್ಬ ಮಾಧ್ಯಮ ಪ್ರತಿನಿಧಿ. ಅಭಿರಾಮ್ ಹೆಸರಿನ ಆತ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ನಿಂತವನು. ಈ ಹೋರಾಟದಲ್ಲಿ ಹೊಡೆದಾಟಗಳೂ ಇವೆ. ಹೋರಾಟದಲ್ಲಿನ ನಟನೆ, ಹೊಡೆದಾಟದಲ್ಲಿನ ಸ್ಟೈಲ್ ಎರಡರಲ್ಲೂ ನಿರಂಜನ್ ಮನಗೆಲ್ಲುತ್ತಾರೆ.
ಅಭಿರಾಮ್ ಆಪ್ತಮಿತ್ರನಾಗಿ ಧರ್ಮಣ್ಣ ಕಡೂರು ಅಭಿನಯಿಸಿದ್ದಾರೆ. ಅವರು ಕೂಡ ಮಾಧ್ಯಮ ಪ್ರತಿನಿಧಿಯ ಪಾತ್ರದಲ್ಲೇ ಇರುತ್ತಾರೆ. ಅಭಿರಾಮ್ ಗೆ ಈ ಎಲ್ಲದರಾಚೆ ಒಂದು ಪ್ರೇಮವಿದೆ. ಈ ಪ್ರೇಯಸಿಯ ಪಾತ್ರವನ್ನು ರಚನಾ ಇಂದರ್ ನಿಭಾಯಿಸಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಹೋರಾಡುವ ಪೊಲೀಸ್ ಅಧಿಕಾರಿಯಾಗಿ ಪ್ರೇಮ್ ನಟಿಸಿದ್ದಾರೆ. ಆದರೆ ಚಿತ್ರದಲ್ಲಿ ಅವರನ್ನು ಖಳನೆಂದು ತೋರಿಸಲಾಗಿದೆ. ಅದು ಹೇಗೆ ಎನ್ನುವುದು ಸಿನೆಮಾ ನೋಡಿದವರಿಗೆ ಮಾತ್ರ ಅರಿವಾಗಲು ಸಾಧ್ಯ.
ಒಂದು ಗ್ಯಾಪ್ ಬಳಿಕ ಕನ್ನಡಕ್ಕೆ ಕಾಲಿಟ್ಟಿರುವ ಭಾವನಾ ಅದ್ಭುತವಾದ ಪಾತ್ರವನ್ನು ಮಾಡಿದ್ದಾರೆ. ಮೇಲ್ನೋಟಕ್ಕೆ ಲಾಯರ್ ಆಗಿದ್ದರೂ, ಅದರಾಚೆಗೆ ತಮ್ಮ ಪಾತ್ರ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡಿದ್ದಾರೆ. ರಮೇಶ್ ಇಂದಿರಾ, ನೀನಾಸಂ ಅಶ್ವತ್ಥ್, ವಿಜಯ್ ಚೆಂಡೂರ್, ಅಶ್ವಿನ್ ಹಾಸನ್ ಹೀಗೆ ಪೋಷಕ ಕಲಾವಿದರ ದಂಡೇ ಚಿತ್ರದಲ್ಲಿದೆ.
ಸಚಿನ್ ಬಸ್ರೂರು ಸಂಗೀತದಲ್ಲಿರುವ ಹಾಡುಗಳು ಗಮನ ಸೆಳೆಯುವಂತಿವೆ. ಒಟ್ಟು ಕಥೆಯನ್ನು ಪ್ರಸ್ತುತ ಪಡಿಸಿರುವ ರೀತಿಯೇ ಚೆನ್ನಾಗಿದೆ. ಮೊದಲ ಚಿತ್ರದಲ್ಲೇ ನಿರ್ದೇಶಕರೊಬ್ಬರು ಚಿತ್ರವನ್ನು ಇಷ್ಟು ಆಸಕ್ತಿದಾಯಕವಾಗಿ ತೋರಿಸಿರುವುದು ಮೆಚ್ಚುವಂಥ ವಿಚಾರ. ಪ್ರಥಮ ಚಿತ್ರ ಎನ್ನುವ ಯಾವುದೇ ರಿಯಾಯಿತಿಗಳು ಇಲ್ಲದೆ ನೋಡಿದರೂ ಎಲ್ಲರಿಗೂ ಸಂತೃಪ್ತಿ ನೀಡಬಲ್ಲ ಚಿತ್ರವೆಂದು ಧೈರ್ಯದಿಂದ ಹೇಳಬಹುದು.





Be the first to comment