ಕರಾವಳಿ ಭಾಗದ ಉತ್ಸಾಹಿಗಳ ‘ ತರಂಗಾಂತರಂಗ ‘ ಟೀಸರ್ ಬಿಡುಗಡೆ ಆಗಿ ಪ್ರೇಕ್ಷಕರ ಗಮನ ಸೆಳೆದಿದೆ. ಕರಾವಳಿ ಭಾಗದ ಮಂದಿ ಸೇರಿಕೊಂಡು ರಾಜ್ಯದ ಎಲ್ಲ ಭಾಗದವರನ್ನು ಸೇರಿಸಿಕೊಂಡು ಈ ಚಿತ್ರ ಮಾಡಿದ್ದಾರೆ.
“ಕರಾವಳಿಯ ಕಡಲಲ್ಲಿ ತರಂಗಗಳು ಸಹಜ. ಅದೇ ರೀತಿ ಅಲ್ಲಿನ ಆಸ್ತಿಕ ಜನಗಳ ನಂಬಿಕೆಯಲ್ಲಿ ಜನ್ಮಾಂತರದ ಘಟನೆಗಳು ತರಂಗಗಳಾಗಿ ಕಾಡುತ್ತಿರುತ್ತವೆ. ಅದರಲ್ಲೂ ನಾಗ ದೇವರನ್ನು ನಂಬಿ ಹೇಳುವ ಹರಕೆ ಸಂದಾಯವಾಗದೇ ಹೋದರೆ ಯುಗಾಂತರಗಳಲ್ಲಿ ಹೇಗೆ ಕಾಡುತ್ತದೆ ಎನ್ನುವುದೇ ಈ ಚಿತ್ರದ ಸಾರಾಂಶ’ ಎಂದು ನಿರ್ದೇಶಕ ಶ್ರೀಶ ಹೇಳಿದ್ದಾರೆ.
ಈ ಚಿತ್ರದಲ್ಲಿ ನಿರ್ದೇಶಕರೇ ಸ್ವತಃ ನಾಯಕರಾಗಿಯೂ ಕಾಣಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಗ್ರಾಫಿಕ್ ಡಿಸೈನರ್ ಆಗಿದ್ದ ಶ್ರೀಶ ಮೊದಲ ಬಾರಿಗೆ ನಿರ್ದೇಶಿಸಿರುವ ಚಿತ್ರ ಇದು.
25 ಲಕ್ಷ ರು.ವೆಚ್ಚದಲ್ಲಿ ಚಿತ್ರ ಮಾಡುವುದಾಗಿ ಆರಂಭಿಸಿ ಆ ಮೊತ್ತವನ್ನು ಚಿತ್ರದ ಸಂಗೀತಕ್ಕೆ ವಿನಿಯೋಗಿಸಿದ್ದಾರೆ. 7 ವರ್ಷಗಳ ಪರಿಶ್ರಮದಲ್ಲಿ ಚಿತ್ರ ಈ ಸಿದ್ಧವಾಗಿದೆ.
ಚಿತ್ರದಲ್ಲಿ ನಟಿಸಿರುವ ದಿನೇಶ್ ಮಂಗಳೂರು ಮತ್ತು ರಾಕೇಶ್ ಶೆಟ್ಟಿ ಈಗ ಉಳಿದಿಲ್ಲ. ಚಿತ್ರ ಬಿಡುಗಡೆಗೆ ತಡವಾದರೂ ಈ ಸಬ್ಜೆಕ್ಟ್ ಹೊಸದಾಗಿಯೇ ಇರಲಿದೆ ಎಂದು ಶ್ರೀಶ ಭರವಸೆ ವ್ಯಕ್ತಪಡಿಸಿದ್ದಾರೆ.

ಬೈಂದೂರಿನ ಕಾಡುಗಳಲ್ಲಿ ಚಿತ್ರೀಕರಣ ಮಾಡಿದ್ದೇನೆ. ದಿನೇಶ್ ಮಂಗಳೂರು ಹಾಸ್ಯ ಪಾತ್ರ ಮಾಡಿದ್ದಾರೆ. ಅವರಿಗೆ ಸುಜಿತ್ ಸುಪ್ರಭ ಡಬ್ ಮಾಡಿದ್ದಾರೆ. ರಾಕೇಶ್ ಪೂಜಾರಿ ಅವರಿಗೆ ಪ್ರವೀಣ್ ಜೈನ್ ಕಂಠದಾನ ನೀಡಿದ್ದಾರೆ. ಕಥೆಯಲ್ಲಿ ಒಬ್ಬ ಟ್ರಾವಲರ್ ನ ಜೀವನ ಚರಿತ್ರೆಯನ್ನು ಹೇಳಲಾಗುತ್ತದೆ. 1980 ರ ಕಾಲಘಟ್ಟದಿಂದ ಇದುವರೆಗಿನ ಸಂದರ್ಭದ ದೃಶ್ಯಗಳಿವೆ. ಹೊಸದಾಗಿ ಭೇಟಿ ನೀಡುವ ಜಾಗಗಳು ಹಳೆಯ ಜನ್ಮದ ನೆನಪನ್ನು ಮರುಕಳಿಸುವಂತೆ ಮಾಡಲು ಸಾಧ್ಯವೇ ಎನ್ನುವ ಬಗ್ಗೆ ಇಲ್ಲಿ ಅವಲೋಕನ ಇದೆ ಎಂದು ಶ್ರೀಶ ಹೇಳುತ್ತಾರೆ.
ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಚರಿಕಾ ಆರ್ ಮೂರ್ತಿ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ತರಂಗಾಂತರಂಗದಲ್ಲಿ ಪ್ರಧಾನ ಪಾತ್ರ ಪ್ರಮೋದ್ ಶೆಟ್ಟಿ ಮಾಡಿದ್ದಾರೆ. “ಎಲ್ಲ ಹೊಸ ನಿರ್ಮಾಪಕರ ಚಿತ್ರದಲ್ಲಿ ನಟಿಸುವಾಗಲೂ ನಾನು ಅವರಲ್ಲೊಂದು ಪ್ರಶ್ನೆ ಕೇಳುತ್ತೇನೆ. ಚಿತ್ರಕ್ಕಾಗಿ ನೀವು ಹಾಕುವ ದುಡ್ಡಿನಿಂದ ನಿಮ್ಮ ಬದುಕು ಕಷ್ವವಾಗುತ್ತಾ?” ಎಂದು. ಕಷ್ಟವಾಗುವುದಾದರೆ ನಿರ್ಮಾಣ ಮಾಡದೇ ಇರುವುದು ಒಳಿತು ಎಂದು ಹೇಳುತ್ತೇನೆ. ಶ್ರೀಶ ರಂಗಭೂಮಿಯಿಂದ ಬಂದಿದ್ದಾರೆ. ಆದರೆ ಸಿನೆಮಾ ಅವರಿಗೆ ಹೊಸ ಅನುಭವ. ಪ್ರಾಮಾಣಿಕ ಪ್ರಯತ್ನವನ್ನಂತೂ ಮಾಡಿದ್ದಾರೆ ಎಂದಿದ್ದಾರೆ ಪ್ರಮೋದ್ ಶೆಟ್ಟಿ.
ಚಿತ್ರದ ಟೀಸರ್ ರಿಲೀಸ್ ಮಾಡಿದ ನಿರ್ದೇಶಕರ ಸಂಘದ ಅಧ್ಯಕ್ಷ ಎನ್.ಆರ್.ಕೆ ವಿಶ್ವನಾಥ್, “ತರಂಗಾಂತರಂಗ” ಎನ್ನುವ ಪದವನ್ನು ಬೆಳಕು ಮತ್ತು ಧ್ವನಿಯ ವಿಚಾರದಲ್ಲಿ ಬಳಸುತ್ತೇವೆ. ಆದರೆ ಚಿತ್ರದಲ್ಲಿ ಭಾವನೆ ಮತ್ತು ಬದುಕಿನ ತರಂಗದ ಕಥೆ ಹೇಳಿರುವಂತಿದೆ. ಹೊಸಬರ ಚಿತ್ರಗಳಿಗೆ ಚಿತ್ರಮಂದಿರ ದೊರಕುವುದು ಕಷ್ಟವಾಗುತ್ತಿದೆ. ಆದರೆ ಶ್ರೀಶ ಅವರ ತಂಡಕ್ಕೆ ಅಂಥ ಸಂಕಷ್ಟ ಎದುರಾಗದಿರಲಿ ಎಂದು ಹಾರೈಸಿದರು.
ಸೋಶಿಯಲ್ ಮೀಡಿಯಾದಲ್ಲಿ ಹೆಸರಾಗಿರುವ ವಿನೋದ್ ಆನಂದ್ ತಾವು ಈ ಚಿತ್ರದಲ್ಲಿ ದ್ವಿಪಾತ್ರ ಮಾಡಿರುವುದಾಗಿ ಹೇಳಿದರು. ಯುವ ನಟ ಶರತ್ ಶೆಟ್ಟಿ ತಮ್ಮದು ರಾಕೇಶ್ ಪೂಜಾರಿ ಜತೆಗಿರುವ ಪಾತ್ರ ಎಂದರು. ಮತ್ತೋರ್ವ ನಟ ನಾರಾಯಣ್ ನಾಯಕ್ ನಾನು ಮೂಲತಃ ಭಟ್ಕಳದವನು. ಡ್ರೈವಿಂಗ್ ಜೊತೆ ನಟನೆಯನ್ನೂ ಮಾಡುತ್ತಾ ಬಂದಿರುವುದಾಗಿ ತಿಳಿಸಿದರು.
ಚಿತ್ರದ ಸಂಗೀತ ನಿರ್ದೇಶಕ ಪ್ರವೀಣ್ ಶೆಟ್ಟಿ ಮಾತನಾಡಿ, ಕಿರುಚಿತ್ರಗಳಿಗೆ ಸಂಗೀತ ನೀಡಿದ ಅನುಭವವಿತ್ತು. ಇದು ನಮ್ಮೂರ ಕಡೆಯ ಕಥೆ ಎನ್ನುವುದು ಗೊತ್ತಿತ್ತು. ಅದೇ ಉತ್ಸಾಹದಲ್ಲಿ ಸಂಗೀತ ಸಂಯೋಜಿಸಿದ್ದೇನೆ ಎಂದರು.
ಸಹ ನಿರ್ಮಾಪಕ ರಂಜಿತ್ ತಾವು ಶ್ರೀಶನ ಸಹಪಾಠಿಯಾಗಿದ್ದು, ಅದೇ ಸೆಂಟಿಮೆಂಟ್ ನಲ್ಲೇ ಸಹ ನಿರ್ಮಾಪಕನಾದೆ ಎಂದರು.
ಶ್ರೀಶ ಅವರ ಪತ್ನಿ ಅನುರಾಧ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಚಿತ್ರದ ಛಾಯಾಗ್ರಾಹಕ ವೆಂಕಟೇಶ್ ಆರ್ ಉಪಸ್ಥಿತರಿದ್ದರು.





Be the first to comment