ಸೆ.12ರಿಂದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್– ಸೂಪರ್ ಮಾಮ್’

ಕನ್ನಡ ಕಿರುತೆರೆಯ ಜನಪ್ರಿಯ ವಾಹಿನಿ ‘ಜೀ ಕನ್ನಡ’ ದಲ್ಲಿ ಕರ್ನಾಟಕದ ತಾಯಂದಿರ ನೃತ್ಯ ಪ್ರತಿಭೆ ಮತ್ತು ಕನಸುಗಳಿಗೆ ಹೊಸ ರೆಕ್ಕೆ ನೀಡಲು ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ – ಸೂಪರ್ ಮಾಮ್’ ರಿಯಾಲಿಟಿ ಶೋ ಸೆಪ್ಟೆಂಬರ್ 12ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.

ಕುಟುಂಬ, ಉದ್ಯೋಗ , ದಿನನಿತ್ಯದ ನೂರಾರು ಜವಾಬ್ದಾರಿಗಳ ನಡುವೆಯೂ ತಮ್ಮ ಆಸಕ್ತಿ ಮತ್ತು ನೃತ್ಯದ ಮೇಲಿನ ಪ್ರೀತಿಯನ್ನು ಜೀವಂತವಾಗಿರಿಸಿಕೊಂಡಿರುವ ಸ್ಪೂರ್ತಿದಾಯಕ ಅಮ್ಮಂದಿರ ಕಥೆಗಳೇ ಈ ಶೋದ ಪ್ರಮುಖ ಆಕರ್ಷಣೆಯಾಗಲಿದೆ.

ಆಡಿಷನ್ ಸಂಚಿಕೆಗಳಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿರುವ ತಾಯಂದಿರನ್ನು ವೀಕ್ಷಕರಿಗೆ ಪರಿಚಯಿಸಲಾಗುತ್ತದೆ. ನೃತ್ಯದ ಮೇಲಿನ ತಮ್ಮ ಆಸಕ್ತಿ ಮತ್ತು ಪ್ರತಿಭೆಯನ್ನು ವೇದಿಕೆಯಲ್ಲಿ ಪ್ರದರ್ಶಿಸಲಿರುವ  ತಾಯಂದಿರು, ತಮ್ಮ ವೈಯಕ್ತಿಕ ಬದುಕಿನ ಪಯಣ, ಕನಸುಗಳು ಹಾಗೂ ಆಕಾಂಕ್ಷೆಗಳನ್ನೂ ಹಂಚಿಕೊಳ್ಳಲಿದ್ದಾರೆ.  ಪ್ರತಿಯೊಬ್ಬ ಸ್ಪರ್ಧಿಯೂ ತನ್ನದೇ ಆದ ಕಥೆ ಮತ್ತು ನೃತ್ಯ ಶೈಲಿಯೊಂದಿಗೆ ವೇದಿಕೆಯೇರಲಿದ್ದು, ಅವರ ವೈವಿಧ್ಯಮಯ ಪ್ರದರ್ಶನಗಳು ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ – ಸೂಪರ್ ಮಾಮ್’ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಲಿವೆ.

ಜನಪ್ರಿಯ ನಿರೂಪಕಿ ಅನುಶ್ರೀ ಅವರು  ಶೋವನ್ನು ನಡೆಸಿಕೊಡಲಿದ್ದಾರೆ.  ತೀರ್ಪುಗಾರರ ಬಳಗದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಖ್ಯಾತ ನಿರ್ದೇಶಕ ತರುಣ್ ಸುಧೀರ್, ನಟ ವಿಜಯ್ ರಾಘವೇಂದ್ರ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಇರಲಿದ್ದಾರೆ.   ತೀರ್ಪುಗಾರರು ಸ್ಪರ್ಧಿಗಳ ಪ್ರದರ್ಶನವನ್ನು ಮೌಲ್ಯಮಾಪನ ಮಾಡುವುದರ ಜೊತೆಗೆ ಅವರಿಗೆ ಮಾರ್ಗದರ್ಶನ ನೀಡಲಿದ್ದಾರೆ.

—–

 

Be the first to comment

Leave a Reply

Your email address will not be published. Required fields are marked *

Translate »
error: Content is protected !!