ಚಿತ್ರ: ಅನಿರೀಕ್ಷಿತ ಅತಿಥಿಗಳು
ನಿರ್ದೇಶನ: ಮನೋಜ್ ಅಣ್ಣಯ್ಯ
ನಿರ್ಮಾಣ: ವಿನೋದ್ ಬಸವರಾಜ್
ತಾರಾಗಣ: ವಿವೇಕ್ ಸಿಂಹ, ಮೈತ್ರಿ ಜಗ್ಗಿ ಮತ್ತು ಸಂಪ್ರತಿ ಆಳ್ವ ಮೊದಲಾದವರು….
ರೇಟಿಂಗ್ : 3.5/5
ಆಹ್ವಾನಿಸಿ ಬಂದ ಅತಿಥಿಗಳಿಗೆ ಗೌರವ ಹೆಚ್ಚು. ಕೆಲವೊಮ್ಮೆ ಅನಿರೀಕ್ಷಿತವಾಗಿ ಬಂದರೂ ಮರ್ಯಾದೆ ಸಿಗಬಲ್ಲದು. ಆದರೆ ವಂಚಿಸಿ ಬರುವವರಿಗೆ ಎದುರಾಗುವ ಪರಿಸ್ಥಿತಿ ಹೇಗಿರುತ್ತದೆ ಎನ್ನುವುದನ್ನು ಸಾರುವ ಚಿತ್ರವೇ ಅನಿರೀಕ್ಷಿತ ಅತಿಥಿಗಳು.
ಆತ ನಾಟಕೀಯವಾಗಿ ಪ್ರೀತಿಸುತ್ತಾನೆ. ಆದರೆ ಆತನ ಪ್ರೀತಿಯಲ್ಲಿ ಮಾತ್ರ ನಾಟಕವಿಲ್ಲ ಎಂದು ನಂಬುವವಳು ಗಿರಿಜಾ. ನಂಬಿಸುವ ಬಾರ್ ಸಪ್ಲೈರ್ ಚಕ್ರಿ. ಮತ್ತೊಂದು ಕಡೆ ಹೈಫೈ ಜೋಡಿಯೊಂದು ರೆಸಾರ್ಟ್ ಗೆ ಹೋಗಲು ಸಿದ್ಧತೆ ನಡೆಸುತ್ತದೆ. ಈ ಜೋಡಿಗಳು ಪರಸ್ಪರ ಸಂಧಿಸುತ್ತಾರ? ಇವರ ಮಧ್ಯೆ ಬರುವ ಅನಿರೀಕ್ಷಿತ ಅತಿಥಿಗಳು ಯಾರು? ಕುತೂಹಲಕಾರಿ ಘಟನೆಗಳೇನು? ಇವೆಲ್ಲಕ್ಕೂ ಚಿತ್ರದಲ್ಲಿ ಉತ್ತರವಿದೆ.
ಚಕ್ರಿ ಎನ್ನುವ ಚಕ್ರವರ್ತಿಯಾಗಿ ವೃತ್ತಿಯಲ್ಲಿ ಬಾರ್ ಸಪ್ಲೈರ್ ಆಗಿ ಕಾಣಿಸಿಕೊಂಡಿರುವವರು ಮೈತ್ರಿ ಜಗ್ಗಿ. ಚಕ್ರಿಯ ಪ್ರೇಯಸಿಯಾಗಿ ಕೋಳಿಯಂಗಡಿ ಗಿರಿಜಾ ಪಾತ್ರದಲ್ಲಿ ನಟಿಸಿರುವವರು ಸಂಪ್ರತಿ ಆಳ್ವ. ಹೈಫೈ ಜೋಡಿಯಾಗಿ ರೆಸಾರ್ಟ್ ಗೆ ಹೋಗಲು ಸಿದ್ಧವಾಗುವ ವಿಭಿನ್ ಮತ್ತು ತಶ್ವೀ ಎನ್ನುವ ಪಾತ್ರಗಳಲ್ಲಿ ಶ್ರೀದತ್ತ ಮತ್ತು ಹರಿತಾ ಶ್ರೀ ಕಾಣಿಸಿದ್ದಾರೆ. ಆದರೆ ಇವೆಲ್ಲವನ್ನು ಮೀರುವ ಪಾತ್ರದಲ್ಲಿ ನಟಿಸಿರುವ ವಿವೇಕ್ ಸಿಂಹ ಚಿತ್ರ ನೋಡಿ ಮುಗಿದ ಬಳಿಕ ಕೂಡ ಕಾಡುತ್ತಲೇ ಇರುತ್ತಾರೆ.
ಇಂಥದೊಂದು ಕಥೆ ಆಯ್ದುಕೊಂಡು ದೀರ್ಘಾವಧಿ ಇದ್ದರೂ ತನ್ನದೇ ಶೈಲಿಯಲ್ಲಿ ನಿರ್ದೇಶಿಸಿರುವ ಮನೋಜ್ ಅಣ್ಣಯ್ಯ ನಿಜಕ್ಕೂ ಅಭಿನಂದನಾರ್ಹರು. ಕಥೆಯಲ್ಲಿ ಸೇರಿಕೊಳ್ಳುವ ಅತಿಥಿ ಪಾತ್ರಗಳಿಗೆ ಅನುಗುಣವಾಗಿ ಕ್ಯಾಮರಾ ಕೋನವನ್ನು ಬದಲಾಯಿಸಿ ಚಿತ್ರೀಕರಿಸಿರುವುದು ಪೂರಕವಾಗಿ ಮೂಡಿಬಂದಿದೆ.
ಚಿತ್ರದಲ್ಲಿ ಕ್ರೌರ್ಯವಿದೆ. ಆದರೆ ಅದರಾಚೆಗೆ ಕಾರುಣ್ಯ ಇದೆ. ನೊಂದವರ ಪರ ಧ್ವನಿ ಇದೆ. ನೋಯಲಿರುವವರಿಗೆ ಎಚ್ಚರಿಕೆ ಇದೆ. ಇದನ್ನೆಲ್ಲ ನೀಡುವ ಪ್ರಯತ್ನದಲ್ಲಿ ಚಿತ್ರಕ್ಕೆ ವಯಸ್ಕರ ಚಿತ್ರವೆನ್ನುವ ಹಣೆಪಟ್ಟಿ ಬಿದ್ದಿದೆ. ಪ್ರೇಕ್ಷಕರು ಯಾರೇ ಇರಲಿ. ಸಂದೇಶ ಅವರ ಮೂಲಕ ತಲುಪಬೇಕಾದವರನ್ನು ತಲುಪುವುದು ಮುಖ್ಯ. ವಂಚಿಸಿ ಬರುವ ಅತಿಥಿಗಳಿಗೆ ಆಗುವ ಅಧೋಗತಿ ಹೇಗಿರುತ್ತದೆ ಎನ್ನುವುದನ್ನು ಚಿತ್ರ ತೋರಿಸಿಕೊಡುತ್ತದೆ.





Be the first to comment