ಟಾಸ್

Movie Review: ಮನರಂಜನೆಯ ಟಾಪ್ ಕ್ಲಾಸ್ ಚಿತ್ರ ಟಾಸ್

ಚಿತ್ರ: ಟಾಸ್
ನಿರ್ದೇಶನ: ಅರ್ಜುನ್ ಕಾಪಿಕಾಡ್
ನಿರ್ಮಾಣ: ಯಶವಂತ್ ಕುಮಾರ್ ಮತ್ತು ಸಾಗರ್ ಪೂಜಾರಿ.
ತಾರಾಗಣ: ಅರ್ಜುನ್ ಕಾಪಿಕಾಡ್, ಸುತೇಜ್ ಶೆಟ್ಟಿ, ನವೀನ್ ಡಿ ಪಡೀಲ್ ಮೊದಲಾದವರು…
ರೇಟಿಂಗ್ : 3.5/5

ಒಬ್ಬ ನಾಟಕ ಕಲಾವಿದನ ಕುಟುಂಬದ ಕಥೆ ಇದು. ಆ ಕಲಾವಿದನ ಮಗನಿಗೆ ಶಾಲಾ‌ದಿನಗಳಲ್ಲಿ ಸಹಪಾಠಿಗಳಿಂದ ಗೌರವ ಇದ್ದಷ್ಟೇ ಅವಹೇಳನ ಕೂಡ ಇತ್ತು. ಮಗನಿಗಾಗಲೀ, ಗಂಡನಿಗಾಗಲಿ ಅವಮಾನವಾದರೆ ಕಲಾವಿದನ ಪತ್ನಿ ಭಾಗ್ಯ ಭುಗಿಲೆದ್ದು ಬಿಡುತ್ತಿದ್ದರು. ಅವಮಾನ ಮಾಡಿದವರ ವಿರುದ್ಧ ಕೈಎತ್ತಿ ಬಿಡುತ್ತಿದ್ದರು. ಆದರೆ ಹಾಗೆ ಕೈ ಎತ್ತುವ ಮೊದಲು ದೇವರ ಗೂಡಿನ ಬಳಿ ಇರುವ ನಾಣ್ಯ ತೆಗೆದು ಚಿಮ್ಮಿಸಿ ನೋಡುತ್ತಿದ್ದರು. ನಾಣ್ಯದ ಮುಖ ತನಗೆ ಅನುಗುಣವಾಗಿ ಬಿದ್ದರೆ ಹೊಡೆತ ಶುರುವಾಗುತ್ತಿತ್ತು. ತಾಯಿಯ ಈ‌ ಹವ್ಯಾಸವನ್ನು ‌ಅಭ್ಯಾಸ ಮಾಡಿಕೊಂಡಂಥ ಪುತ್ರನೇ ಶಿವ.

ಶಿವ ಬೆಳೆದು ದೊಡ್ಡವನಾದ ಮೇಲೆ ಕೂಡ ಟಾಸ್ ಹಾಕುವ ಅಭ್ಯಾಸ ಮುಂದುವರಿಸುತ್ತಾನೆ. ಹೀಗೆ ಟಾಸ್ ಹಾಕುವುದರಿಂದಲೇ ಆತ‌ನ ಆಯ್ಕೆಗಳು ನಡೆಯುತ್ತವೆ. ಆ ಆಯ್ಕೆಗಳು ಯಾವುವು? ಅದನ್ನು ಸಾಧಿಸಲು ಮಾಡುವ ಸಾಹಸಗಳೇನು ಎನ್ನುವುದೇ ಚಿತ್ರದ ಕಥೆ.

ನಾಟಕ ಕಲಾವಿದ ಆನಂದನಾಗಿ ತುಳು ರಂಗಭೂಮಿಯ ದಿಗ್ಗಜ‌ ನವೀನ್ ಡಿ ಪಡೀಲ್ ನಟಿಸಿದ್ದಾರೆ. ಅವರ ಪತ್ನಿ ಭಾಗ್ಯ ಪಾತ್ರವನ್ನು ಕೃತಿಶೆಟ್ಟಿ ನಿರ್ವಹಿಸಿದ್ದಾರೆ. ಟಾಸ್ ಚಿಮ್ಮಿಸುವ ಚಿತ್ರದ ನಾಯಕ ಶಿವನ ಪಾತ್ರವನ್ನು ಅರ್ಜುನ್ ಕಾಪಿಕಾಡ್ ನಿರ್ವಹಿಸುವ ಜೊತೆಗೆ ಈ ಚಿತ್ರದ ನಿರ್ದೇಶನವನ್ನು ಕೂಡ ಅವರೇ ಮಾಡಿದ್ದಾರೆ‌.

ಚಿತ್ರದಲ್ಲಿ ಶಿವನ ನಾಯಕಿಯಾಗಿ ಸ್ವರ್ಣಾ ಎನ್ನುವ ಪಾತ್ರವನ್ನು ನವನಟಿ ಸುತೇಜ್ ಶೆಟ್ಟಿ ಮಾಡಿದ್ದಾರೆ. ಚಿತ್ರದಲ್ಲಿ ಅವರದು ಕೇರಳದ ಯುವತಿಯ ಪಾತ್ರ. ಆಕೆಯ ಅಣ್ಣನಾಗಿ ಬಾಲಾಜಿ ಮನೋಹರ್ ಕಾಣಿಸಿದ್ದಾರೆ.‌ ಚಿತ್ರದ ಪ್ರಮುಖ ಖಳ ಪಾತ್ರದಲ್ಲಿ ಗರುಡ ರಾಮ್ ಅಬ್ಬರಿಸಿದ್ದಾರೆ.

ಟಾಸ್ ಚಿತ್ರಕ್ಕೆ ಕಥೆ, ಚಿತ್ರಕಥೆ ಸಂಭಾಷಣೆ ರಚಿಸಿರುವ ದೇವದಾಸ್ ಕಾಪಿಕಾಡ್ ಖುದ್ದಾಗಿ ಒಂದು ಪಾತ್ರವನ್ನು ಮಾಡಿದ್ದರೆ.‌ ಉಳಿದಂತೆ ತುಳು ರಂಗಭೂಮಿಯ ಜನಪ್ರಿಯ ಕಲಾವಿದರ ದಂಡೇ ಇಲ್ಲಿದೆ.

ಮಣಿಕಾಂತ್ ಕದ್ರಿ ಸಂಗೀತದಲ್ಲಿ ಹಾಡುಗಳು ಚೆನ್ನಾಗಿ ಮೂಡಿ ಬಂದಿವೆ. ಟಾಸ್ ಸಿನೆಮಾ ಬರೀ ನಾಣ್ಯ ಹಾರಿಸುವ ಕಥೆ ಅಷ್ಟೇ ಅಲ್ಲ. ಮನರಂಜನೆಯೊಂದಿಗೆ ಕೌಟುಂಬಿಕ ಭಾವನಾತ್ಮಕತೆಯನ್ನು ಸಾರುವಂಥ ಸಿನೆಮಾ.

Be the first to comment

Leave a Reply

Your email address will not be published. Required fields are marked *

Translate »
error: Content is protected !!