ವಿಜಯ ರಾಘವೇಂದ್ರ ಅಭಿನಯದ ವಿಭಿನ್ನ ಕಥಾಹಂದರದ ಸಿನಿಮಾ ‘ರುದ್ರಾಭಿಷೇಕಂ’ ಸಿನಿಮಾ ಸೆಪ್ಟೆಂಬರ್ 25ರಂದು ಪ್ರೇಕ್ಷಕರ ಮುಂದೆ ಬರಲಿದೆ.
ವೀರಗಾಸೆ ಎಂಬ ನಾಡಿನ ಸಾಂಪ್ರದಾಯಿಕ ಕಲೆಯನ್ನು ಕೇಂದ್ರವಾಗಿಟ್ಟುಕೊಂಡು, ವೀರಭದ್ರ ದೇವರ ನಂಬಿಕೆ, ಪರಂಪರೆ ಹಾಗೂ ಒಂದು ಕುಟುಂಬದ ಹಿನ್ನೆಲೆಯನ್ನು ಒಳಗೊಂಡಿರುವ ‘ರುದ್ರಾಭಿಷೇಕಂ’ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ.
ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ, ನಿರ್ದೇಶನದ ಜವಾಬ್ದಾರಿಯನ್ನು ವಸಂತ್ ಕುಮಾರ್ ಮಾಡಿದ್ದಾರೆ. ವಿಜಯಪುರದ ಒಂಬತ್ತು ಮಂದಿ ರೈತರು ಒಟ್ಟಾಗಿ ಬಂಡವಾಳ ಹೂಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಚಿತ್ರದಲ್ಲಿ ವಿಜಯ ರಾಘವೇಂದ್ರ ಅವರು ವೀರಗಾಸೆ ಕಲಾವಿದನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ತಂದೆ ಮತ್ತು ಮಗ—ಎರಡು ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ನಾಯಕಿ ಪ್ರಿಯಾಂಕ ತಿಮ್ಮೇಶ್ ಅವರು ಗ್ರಾಮೀಣ ಹಿನ್ನೆಲೆಯ ಹುಡುಗಿ ಹಾಗೂ ನಗರ ಜೀವನದ ಹುಡುಗಿ—ಹೀಗೆ ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಕಳೆದುಹೋಗುತ್ತಿರುವ ಜನಪದ ಕಲೆಯಾದ ವೀರಗಾಸೆಯನ್ನು ಹೆಚ್ಚಿನ ಜನರಿಗೆ ಪರಿಚಯಿಸುವ ಉದ್ದೇಶದಿಂದ ಸಿನಿಮಾ ಮಾಡಲಾಗಿದೆ. ಪ್ರೇಕ್ಷಕರಿಗೆ ಹೊಸ ರೀತಿಯ ಕಥೆಯನ್ನು ನೀಡುವ ಪ್ರಯತ್ನ ಮಾಡಿರುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.
ಹಿಂದಿನ ತಲೆಮಾರಿನ ಘಟನೆಗಳು ಇಂದಿನ ಕಾಲದ ವ್ಯಕ್ತಿಯ ಜೀವನದೊಂದಿಗೆ ಹೇಗೆ ಬೆಸೆದುಕೊಳ್ಳುತ್ತವೆ ಎಂಬುದನ್ನು ಸಿನಿಮಾ ತೋರಿಸುತ್ತದೆ ಎಂದು ವಿಜಯ ರಾಘವೇಂದ್ರ ತಿಳಿಸಿದ್ದಾರೆ.
ಚಿತ್ರದಲ್ಲಿ ಬಲ ರಾಜವಾಡಿ, ಮನು, ಸನತ್, ಬುಲೆಟ್ ವಿನು, ಶೇಷಾಚಲ, ಮಮತಾ ತುರುವೇಕೆರೆ, ನವನಿತಾ ಶೆಟ್ಟಿ ಹಾಗೂ ಮಂಜುಳಾ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ ಚಿತ್ರವನ್ನು ದೇವನಹಳ್ಳಿ ಸುತ್ತಮುತ್ತಲ ಪ್ರದೇಶಗಳ ಜೊತೆಗೆ ಕರಾವಳಿಯ ಗೋಕರ್ಣ, ಹೊನ್ನಾವರ, ಕುಮಟಾ ಹಾಗೂ ಅಬ್ಬಕ್ಕ ಫೋರ್ಟ್ ಸೇರಿದಂತೆ ಹಲವು ವಿಭಿನ್ನ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ.
ಫ್ಯಾನ್ ಇಂಡಿಯಾ ಕ್ರಿಯೇಶನ್ಸ್ ಬ್ಯಾನರ್‌ನ ಮೊದಲ ಚಿತ್ರವಾಗಿರುವ ‘ರುದ್ರಾಭಿಷೇಕಂ’ಗೆ ಎನ್. ಜಯರಾಮ್, ಮಂಜುನಾಥ ಕೆ.ಎನ್, ಕೆ. ವೆಂಕಟೇಶ್, ಬಿ. ಚಿದಾನಂದ ಮೂರ್ತಿ, ಸುರೇಶ್ ಬಾಬು, ಬಿ.ಕೆ. ಅಶ್ವಥ್ ನಾರಾಯಣ, ಶಿವಕುಮಾರ್, ಕೆ.ಎಸ್. ರವಿಕುಮಾರ್ ಹಾಗೂ ಕುಸುಮ ವಸಂತ್ ಕುಮಾರ್ ಸೇರಿದಂತೆ ಒಂಬತ್ತು ಮಂದಿ ನಿರ್ಮಾಪಕರು ಬಂಡವಾಳ ಹೂಡಿದ್ದಾರೆ.
ಚಿತ್ರಕ್ಕೆ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಎರಡು ಪ್ರಮುಖ ಆಕ್ಷನ್ ದೃಶ್ಯಗಳನ್ನು ಸಂಯೋಜಿಸಿದ್ದಾರೆ. ವಿ. ಮನೋಹರ್ ಅವರ ಸಂಗೀತ, ಮುತ್ತುರಾಜ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.
ಚಿತ್ರದ ವಿತರಣೆಯ ಜವಾಬ್ದಾರಿಯನ್ನು ವಿಜಯ್ ಸಿನಿಮಾಸ್‌ನ ವಿಜಯಕುಮಾರ್ ವಹಿಸಿಕೊಂಡಿದ್ದು, ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಯೋಜನೆ ಇದೆ ಎಂದು ತಿಳಿಸಿದ್ದಾರೆ.
—-





Be the first to comment