ಚಿತ್ರ: ರುದ್ರಾಭಿಷೇಕಂ
ನಿರ್ದೇಶನ: ವಸಂತ್ ಕುಮಾರ್ ಕಂಪ್ಲಿ
ನಿರ್ಮಾಣ: ಪ್ಯಾನ್ ಇಂಡಿಯಾ ಕ್ರಿಯೇಶನ್ಸ್
ತಾರಾಗಣ: ವಿಜಯ ರಾಘವೇಂದ್ರ, ಪ್ರಿಯಾಂಕಾ ತಿಮ್ಮೇಶ್ ಮುಂತಾದವರು.
ರೇಟಿಂಗ್: 3/5
ಒಬ್ಬನ ಪಾಪದ ಎಲ್ಲೆ ಮೀರಿದಾಗ ಆತನ ಸಾವಾಗುತ್ತದೆ ಎಂದು ನಂಬುತ್ತಾರೆ. ಆದರೆ ಪಾಪದ ಎಲ್ಲೆ ಮೀರಿಯೂ ಮೆರೆವವನನ್ನು ಶಿಕ್ಷಿಸುವುದು ಯಾರು? ಕೈಲಾಸದಿಂದ ರುದ್ರನೇ ಭುವಿಗೆ ಇಳಿದು ಬರುತ್ತಾನ? ಅದು ಹೇಗೆ ಸಾಧ್ಯ ಎಂದು ತಿಳಿಸುವ ಚಿತ್ರವೇ ರುದ್ರಾಭಿಷೇಕಂ.
ಬೆಂಕಿಪುರದಲ್ಲಿ ರುದ್ರ ದೇವನ ಮೂರ್ತಿಯ ಅರ್ಚಕನೇ ವೀರಭದ್ರ. ತಲೆಮಾರುಗಳಿಂದ ಆ ಬೆಂಕಿಪುರವನ್ನು ಅವರೇ ನೋಡಿಕೊಂಡು ಬರುತ್ತಿದ್ದವರು. ಆದರೆ ತಂದೆಯ ಸಾವಿನ ಬಳಿಕ ಹುಟ್ಟಿದ ವೀರಭದ್ರ ಕೇವಲ ರುದ್ರನ ಅರ್ಚಕನಾಗಿ ಮಾತ್ರ ಬೆಳೆಯುತ್ತಾನೆ. ಆದರೆ ತನ್ನ ತಂದೆಗೆ ಊರ ಗೌಡನಿಂದ ನಡೆದ ಅನ್ಯಾಯದ ಕಥೆ ಅರಿತಾಗ ಗೌಡನಿಗೆ ತಿರುಗಿ ನಿಲ್ಲುತ್ತಾನೆ. ವೀರಭದ್ರನ ತಂದೆಗೆ ಗೌಡ ಮಾಡಿದಂಥ ಅನ್ಯಾಯವೇನು? ವೀರಭದ್ರ ತೆಗೆದುಕೊಳ್ಳುವ ಪ್ರತಿಕಾರ ಏನು? ಇವೆಲ್ಲವನ್ನೂ ರುದ್ರಾಭಿಷೇಕಂನಲ್ಲಿ ತೋರಿಸಲಾಗಿದೆ.
ಬೆಂಕಿಪುರದಲ್ಲಿ ಊರಗೌಡ ಮತ್ತು ಆತನ ಪುತ್ರ ಬೆಂಕಿಯದ್ದೇ ಕಾರುಬಾರು. ತಮ್ಮ ಸುಖಕ್ಕಾಗಿ ಊರಿಗೇ ಬೆಂಕಿಹಚ್ಚುವಂಥ ಮನಸ್ಥಿತಿಯವರು. ಲಿಂಗಯ್ಯ ಎಂಬಾತನನ್ನು ಮೂವತ್ತು ವರ್ಷ ಕೋಣೆಯೊಳಗೆ ಕೂಡಿಹಾಕಿ ದಂಥವರು.
ಆದರೆ ವೀರಭದ್ರ ಹಾಗಲ್ಲ. ಲಿಂಗಯ್ಯನನ್ನು ಬಂಧಮುಕ್ತಗೊಳಿಸಲು ಕಾರಣನಾದವನು. ಬಸವಣ್ಣನ ತತ್ವ ನಂಬಿ ಬಾಳುವವನು. ಎಂದಿಗೂ ಜಾತಿ ಭೇದ ಮಾಡದವನು. ಆತ ನೇರವಾಗಿ ಗೌಡನ ವಿರುದ್ಧ ಹೋದವನಲ್ಲ. ಆದರೆ ವೀರಭದ್ರನ ನ್ಯಾಯಯುತ ಮಾರ್ಗವೆಲ್ಲ ಸಹಜವಾಗಿ ಗೌಡನನ್ನು ಕಾಡುತ್ತಲೇ ಹೋಗುತ್ತದೆ.
ಚಿತ್ರದಲ್ಲಿ ವೀರಭದ್ರನ ಪಾತ್ರಕ್ಕೆ ವಿಜಯರಾಘವೇಂದ್ರ ಜೀವ ತುಂಬಿದ್ದಾರೆ. ತಂದೆಯ ಪಾತ್ರದಲ್ಲೂ ತಾವೇ ನಟಿಸಿದ್ದಾರೆ. ಆದರೆ ಈ ಎರಡು ಪಾತ್ರಗಳು ಪರಸ್ಪರ ಎದುರಾಗುವ ಸಂದರ್ಭ ಇರುವುದಿಲ್ಲ. ತಂದೆಯಾಗಿ
ವೀರಗಾಸೆ ಕುಣಿಯುವ ಬಸಯ್ಯನ ಪಾತ್ರದಲ್ಲಿ ವಿಜಯರಾಘವೇಂದ್ರ ನಟನೆ ಆಕರ್ಷಕವಾಗಿದೆ.
ವೀರಭದ್ರನ ಅತ್ತೆಯ ಮಗಳು ಹಾಗೂ ಪ್ರೇಯಸಿ ಪೂರ್ವಿಯ ಪಾತ್ರದಲ್ಲಿ ಪ್ರಿಯಾಂಕಾ ತಿಮ್ಮೇಶ್ ನಟಿಸಿದ್ದಾರೆ. ಈಕೆ ಕೂಡ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಸಹೋದರಿ ಅಪೂರ್ವಿ ಪಾತ್ರವನ್ನು ಕೂಡ ಪ್ರಿಯಾಂಕಾ ತಿಮ್ಮೇಶ್ ಅಭಿನಯಿಸಿದ್ದಾರೆ.
ಬೆಂಕಿಪುರದ ಗೌಡನಾಗಿ ಬಲರಾಜವಾಡಿ ಕ್ರೂರಿಯ ಪ್ರತಿರೂಪವಾಗಿದ್ದಾರೆ. ಚಿತ್ರಕ್ಕೆ ಸಂಗೀತ ನೀಡಿರುವ ವಿ.ಮನೋಹರ್ ಶಾನುಭೋಗನ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ದುಷ್ಟ ಶಿಷ್ಟರ ನಡುವಿನ ಹೋರಾಟದಲ್ಲಿ ಸ್ವತಃ ದೈವದರ್ಶನವಾದರೆ ಹೇಗಿದ್ದೀತು ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ.





Be the first to comment