ಶೇರ್

Movie Review: ಸರಣಿ ಕೊಲೆಗಳ ವಿರುದ್ಧ ಒಂಟಿ ‘ಶೇರ್’ ವಾರ್

ಚಿತ್ರ: ಶೇರ್
ನಿರ್ದೇಶನ: ಪ್ರಸಿದ್ಧ್
ನಿರ್ಮಾಪಕ: ಸುದರ್ಶನ್ ಸುಂದರ್ ರಾಜ್
ತಾರಾಗಣ: ಕಿರಣ್ ರಾಜ್, ಸುರೇಖಾ, ತನಿಷಾ ಕುಪ್ಪಂಡ ಮೊದಲಾದವರು…
ರೇಟಿಂಗ್: 3.5/5

ಆಕೆ ಸುಂದರವಾದ ಯುವತಿ. ಆದರೆ ಹೂ ಮಾರುವ ವಾಹನದೊಳಗೆ ಅಡಗಿಕೊಂಡು ಬೇರೊಂದು ಊರು ಸೇರುತ್ತಾಳೆ. ಅಲ್ಲಿ ಮಾರುಕಟ್ಟೆಯಲ್ಲಿ ಕೂಲಿ ಮಾಡುವ ಒಂದಷ್ಟು ಪೋಲಿ ಹುಡುಗರ ಕಣ್ಣಿಗೆ ಬೀಳುತ್ತಾಳೆ. ಬೆನ್ನಟ್ಟಿ ಬಂದ ಅವರ ಮಧ್ಯದಿಂದ ಆ ಊರಿನ ಶಿವು ಮತ್ತು ಅವನ ಬಳಗ ಆಕೆಯನ್ನು ಪಾರು ಮಾಡುತ್ತದೆ. ತನ್ನನ್ನು ಭುವನ ಎಂದು ಪರಿಚಯಿಸಿಕೊಳ್ಳುವ ಆ ಹುಡುಗಿ ತಾನು ಹೊನ್ನಾವರದಿಂದ ಬಂದಿದ್ದಾಗಿ ಹೇಳುತ್ತಾಳೆ.

ಹೊನ್ನಾವರದಲ್ಲಿ ಪೇಯಿಂಗ್ ಗೆಸ್ಟ್ ಆಗಿದ್ದಾಗ ಮಹಿಳಾ ವಾರ್ಡನ್ ತನ್ನ ಮೇಲೆ ಅತ್ಯಾಚಾರಕ್ಕೆ ಬಂದಿದ್ದಾಗಿ ಹೇಳುತ್ತಾಳೆ. ಹಾಗಾಗಿ ಅಲ್ಲಿಂದ ತಪ್ಪಿಸಿಕೊಂಡು ಈ ಊರಿಗೆ ಬಂದಿದ್ದೇನೆ ಎನ್ನುತ್ತಾಳೆ. ಭುವನ ಹೇಳುವುದು ಸತ್ಯ ಎಂದು ನಂಬಿದ ಶಿವು ಮತ್ತು ಬಳಗಕ್ಕೆ ಮುಂದೆ ಎದುರಾಗುವ ಕಷ್ಟಗಳೇನು? ಆ ಊರಿನಲ್ಲಿ ಸರಣಿ ಸಾವುಗಳು ಆಗುವುದೇಕೆ? ಇವೆಲ್ಲದರ ಉತ್ತರವನ್ನು ಶೇರ್ ಚಿತ್ರದಲ್ಲಿ ತೋರಿಸಲಾಗಿದೆ.

ಅನಾಥನಾಗಿದ್ದರೂ ಒಂದು ಊರಿನ‌ ಹೊಣೆಯನ್ನೇ ಹೊತ್ತುಕೊಳ್ಳುವ ಯುವಕ ಶಿವು ಪಾತ್ರದಲ್ಲಿ ಕಿರಣ್ ರಾಜ್ ನಟಿಸಿದ್ದಾರೆ. ಆ್ಯಕ್ಷನ್ ದೃಶ್ಯಗಳಲ್ಲಿ ಕಿರಣ್ ರಾಜ್ ಸಕತ್ತಾಗಿ ಮಿಂಚಿದ್ದಾರೆ. ಶಿವುನನ್ನು ಹುಡುಕಿಕೊಂಡು ಬರುವ ಭುವನಳಾಗಿ ಸುರೇಖಾ ನಟಿಸಿದ್ದಾರೆ. ಭುವನಳನ್ನು ಅಟ್ಟಿಸಿಕೊಂಡು ಬಂದ ಪೋಲಿ ಹುಡುಗರ ನಾಯಕ ಗಿಲ್ಲಿಯಾಗಿ ಕ್ರಿಷ್ ಅಭಿನಯಿಸಿದ್ದಾರೆ. ಅವರು ತಮ್ಮ ನಟನೆ ಮತ್ತು ನೋಟದಲ್ಲಿ ದುನಿಯಾ ಚಿತ್ರದಲ್ಲಿ ಎಂಟ್ರಿಕೊಟ್ಟ ಲೂಸ್ ಮಾದ ಯೋಗಿಯನ್ನು ನೆನಪಿಸುತ್ತಾರೆ. ಗಿಲ್ಲಿಯನ್ನು ತನ್ನ ಕುಕೃತ್ಯಗಳಿಗೆ ಬಳಸುವ ದುರುಳನಾಗಿ ಶೋಭರಾಜ್ ಕಾಣಿಸಿಕೊಂಡಿದ್ದಾರೆ.

ಶಿವು ಸೇರಿದಂತೆ ಒಂದಷ್ಟು ಅನಾಥರಿಗೆ ಆಶ್ರಯದಾತನಾಗಿರುವ ಆ ಊರಿನ ಅಧ್ಯಕ್ಷನ‌ ಪಾತ್ರವನ್ನು ಬಲರಾಜ್ವಾಡಿ ನಿಭಾಯಿಸಿದ್ದಾರೆ. ಹಳ್ಳಿಯಲ್ಲಿ ನಡೆಯುವ ಸರಣಿ ಕೊಲೆಗಳ ಬಗ್ಗೆ ತನಿಖೆ ನಡೆಸಲು ಬರುವ ಹೊಸ‌ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ತನಿಷಾ ಕುಪ್ಪಂಡ ಕಾಣಿಸಿಕೊಂಡಿದ್ದಾರೆ. ಅವರಿಗೆ ಕೂಡ ಆ್ಯಕ್ಷನ್ ದೃಶ್ಯಗಳು ಕೂಡ ಇವೆ. ಯಶ್ ಶೆಟ್ಟಿ ಒಂದು ಪ್ರಧಾನ ಪಾತ್ರವನ್ನು ಮಾಡಿದ್ದಾರೆ. ಅವರಿಗೆ ಕಡಕ್ ಸಂಭಾಷಣೆಗಳು ಇರುವುದು ವಿಶೇಷ. ಆ್ಯಕ್ಷನ್ ಚಿತ್ರವಾದರೂ ಎಲ್ಲರ ಮನಗೆಲ್ಲುವಂತೆ ನಿರ್ದೇಶಿಸುವಲ್ಲಿ ಪ್ರಸಿದ್ಧ್ ಯಶಸ್ವಿಯಾಗಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!