ಚಿತ್ರ: ನೀ ನಂಗೆ ಅಲ್ಲವಾ
ನಿರ್ದೇಶನ: ಮನೋಜ್ ಪಿ.ನಡುಲಮನೆ
ನಿರ್ಮಾಣ: ಜಯರಾಮ್ ದೇವಸಮುದ್ರ
ತಾರಾಗಣ: ರಾಹುಲ್ ಆರ್ಕಾಟ್, ಕಾಶಿಮಾ ರಫಿ, ಗಿರೀಶ್ ಶಿವಣ್ಣ ಮೊದಲಾದವರು..
ರೇಟಿಂಗ್ 3.5/5
ಚಿತ್ರದ ಕಥಾ ನಾಯಕ ಲಕ್ಕಿ. ಒಂದು ವಿಭಿನ್ನವಾದ ಹಾಡಿನೊಂದಿಗೆ ಕಥೆ ಆರಂಭವಾಗುತ್ತದೆ. ಲಕ್ಕಿಗೆ ನಾಲ್ಕು ಮಂದಿ ಆತ್ಮೀಯ ಸ್ನೇಹಿತರು ಇರುತ್ತಾರೆ. ನಾಯಕನಿಗೆ ತಾನು ಸ್ಟಾರ್ಟಪ್ ಕಂಪನಿ ಮಾಡಬೇಕೆನ್ನುವ ಕನಸು. ಅದರ ಮಧ್ಯೆ ಕೆಫೆಯಲ್ಲಿ ಹಾಡುವ ಹುಡುಗಿಯಲ್ಲಿ ಮನಸು. ಆದರೆ ಈತ ಡಿಮ್ಯಾಂಡ್ ಮಾಡಿದ ಹಾಡಿಗೆ ಧ್ವನಿಯಾಗಲು ಒಂದು ಕಂಡೀಶನ್ ಹಾಕುತ್ತಾಳೆ. ಅದು ಅವಳ ಫೇವರಿಟ್ಟ ಸಂದರ್ಭದಲ್ಲಷ್ಟೇ ಹಾಡ ಬಯಸುವ ಗೀತೆಯಾಗಿರುತ್ತದೆ. ಈ ಮಧ್ಯೆ ಲಕ್ಕಿ ತನ್ನ ಅಕ್ಕನ ಬಾಯ್ ಫ್ರೆಂಡ್ ನಲ್ಲಿ ಕ್ಷಮೆ ಕೇಳುವ ಸಂದರ್ಭ ಎದುರಾಗುತ್ತದೆ. ಈ ಸಂದರ್ಭದಲ್ಲಿ ಬಾಯ್ ಫ್ರೆಂಡ್ ಸ್ನೇಹಿತೆಯಾಗಿದ್ದ ಅದೇ ಗಾಯಕಿ ನಾಯಕನಲ್ಲಿ ಪ್ರೀತಿ ಮೂಡುತ್ತದೆ. ಹಾಗೆ ಆತನ ಬಳಿಗೆ ಬಂದು ತನ್ನ ಮೆಚ್ಚಿನ ಹಾಡಿಗೆ ಧ್ವನಿಯಾಗುತ್ತಾಳೆ. ಮುಂದೇನಾಗುತ್ತದೆ ಎನ್ನುವುದೇ ಚಿತ್ರದ ಹೈಲೈಟ್.
ನಾಯಕ ಲಕ್ಕಿಯಾಗಿ ರಾಹುಲ್ ಆರ್ಕಾಟ್ ಮೊದಲ ಚಿತ್ರದಲ್ಲೇ ಮನಸೆಳೆಯುತ್ತಾರೆ. ಗಾಯಕಿ ನಾಯಕಿಯಾಗಿ ಕಾಶಿಮಾ ಅಭಿನಯ ಕೂಡ ಆಕರ್ಷಕ. ಆರಂಭದ ವಿಶೇಷ ಹಾಡಿನಲ್ಲಿ ಐಶ್ವರ್ಯ ಸಿಂಧೋಗಿ ಕಾಣಿಸಿದ್ದಾರೆ. ಸರ್ವರ್ ಆಗಿ ಚೇತನ್ ದುರ್ಗ ನಟಿಸಿದ್ದಾರೆ. ರಾಹುಲ್ ಕಾಶಿಮಾ ಜೋಡಿ ಪ್ರೇಕ್ಷಕರ ಮನದೊಳಗೆ ಜಾಗ ಪಡೆಯುತ್ತಾರೆ. ನಾಯಕನ ಪಾತ್ರ ನೋಡಿ ಹುಡುಗಿಯರು ಫಿದಾ ಆಗುವುದು ಖಚಿತ. ಹುಡುಗ ಪ್ರೀತಿಸಲು ಮಾತ್ರವಲ್ಲ, ತನ್ನ ಪ್ರೀತಿಯನ್ನು ಉಳಿಸಲು ಹೇಗೆ ಹೋರಾಡಬಲ್ಲ ಎನ್ನುವುದನ್ನು ಪ್ರತಿ ಪ್ರೇಮಿಗಳಿಗೂ ಆತ್ಮ ವಿಶ್ವಾಸ ಮೂಡುವಂತೆ ತೋರಿಸಿದ್ದಾರೆ. ಅದೇರೀತಿ ನಾಯಕಿ ಖುಷಿಯ ಧೈರ್ಯ ಕೂಡ ಮೆಚ್ಚುವಂತಿದೆ.
ತಾರಕ್ ಬೇಬೀ ಡೈಲಾಗ್ ಸೂಪರ್ ಹಿಟ್ ಆಗುವ ಸಾಧ್ಯತೆ ದಟ್ಟವಾಗಿದೆ. ಯಾಕೆಂದರೆ ಈ ಪಾತ್ರಕ್ಕೆ ಮೊದಲ ಪ್ರದರ್ಶನದಲ್ಲೇ ಸೀಟಿಯ ಸುರಿಮಳೆಯಾಗಿದೆ.
ಚಿತ್ರದ ಮೊದಲಾರ್ಧ ನೋಡುತ್ತಿರುವ ಹಾಗೆ ಪ್ರತಿಯೊಬ್ಬರೂ ಕಥೆಯೊಳಗೆ ಸೇರಿಕೊಳ್ಳುತ್ತಾರೆ. ಅಲ್ಲಿಂದ ಮಧ್ಯಂತರದ ಬಳಿಕದ ದೃಶ್ಯಗಳು ಇನ್ನೊಂದು ಮಟ್ಟಕ್ಕೆ ಕೊಂಡೊಯ್ಯುತ್ತದೆ. ಚಿತ್ರ ನೀಡುವ ಸಂದೇಶ ತುಂಬ ಚೆನ್ನಾಗಿ ‘ಪ್ರತಿಯೊಬ್ಬರನ್ನೂ ತಲುಪುತ್ತದೆ. ಹೆಣ್ಣು ಮಕ್ಕಳು ತಮ್ಮ ನೋವನ್ನು ತಮ್ಮಲ್ಲೇ ಅಡಗಿಸಿಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಎನ್ನುವುದನ್ನು ದೃಶ್ಯಗಳ ಮೂಲಕ ಮನದಟ್ಟುಪಡಿಸಲಾಗಿದೆ. ಅದರೆ ಹಾಗೆ ತೊಂದರೆ ನೀಡುವ ಹುಡುಗನಿಗೆ ಶಾಸ್ತಿಯಾಗುವ ದೃಶ್ಯಗಳು ಕೆಟ್ಟದಾಗಿ ಯೋಚಿಸುವವರಿಗೂ ಪಾಠ ಎಂದೇ ಹೇಳಬಹುದು.
ಭಾವನಾತ್ಮಕ ಕಥೆಯನ್ನು ಮನರಂಜನೆಯೊಂದಿಗೆ ಆಡಿಯನ್ಸ್ ಗೆ ತಲುಪಿಸುವ ಕಲೆ ನಿರ್ದೇಶಕರಿಗೆ ಸಿದ್ದಿಸಿದೆ. ಕಾಮಿಡಿ ಟೈಮಿಂಗ್ಸ್ ಪ್ರೇಕ್ಷಕರ ಮನಸೂರೆಗೊಂಡಿದೆ. ಅದಕ್ಕೆ ತಕ್ಕಂತೆ ಹಿನ್ನೆಲೆ ಸಂಗೀತವೂ ಸೇರಿ ಪ್ರತಿಯೊಬ್ಬರು ಎಂಜಾಯ್ ಮಾಡುವಂಥ ಸನ್ನಿವೇಶ ಸೃಷ್ಟಿಯಾಗಿದೆ. ಇಲ್ಲಿ ಪ್ರತಿಕಾರ ಇದ್ದರೂ ಅದನ್ನು ನೋಡುಗರೇ ಎಂಜಾಯ್ ಮಾಡುವ ರೀತಿಯಲ್ಲಿ ತೋರಿಸಲಾಗಿದೆ. ಈ ಎಲ್ಲ ಕಾರಣಗಳಿಂದಾಗಿಯೇ ಚಿತ್ರ ಎಲ್ಲಾ ವರ್ಗದ ಮಂದಿಯನ್ನು ಸೆಳೆಯುವುದು ಖಚಿತ.





Be the first to comment