ಶ್ರೀಮತಿ ಸಿಂಧೂರ

Movie Review: ‘ಶ್ರೀಮತಿ ಸಿಂಧೂರ’ ಎನ್ನುವ ಧಾರಾವಾಹಿ ಕಥೆ!

ಚಿತ್ರ : ಶ್ರೀಮತಿ ಸಿಂಧೂರ
ನಿರ್ದೇಶನ : ಆರ್.‌ಅನಂತರಾಜು
ನಿರ್ಮಾಣ : ದಿನ್ನಹಳ್ಳಿ ಎನ್ ನಾಗಿರೆಡ್ಡಿ
ತಾರಾಗಣ : ವಿಜಯ್ ರಾಘವೇಂದ್ರ, ಪ್ರಿಯಾ‌ಹೆಗಡೆ,‌ ಮಾನಸಿ ಸುಧೀರ್ ಮೊದಲಾದವರು…
ರೇಟಿಂಗ್: 2 /5

ಇಡೀ‌ ಚಿತ್ರತಂಡ ಮೂವತ್ತು ವರ್ಷಗಳ ಹಿಂದೆ ಹೋಗಿ ಈ ಚಿತ್ರವನ್ನು ತೆಗೆದಂತಿದೆ. ಹಾಗಂತ ಇದು ಟೈಮ್ ಮಷಿನ್ ಕಥೆ ಏನಲ್ಲ. ಕಥೆಯೊಳಗೆ ಮೊಬೈಲ್ ಫೋನ್ ಎಲ್ಲವೂ ಇದೆ. ಆದರೆ ಕಥೆಯಲ್ಲಿ, ನಿರೂಪಣೆಯಲ್ಲಿ ಎಲ್ಲವೂ ಮೂರು ದಶಕಕ್ಕೂ ಹಿಂದಿನ ಶೈಲಿ ಎದ್ದು ಕಾಣುತ್ತದೆ.

ಒಂದು ತುಂಬಿದ ಕುಟುಂಬ. ಅಲ್ಲಿ ತಂಗಿಯ ಮಗನಿಗೆ ತನ್ನ ಮಗಳನ್ನು ಕೊಟ್ಟು ಆಸ್ತಿ ಹೊಡೆಯಬೇಕು ಎಂದು ಕಾದಿರುವ ಮಾವನಿದ್ದಾನೆ. ಆದರೆ ಆ ಹುಡುಗ ಹಳ್ಳಿ ಹುಡುಗಿಯೊಬ್ಬಳನ್ನು ಸೊಸೆಯಾಗಿ ಕರೆದುಕೊಂಡು ಬರುತ್ತಾನೆ. ಆದರೆ ಪತ್ನಿಯಾಗಿ ಬಂದವಳ ಮೇಲೆ ಸಂದೇಹ ಸೃಷ್ಟಿಯಾಗುವಂಥ ಸಂದರ್ಭ ಸೃಷ್ಟಿಯಾಗುತ್ತದೆ. ಅದನ್ನು ಖುದ್ದು ಆತನ ಸೋದರ ಮಾವನೇ ಮಾಡಿರುತ್ತಾನೆ.‌ ಈ ಸಂದೇಹ ಪರಿಹಾರಕ್ಕೆ ಹೇಗೆ ದೈವೀಕ ಶಕ್ತಿ ಪ್ರೇರಣೆಯಾಗುತ್ತದೆ ಎನ್ನುವುದೇ ಚಿತ್ರದ ಕಥೆ.

ಸಂದೇಹ ಪಡುವ ಗಂಡನ ಪಾತ್ರವನ್ನು ವಿಜಯ ರಾಘವೇಂದ್ರ ನಿರ್ವಹಿಸಿದ್ದಾರೆ. ಅವರು ಹಳೆಯ ಶೈಲಿಯ ನಟನೆ ಮಾಡಲು ತುಂಬಾ ಪ್ರಯತ್ನ ಪಟ್ಟಿದ್ದಾರೆ. ಪತ್ನಿಯ ಮೇಲೆ ಸಿಡುಕುವ ಒಂದು ದೃಶ್ಯದಲ್ಲಂತೂ ಡಾ.ರಾಜ್ ನೆನಪಾಗುತ್ತಾರೆ. ಆದರು ಕೂಡ ವಿಜಯ ರಾಘವೇಂದ್ರ ಅವರಿಂದ ಈ ಕಾಲಘಟ್ಟದಲ್ಲಿ ಇಂಥದೊಂದು ಪಾತ್ರ ತೆಗೆಸುವ ಅಗತ್ಯ ಇರಲಿಲ್ಲ. ಈಚೆಗಷ್ಟೇ ಅವರು ಆ್ಯಕ್ಷನ್, ಸಸ್ಪೆನ್ಸ್ ಚಿತ್ರಗಳ‌ ಮೂಲಕ ಒಂದೊಳ್ಳೆಯ ಇಮೇಜ್ ಸೃಷ್ಟಿಸಿಕೊಂಡಿದ್ದರು. ಅದರ ಮಧ್ಯೆ ಈ ಸೀರಿಯಲ್ ಹೀರೋ ರೀತಿಯ ಪಾತ್ರ ಮಾಡುವ ಬದಲು, ಒಂದೊಳ್ಳೆಯ ಧಾರಾವಾಹಿಯನ್ನೇ ಒಪ್ಪಿಕೊಂಡಿದ್ದರೆ ವರ್ಷಗಳ ಕಾಲ ಮನೆಮಂದಿಯ ಸ್ಟಾರ್ ಆಗಬಹುದಿತ್ತು.

ಕಥೆಯಲ್ಲಿ ನಾಯಕಿಗೆ ಪ್ರಾಧಾನ್ಯತೆ ಇದೆ. ಆದರೆ ಚಿತ್ರಕ್ಕೆ ಹೊಂದಿಕೆಯಾಗದಂಥ ನಾಯಕಿಯನ್ನು ಆರಿಸಿದ್ದಾರೆ. ಮೊದಲನೆಯದಾಗಿ ವಿಜಯ ರಾಘವೇಂದ್ರ ಅವರ ಎತ್ತರಕ್ಕೆ ಮೇಳಾಮೇಳಿಯೇ ಇರದಂಥ ಎತ್ತರದ ನಾಯಕಿ. ಬಹುಶಃ ನಾಯಕನ‌ ತಾಯಿಯಾಗಿ ನಟಿಸಿದ ಮಾನಸಿ ಸುಧೀರ್ ಎತ್ತರಕ್ಕೆ ಹೊಂದಿಕೆಯಾಗುವ ಸೊಸೆಯನ್ನೇ ನಿರ್ದೇಶಕರು ಹುಡುಕಿದಂತಿದೆ! ಪ್ರಿಯಾ ಹೆಗಡೆ ಎನ್ನುವ ಈ ನಟಿ ನೋಟಕ್ಕಷ್ಟೇ ಎತ್ತರ. ಅಭಿನಯದಲ್ಲಿ ಅದರ ಕಾಲು ಭಾಗವೂ ಇಲ್ಲ! ಯಾಕೆಂದರೆ ನಿರ್ದೇಶಕರು ನಾಯಕಿಯನ್ನು ಹಳ್ಳಿಯ ಮುದ್ದು ಮುದ್ದಾಗಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಉದ್ದುದ್ದಾಗಿರುವ ನಾಯಕಿ ಬುದ್ಧಿ ಮಾತ್ರ ಬೆಳೆಯದ ಪೆದ್ದಿಯಂತೆ ಕಾಣಿಸಿದ್ದಾರೆ.

ನಮ್ಮೂರ ಮಂದಾರ ಹೂವೇಯಲ್ಲಿ ಪ್ರೇಮ ಎಂಟ್ರಿಯಾದ ಹಾಗೆ ‘ಕೇಳೇ ಕೋಗಿಲೆ ಇಂಪಾಗಲಾ’ ಮಾದರಿಯ ಹಾಡಿನಲ್ಲಿ ಪ್ರಿಯಾ‌ ಹೆಗಡೆ ಕಾಣಿಸುತ್ತಾರೆ. ಮಧ್ಯಂತರದ ಬಳಿಕ ಈಕೆ ಕೂಡ ಅಳುಮುಂಜಿ ಧಾರಾವಾಹಿಯ ನಾಯಕಿಯಾಗುತ್ತಾರೆ.

ನಾಯಕನ‌ ತಾಯಿಯಾಗಿ ಮಾನಸಿ ಸುಧೀರ್ ನಟಿಸಿದ್ದಾರೆ. ಅವರ ಹೇರ್ ಸ್ಟೈಲ್ ಕಾಮಿಡಿಯಾಗಿ‌ ಕಾಣುತ್ತದೆ. ಅವರದು ಸೇರಿದಂತೆ ಕಲಾವಿದರ ಸಂಭಾಷಣೆಗಳು ಪೌರಾಣಿಕ‌‌ ನಾಟಕದ ಡೈಲಾಗ್ ಗಳಂತೆ ವಾಚ್ಯವಾಗಿವೆ. ಮಾನಸಿಯವರ ಅಣ್ಣನಾಗಿ ಗಣೇಶ್ ರಾವ್ ಕೇಸರ್ಕರ್ ಇದ್ದಾರೆ‌. ಅವರು ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಲು ಶ್ರಮಿಸಿದ್ದಾರೆ.

ಅರವತ್ತು, ಎಂಬತ್ತರ ದಶಕದ ಸಾಂಸಾರಿಕ ಕಥೆಯಲ್ಲಿ ದೇವರ ಫ್ಯಾಂಟಸಿಯನ್ನು ತುರುಕಿರುವ ನಿರ್ದೇಶಕರು ನಗೆ ಪಾಟಲಿಗೆ ಈಡಾಗಿದ್ದಾರೆ. ದೃಶ್ಯಗಳನ್ನು ಒಂದು‌ ಮಟ್ಟಕ್ಕೆ ಸಭ್ಯವಾಗಿ ತೆಗೆದಿದ್ದಾರೆ ಎನ್ನುವ ಒಂದು ಪಾಸಿಟಿವ್ ಅಂಶ ಮಾತ್ರ ಚಿತ್ರದಲ್ಲಿದೆ. ಅದಕ್ಕಾಗಿ ಪೂರ್ತಿ ಚಿತ್ರ ಸಹ್ಯವಾಗಿಸಿಕೊಳ್ಳಲು ನಮ್ಮ ಪ್ರೇಕ್ಷಕರು ಮೂರ್ಖರಲ್ಲ ಎನ್ನುವ ಅರಿವು ಚಿತ್ರತಂಡಕ್ಕೆ ಇರಬೇಕಿತ್ತು.

Be the first to comment

Leave a Reply

Your email address will not be published. Required fields are marked *

Translate »
error: Content is protected !!