‘ಧುರಂಧರ್’ ವಿರುದ್ಧ ಸೇನಾ ರಹಸ್ಯ ಬಯಲು ಮಾಡಿದ ಆರೋಪ

ಭಾರತೀಯ ಸಶಸ್ತ್ರ ಪಡೆಗಳ ಸೂಕ್ಷ್ಮ ಕಾರ್ಯಾಚರಣೆಗಳ ಮಾಹಿತಿಯನ್ನು ‘ಧುರಂಧರ್’ ಚಿತ್ರದಲ್ಲಿ ಬಹಿರಂಗಪಡಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ  ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರ ಹಾಗೂ ಸೆನ್ಸಾರ್ ಮಂಡಳಿಗೆ ಪರಿಶೀಲನೆ ನಡೆಸುವಂತೆ ಸೂಚಿಸಿದೆ.

ಸಶಸ್ತ್ರ ಸೀಮಾ ಬಲ ಹೆಡ್ ಕಾನ್ಸ್‌ಟೇಬಲ್ ದೀಪಕ್ ಕುಮಾರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾ. ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾ.ತೇಜಸ್ ಕಾರಿಯಾ ಅವರ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.

ಸಿನಿಮಾ ಮನರಂಜನೆಗಾಗಿ ನಿರ್ಮಾಣವಾದರೂ, ಅದರ ಸಾಮಾಜಿಕ ಹಾಗೂ ರಾಷ್ಟ್ರೀಯ ಭದ್ರತೆಯ ಮೇಲಿನ ಪರಿಣಾಮವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ” ಎಂದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.

ಸಿನಿಮಾದಲ್ಲಿ ಅಧಿಕೃತ ರಹಸ್ಯ ಕಾಯ್ದೆ ಉಲ್ಲಂಘನೆಯಾಗಿದೆ. ದೇಶದ ಭದ್ರತೆಗೆ ಧಕ್ಕೆ ತರುವ ಅಂಶಗಳನ್ನು ಬಳಸಲಾಗಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ರಹಸ್ಯ ಸಂಶೋಧನೆಗಳು, ಸೇನೆಯ ಸೂಕ್ಷ್ಮ ಕಾರ್ಯಾಚರಣೆ ಸ್ಥಳಗಳು ಹಾಗೂ ಮಿಲಿಟರಿ ತಂತ್ರಗಳನ್ನು ಚಿತ್ರದಲ್ಲಿ ಬಿಂಬಿಸಲಾಗಿದೆ. ಮೃತ ಯೋಧರು ಹಾಗೂ ಹಿರಿಯ ರಕ್ಷಣಾ ಅಧಿಕಾರಿಗಳಿಂದ ಪ್ರೇರಿತ ಪಾತ್ರಗಳನ್ನು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿ ತೋರಿಸಲಾಗಿದೆ ಎಂದು ಅರ್ಜಿಯಲ್ಲಿ  ಆರೋಪಿಸಲಾಗಿದೆ.

ಚಿತ್ರದ ಬಿಡುಗಡೆಗೆ   ತಡೆ ವಿಧಿಸದ ನ್ಯಾಯಾಲಯ, ಅರ್ಜಿಯನ್ನು ಅಧಿಕೃತ ಮನವಿಯಾಗಿ ಪರಿಗಣಿಸಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಸೆನ್ಸಾರ್ ಮಂಡಳಿ ಸೂಕ್ತ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!