‘ಲಂಬೋದರ 2.0’ ಚಿತ್ರದಲ್ಲಿ ನಟಿಸಲಿರುವ ರೋಬೋಟ್

ಸಿಂಪಲ್ ಸುನಿ  ಸಾರಥ್ಯದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ಲಂಬೋದರ 2.0’   ಚಿತ್ರದಲ್ಲಿ ನೈಜ ಹ್ಯೂಮನಾಯ್ಡ್ ರೋಬೋಟ್ ‘ಜಿಯಾ’  ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದೆ.

ಬೆಂಗಳೂರು ಮೂಲದ   ‘ಮಚಾನಿ ರೋಬೋಟಿಕ್ಸ್’   ಸಂಸ್ಥೆ ಅಭಿವೃದ್ಧಿಪಡಿಸಿರುವ ‘ಜಿಯಾ’   ಎಂಬ ಸುಧಾರಿತ ಹ್ಯೂಮನಾಯ್ಡ್ ರೋಬೋಟ್  ಪಾತ್ರಕ್ಕೆ ಜೀವ ತುಂಬುತ್ತಿರುವುದು ವಿಶೇಷ.   ಜಿಯಾ ಸ್ವತಃ ತಂತ್ರಜ್ಞಾನ ಆಧಾರಿತ ಕಲಾವಿದೆಯಾಗಿ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳುವ ಮೂಲಕ ಭಾರತೀಯ ಚಿತ್ರರಂಗದ ಭವಿಷ್ಯದ ಹೆಜ್ಜೆಗೆ ಮುನ್ನುಡಿ ಬರೆದಿದೆ.

ಸೈನ್ಸ್-ಫಿಕ್ಷನ್ ಹಾಗೂ ಸೋಶಿಯಲ್ ಥ್ರಿಲ್ಲರ್ ಜಾನರ್‌ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ನವಪ್ರತಿಭೆ ಅನಿಲ್ ಶೆಟ್ಟಿ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದು, ಸಾಚಿ ಬಿಂದ್ರಾ ನಾಯಕಿಯಾಗಿ ಸಾಥ್ ನೀಡಿದ್ದಾರೆ. . ಈ ಚಿತ್ರದ ಮೂಲಕ ಕುನಾಲ್ ಕಪೂರ್ ಅಧಿಕೃತವಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದು, ಅವರ ಪಾತ್ರ ಚಿತ್ರಕಥೆಗೆ ಮಹತ್ವದ ತಿರುವು ನೀಡಲಿದೆ.

‘ಡಿಜಿಟಲ್ ಯುಗದಲ್ಲಿ ಇಂದಿನ ಯುವಜನರ ಬದುಕು ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಎದುರಾಗುತ್ತಿರುವ ಸಂಕೀರ್ಣತೆಗಳೇ ಚಿತ್ರದ ಪ್ರಮುಖ ಕಥಾವಸ್ತು. ಕೃತಕ ಬುದ್ಧಿಮತ್ತೆ  ಆಳುತ್ತಿರುವ ಇಂದಿನ ಕಾಲಘಟ್ಟದಲ್ಲಿ ಬೆಂಗಳೂರಿನ ಯುವಕನೊಬ್ಬನ ಜೀವನದ ಮೂಲಕ ನಿಜ ಜಗತ್ತು ಮತ್ತು ಡಿಜಿಟಲ್ ಜಗತ್ತಿನ ನಡುವಿನ ಸಂಘರ್ಷವನ್ನು  ಅನಾವರಣಗೊಳಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಅತಿಯಾದ ಗೀಳು, ಒಂಟಿತನ, ಸಂತೋಷದ ಭ್ರಮೆ, ಡಿಜಿಟಲ್ ವ್ಯಸನ ಹಾಗೂ ಡಿಜಿಟಲ್ ನಿಯಂತ್ರಣದಂತಹ ಸಮಕಾಲೀನ ಜ್ವಲಂತ ವಿಚಾರಗಳನ್ನು ಚಿತ್ರದಲ್ಲಿ ಚರ್ಚಿಸಲಾಗಿದೆ’ ಎಂದು ನಿರ್ದೇಶಕ ಸಿಂಪಲ್ ಸುನಿ ವಿವರಿಸಿದ್ದಾರೆ.

ಹೊಸ ಬಗೆಯ ತಂತ್ರಜ್ಞಾನ ಹಾಗೂ ವಿಶಿಷ್ಟ ಕಥಾಹಂದರದೊಂದಿಗೆ ಮೂಡಿಬರುತ್ತಿರುವ ಈ ಸಿನಿಮಾ ಈಗಾಗಲೇ ಸಿನಿಪ್ರಿಯರಲ್ಲಿ ಕುತೂಹಲ ಹುಟ್ಟು ಹಾಕಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!