ಚಿತ್ರ: ರಾಶಿ
ನಿರ್ದೇಶನ: ವಿಜಯ್ ಪಾಳೇಗಾರ್
ನಿರ್ಮಾಣ: ಅಖಿಲೇಶ್ ಮಹಾಲಿಂಗಯ್ಯ
ತಾರಾಗಣ: ಆದಿತ್ಯ ಶಶಿಕುಮಾರ್, ಸಮೀಕ್ಷಾ, ವೀಣಾ ಸುಂದರ್ ಮೊದಲಾದವರು..
ರೇಟಿಂಗ್: 3.5/5
ಹಳ್ಳಿ ಹಿನ್ನೆಲೆಯಲ್ಲಿ ಮೂಡಿ ಬಂದ ಕಥೆ. ಕಾಲೇಜ್ ಲವ್ ಸ್ಟೋರಿ. ಹೆತ್ತವರ ತ್ಯಾಗದ ಭಾವನಾತ್ಮಕ ಅಂಶ. ಈ ಮೂರು ಪ್ರಮುಖ ಅಂಶಗಳನ್ನು ಒಂದಾಗಿಸಿರುವ ಚಿತ್ರವೇ ರಾಶಿ. ಬಹುಶಃ ಇಷ್ಟೊಂದು ಆಕರ್ಷಕ ಅಂಶಗಳನ್ನು ಒಂದೇ ಪ್ಯಾಕೇಜ್ ನಲ್ಲಿ ನೀಡಿರುವ ಚಿತ್ರ ಸದ್ಯದ ಕಾಲದಲ್ಲಿ ಬಂದೇ ಇಲ್ಲ ಎಂದು ಧೈರ್ಯದಿಂದ ಹೇಳಬಹುದು.
ಕಾಲೇಜ್ನಲ್ಲಿ ಪ್ರೇಮ ಹೇಗೆ ಹುಟ್ಟಬಹುದು? ಅದನ್ನು ಹೀಗೂ ತೋರಿಸಬಹುದೇ? ಈಗಿನ ಕಾಲದಲ್ಲಿಯೂ ಕಾಲೇಜ್ ಪ್ರೇಮಿಗಳು ಇಷ್ಟೊಂದು ಸತ್ಯವಂತಿಕೆಯಿಂದ ಪ್ರೇಮಿಸುತ್ತಾರ? ಇಂಥದೊಂದು ಅಚ್ಚರಿ ಮೂಡುವಷ್ಟು ನೈಜವಾಗಿ ಪ್ರೇಮಕತೆಯನ್ನು ಕಟ್ಟಿಕೊಟ್ಟ ಕೀರ್ತಿ ನಿರ್ದೇಶಕ ವಿಜಯ್ ಪಾಳೇಗಾರ್ ಅವರಿಗೆ ಸಲ್ಲುತ್ತದೆ. ಅದೇ ಸಂದರ್ಭದಲ್ಲಿ ಚಿತ್ರದಲ್ಲಿ ಆಗಲೇ ಹೇಳಿದ ಮೂರು ಮುಖ್ಯ ಅಂಶಗಳು ಮಾತ್ರವಲ್ಲ, ಅವುಗಳ ಪ್ರಾಮುಖ್ಯತೆ ತೋರಿಸುವಂಥ ಕಲಾವಿದರನ್ನು ಕೂಡ ಆಯ್ದುಕೊಂಡಿದ್ದಾರೆ.
ಕಾಲೇಜ್ ಪ್ರೇಮಿಯಾಗಿ ಬಹುಶಃ ಆದಿತ್ಯನಷ್ಟು ನ್ಯಾಯ ಸಲ್ಲಿಸುವ ಯುವ ನಟ ಮತ್ತೊಬ್ಬರಿಲ್ಲ ಎನ್ನುವ ಭ್ರಮೆ ಮೂಡಿಸುವಂಥ ನಟನೆ ಅವರು ನೀಡಿದ್ದಾರೆ. ಇದಕ್ಕೆ ತಂದೆಯಿಂದ ಬಳುವಳಿಯಾಗಿ ಸಿಕ್ಕ ಸೌಂದರ್ಯ ಮಾತ್ರವಲ್ಲ, ಖುದ್ದು ಪರಿಶ್ರಮ ಪಟ್ಟು ಕಲಿತ ನೃತ್ಯದ ಪಟ್ಟು ಕೂಡ ಸಹಾಯ ಮಾಡಿದೆ. ಬಹುಶಃ ಇದೇ ಕಾರಣವೇ ಇರಬಹುದೇನೋ ಶ್ರೀಮಂತರ ಮನೆಯ ಹುಡುಗಿ ಈತನನ್ನು ಪ್ರೀತಿಸುತ್ತಾಳೆ. ಇಂಥದೊಂದು ನಿಷ್ಕಲ್ಮಶ ಮನದ ಸಿರಿವಂತ ಪ್ರೇಯಸಿಯಾಗಿ ಸಮೀಕ್ಷಾ ನಟಿಸಿದ್ದಾರೆ. ಅವರ ಸೌಂದರ್ಯ, ಸಂಭಾಷಣೆ ಎಲ್ಲವೂ ಪಾತ್ರಕ್ಕೆ ಪೂರಕವಾಗಿ ಬಂದಿದೆ. ನಾಯಕನಿಗೆ ಮನೆಯಿಂದಲೂ, ಪ್ರೇಯಸಿಯಿಂದಲೂ ಪ್ರೀತಿ ಇದೆ. ಆದರೆ ಬದುಕು ಈ ಎರಡರಲ್ಲಿ ಒಂದನ್ನು ಮಾತ್ರ ಆಯ್ಕೆ ಮಾಡುವಂಥ ಪರಿಸ್ಥಿತಿ ತಂದೊಡ್ಡುತ್ತದೆ. ಮುಂದೇನಾಗುತ್ತದೆ ಎನ್ನುವುದಸೇ ಚಿತ್ರದ ಪ್ರಮುಖ ಭಾಗ.
ಕಾಲೇಜ್ ಸನ್ನಿವೇಶದಲ್ಲಿ ಕಳೆನೀಡುವ ಕಲಾವಿದರಾಗಿ ಜನಪ್ರಿಯ ಹಾಸ್ಯ ನಟರ ದಂಡೇ ಇದೆ. ಅದರಲ್ಲೂ ಮಂಜು ಪಾವಗಡ, ವಿನೋದ್ ಗೊಬ್ಬರಗಾಲ, ಹುಲಿ ಕಾರ್ತಿಕ್ ಮೊದಲಾದವರು ಪರದೆಯ ಮೇಲೆ ಕಾಣಿಸುತ್ತಲೇ ಅಭಿಮಾನಿಗಳ ಕೂಗು ಕೇಳಬಹುದಾಗಿದೆ. ಇಂಥ ಪಾತ್ರಗಳು ಸಂಭಾಷಣೆಗಳ ಮೂಲಕ ಹಾಸ್ಯದ ಹೊನಲು ಹರಿಸಿದಾಗ ಪ್ರೇಕ್ಷಕರೆಲ್ಲರೂ ಅಭಿಮಾನಿಗಳೇ ಆಗಿಬಿಡುತ್ತಾರೆ. ಮೂರು ಹಿನ್ನೆಲೆಗೆ ತಕ್ಕಂತೆ ಚಿತ್ರದಲ್ಲಿ ಮೂರು ಭಾವಗಳೂ ಇವೆ. ನಾಯಕಿಯ ಮನೆಯಲ್ಲಿ ಈ ಪ್ರೀತಿಯನ್ನು ವಿರೋಧಿಸುವವರಾಗಿ ರಮೇಶ್ ಇಂದಿರಾ ತಮ್ಮ ಎಂದಿನ ಶೈಲಿಯಲ್ಲಿ ಹೂಂಕರಿಸುತ್ತಾರೆ. ನಗುತ್ತಲೇ ಕಾಡುವ ಅವರ ಪಾತ್ರದ ವ್ಯಾಪ್ತಿ ಕಣ್ಮುಂದೆ ಕಾಡುವಂತಿದೆ. ಕನ್ನಡದ ಭರವಸೆಯ ನಟ ವರ್ಧನ್ ತೀರ್ಥಹಳ್ಳಿ ಕೂಡ ತಮಗೆ ಸಿಕ್ಕ ಪಾತ್ರವನ್ನು ಆಕರ್ಷಕವಾಗಿಯೇ ನಿಭಾಯಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ನಾಯಕನ ತಾಯಿಯಾಗಿ ನಟಿಸಿರುವ ವೀಣಾ ಸುಂದರ್ ದೊಡ್ಡ ಮಟ್ಟದಲ್ಲೇ ಸ್ಕೋರ್ ಮಾಡಿದ್ದಾರೆ. ಅವರ ನಟನೆ ಚಿತ್ರದ ಹೈಲೈಟ್ ಎಂದೇ ಹೇಳಬಹುದು. ತಾಯಿ ಮಗನ ಸೆಂಟಿಮೆಂಟ್ ದೃಶ್ಯದಿಂದಾಗಿಯೇ ಸಾಕಷ್ಟು ಪ್ರೇಕ್ಷಕರ ಕಣ್ಣುಗಳು ಒದ್ದೆಯಾಗುವ ಸಂದರ್ಭಕ್ಕೆ ಸಾಕ್ಷಿಯಾಗುತ್ತಿವೆ.
ವಾಸ್ತವದಲ್ಲಿ ರಾಶಿ ಒಂದು ಪ್ರೇಮಕಥೆ ಮಾತ್ರವಲ್ಲ. ಇಲ್ಲಿ ಸಂದೇಶಗಳ ರಾಶಿಯೇ ಇದೆ. ತಂದೆ ತಾಯಿಗಳು ಮಕ್ಕಳೊಂದಿಗೆ ಹೇಗಿರಬೇಕು? ಮಕ್ಕಳು ವಿದ್ಯಾಭ್ಯಾಸದ ದಿನಗಳಲ್ಲಿ ಹೇಗಿರಬೇಕು? ಪ್ರೀತಿ, ಪ್ರೇಮ ಮತ್ತು ಕುಟುಂಬ ಎಂದು ಬಂದಾಗ ಆಯ್ಕೆ ಹೇಗಿರಬೇಕು? ನೆಮ್ಮದಿಗೆ, ಸಂತಸಕ್ಕೆಂದು ಆಯ್ಕೆ ಮಾಡುವ ಕುಡಿತ ಎನ್ನುವುದು ಬದುಕನ್ನು ಕಾಡುವುದು ಹೇಗೆ? ಎಲ್ಲಕ್ಕೂ ಉತ್ತರ ಕೊಡುತ್ತಲೇ ಬುದಕಿನ ಸತ್ಯವನ್ನು ಅರ್ಥಮಾಡಿಕೊಡುತ್ತದೆ ಈ ಚಿತ್ರ. ಕೌಟುಂಬಿಕ ಸಿನೆಮಾ ಪ್ರಿಯರು ತಮ್ಮ ರಾಶಿ ಪ್ರೀತಿಯನ್ನು ತೋರಬಹುದಾದ ಚಿತ್ರ ಈ ರಾಶಿ.





Be the first to comment