ಚಿತ್ರ: ಸಿಟಿ ಲೈಟ್ಸ್
ನಿರ್ದೇಶನ: ದುನಿಯಾ ವಿಜಯ್
ನಿರ್ಮಾಣ: ವಿಕ್ರಮ್ ಆರ್ಯ ಮತ್ತು ದುನಿಯಾ ವಿಜಯ್
ತಾರಾಗಣ: ವಿನಯ್ ರಾಜ್ ಕುಮಾರ್, ಮೋನಿಷಾ ವಿಜಯ್ ಕುಮಾರ್, ಉಮಾಶ್ರೀ ಮೊದಲಾದವರು…
ರೇಟಿಂಗ್ : 4/5
ಒಂದು ಕಡೆ ಬೆಂಗಳೂರಿನ ಕತ್ತಲೆಯ ಲೋಕ. ರಾತ್ರಿಗಳಲ್ಲಿ ಬೆಂಗಳೂರು ನಗರದ ಅಂಡರ್ ಪಾಸ್ ಗಳನ್ನು ಕೇಂದ್ರೀಕರಿಸಿ ನಡೆಯುವ ದಂಧೆಗಳು. ಅದರಲ್ಲಿ ವೇಶ್ಯಾವಾಟಿಕೆ, ಭಿಕ್ಷಾಟನೆ ಎಲ್ಲವೂ ಇವೆ. ಅವರ ನಡುವೆ ಇರುವ ಅಲಕ್ ನಿರಂಜನ್ ಎನ್ನುವ ವ್ಯಕ್ತಿಯನ್ನು ಹುಡುಕಿಕೊಂಡು ಆತನ ಹಳ್ಳಿಯ ಸ್ನೇಹಿತ ಬರುತ್ತಾನೆ. ಆತನ ಹೆಸರು ಶಿವ. ತಂದೆ, ತಾಯಿ ಇಲ್ಲದೆ, ಸಂಬಂಧಿಕರ ಚುಚ್ಚು ಮಾತುಗಳಿಗೆ ನೊಂದು ಊರು ಬಿಟ್ಟವನು. ಬೆಂಗಳೂರು ಸೇರಿಕೊಂಡ ಕೆಲವೇ ದಿನಗಳಲ್ಲಿ ಆ ಘಟನೆ ನಡೆಯುತ್ತದೆ. ಸಕಲೇಶಪುರದಿಂದ ಊರು ಬಿಟ್ಟು ಬಂದ ಯುವತಿಯೊಬ್ಬಳ ಪರಿಚಯವಾಗುತ್ತದೆ. ತನಗೂ ಮುನ್ನ ಬೆಂಗಳೂರಿಗೆ ಓಡಿ ಬಂದ ತಮ್ಮನನ್ನು ಹುಡುಕಿಕೊಂಡು ಈ ಯುವತಿ ಬಂದಿರುತ್ತಾಳೆ. ಬಂದವಳು ನೇರವಾಗಿ ವೇಶ್ಯಾವಾಟಿಕೆಯ ಅಡ್ಡ ಸೇರಿರುತ್ತಾಳೆ. ಆ ಕೂಪದಿಂದ ಅವಳನ್ನು ರಕ್ಷಿಸುವ ಶಿವನ ಪ್ರಯತ್ನ ಯಶಸ್ವಿಯಾಗುತ್ತಾ? ಆಕೆಗೆ ಕಳೆದು ಹೋದ ತಮ್ಮ ಸಿಗುತ್ತಾನ? ಇಂಥ ಪ್ರಶ್ನೆಗಳಿಗೆ ಸಿಟಿ ಲೈಟ್ಸ್ ಚಿತ್ರದಲ್ಲಿ ಉತ್ತರಗಳಿವೆ.
ಶಿವನಾಗಿ ವಿನಯ್ ರಾಜ್ ಕುಮಾರ್ ನಟಿಸಿದ್ದಾರೆ. ಹಳ್ಳಿ ಹುಡುಗನ ಅನಾಥ ಚಿಂತೆಗಳು, ಬೆಂಗಳೂರು ಸೇರಿ ಹೋಟೆಲ್ ಸಪ್ಲೈರ್ ಕೆಲಸ ಮಾಡುವುದು ಮೊದಲಾದ ದೃಶ್ಯಗಳಲ್ಲಿ ವಿನಯ್ ನೀಡಿದ ನಟನೆ ನೈಜವಾಗಿದೆ. ಹಳ್ಳಿಯಿಂದ ಬರುವ ಹೆಣ್ಣುಮಗಳ ಪಾತ್ರವನ್ನು ತಮ್ಮ ಪುತ್ರಿಯಿಂದಲೇ ಮಾಡಿಸಿದ್ದಾರೆ ನಿರ್ದೇಶಕ ದುನಿಯಾ ವಿಜಯ್. ಮೊದಲ ಚಿತ್ರದಲ್ಲೇ ಮೋನಿಷಾ ವಿಜಯ್ ಕುಮಾರ್ ಆಕರ್ಷಕ ನಟನೆ ನೀಡಿದ್ದಾರೆ. ಕೇವಲ ಲವ್ ಸ್ಟೋರಿಗೆ ಸೀಮಿತಗೊಳ್ಳದೆ, ತಮ್ಮನ ಸೆಂಟಿಮೆಂಟ್ ಕೂಡ ಪ್ರದರ್ಶಿಸುವ ಅವಕಾಶ ಕೂಡ ಮೋನಿಷಾಗೆ ಲಭಿಸಿದೆ. ಬಿ.ಎಮ್ ಗಿರಿರಾಜ್ ಅವರು ಸಲಿಂಗಕಾಮಿಯ ಪಾತ್ರವನ್ನು ನಿಭಾಯಿಸಿದ್ದಾರೆ. ಉಮಾಶ್ರೀ ಅವರಿಗೂ ಒಂದು ಪ್ರಧಾನ ಪಾತ್ರವಿತ್ತು. ಸಂಪತ್ , ಗೋಪಾಲಕೃಷ್ಣ ದೇಶಪಾಂಡೆ ಮೊದಲಾದ ಜನಪ್ರಿಯ ಕಲಾವಿದರನ್ನು ಒಂದೊಂದು ದೃಶ್ಯದಲ್ಲಿ ಬಳಸಿಕೊಂಡ ಹಾಗೆ, ಒಂದಷ್ಟು ಹೊಸ ಕಲಾವಿದರನ್ನು ಪ್ರಮುಖ ಪಾತ್ರಗಳಲ್ಲಿ ತೋರಿಸಲಾಗಿದೆ.
ಚರಣ್ ರಾಜ್ ಸಂಗೀತದಲ್ಲಿನ ಹಾಡುಗಳು ಆಕರ್ಷಕವಾಗಿವೆ. ಪ್ರೇಮಗೀತೆ ಸೇರಿದಂತೆ ಹಿನ್ನೆಲೆ ಸಂಗೀತದಲ್ಲಿಯೂ ತಮ್ಮ ಮಾಂತ್ರಿಕತೆ ಪ್ರದರ್ಶಿಸಿದ್ದಾರೆ. ಹತ್ತು ಹಲವು ಎಮೋಶನ್ಸ್ ತುಂಬಿರುವ ಸಿಟಿಲೈಟ್ಸ್ ನಗರದಲ್ಲಿ ಅಡಗಿದ ಭಾವನೆಗಳ ಮೇಲೆ ಬೆಳಕು ಚೆಲ್ಲುವಂತೆ ಮೂಡಿಬಂದಿದೆ.





Be the first to comment