“ರಣಹದ್ದು” ಟೀಸರ್ ಹಾಗೂ ಹಾಡು ಬಿಡುಗಡೆ

“ರಣಹದ್ದು” ಚಿತ್ರದ ಟೀಸರ್ ಹಾಗೂ ಹಾಡು ಇತ್ತೀಚಿಗೆ ಸಿರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಯಿತು.

ಡಾ.ರಾಜಕುಮಾರ್ ಪುತ್ರಿ ಲಕ್ಷ್ಮೀ ಗೋವಿಂದರಾಜು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್.ಎ.ಚಿನ್ನೇಗೌಡ, ಎಸ್ ಎ ಗೋವಿಂದರಾಜು, ಎಸ್ ಎ ಶ್ರೀನಿವಾಸ್ ಅವರು ಟೀಸರ್ ಅನಾವರಣಗೊಳಿಸಿದರು.ನಟ ಶರಣ್ ಹಾಡುಗಳನ್ನು ಲೋಕಾರ್ಪಣೆ ಮಾಡಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ ಆರ್ ಕೆ ವಿಶ್ವನಾಥ್, ಸಿರಿ ಮ್ಯೂಸಿಕ್ ನ ಸುರೇಶ್ ಚಿಕ್ಕಣ್ಣ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಕಳೆದ 40 ವರ್ಷಗಳಿಂದ ಪೋಷಕ ಕಲಾವಿದನಾಗಿ ನೂರಾರು ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾಗಿರುವ ಪ್ರಸನ್ನ ಕುಮಾರ್ “ರಣಹದ್ದು” ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಇವರು ಚಿತ್ರದ ನಿರ್ಮಾಪಕರು ಕೂಡ.  ಪ್ರಸನ್ನಕುಮಾರ್ ಅವರ ಮಕ್ಕಳಾದ ಶಶಾಂಕ್ ಹಾಗೂ ಸೂರಜ್ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ‌. ಒಬ್ಬ ಮಗ ನಾಯಕನಾಗಿ, ಮತ್ತೊಬ್ಬ ಮಗ ಖಳನಾಯಕನಾಗಿ ಈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದಾರೆ.

ನಿರ್ಮಾಪಕ, ನಿರ್ದೇಶಕ ಪ್ರಸನ್ನಕುಮಾರ್, ”ಕಳೆದ ನಲವತ್ತು ವರ್ಷಗಳಿಂದ ಕನ್ನಡ ಚಿತ್ರರಂಗ ನನಗೆ ಅನ್ನ ಹಾಕುತ್ತಿದೆ. ಅದಕ್ಕೆ ನಾನು ಹಾಗೂ ನನ್ನ ಕುಟುಂಬ ಚಿರ ಋಣಿ. ಕೆಲವು ವರ್ಷಗಳ ಹಿಂದೆ ಅಪಘಾತದಲ್ಲಿ ನನ್ನ ಕಾಲಿಗೆ ತೀವ್ರ ಪೆಟ್ಟಾಗಿತ್ತು. ಆ ಸಮಯದಲ್ಲಿ ತುಂಬಾ ಯೋಚನೆ ಮಾಡುತ್ತಿದೆ‌. ಸ್ವಲ್ಪ ದಿನಗಳ ನಂತರ ಚಿತ್ರವೊಂದನ್ನು ನಿರ್ಮಾಣದ ಜೊತೆಗೆ ನಿರ್ದೇಶನ ಕೂಡ ಮಾಡಬೇಕೆಂದು ಆಸೆಯಾಯಿತು. ಆ ಆಸೆಯನ್ನು ಮಕ್ಕಳ ಬಳಿ ಹೇಳಿಕೊಂಡೆ. ನನ್ನ ಆಸೆಗೆ ಮಕ್ಕಳು ಆಸರೆಯಾದರು. ಈ ಚಿತ್ರದಲ್ಲಿ ನಟಿಸುವ ಮೂಲಕ ನನ್ನ ಇಬ್ಬರು ಮಕ್ಕಳು ಚಿತ್ರರಂಗ ಪ್ರವೇಶಿಸಿದ್ದಾರೆ‌. ಅನೇಕ ಜನ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ‌. ಹಣವಿಲ್ಲದ ಮನುಷ್ಯನನ್ನು ಸಮಾಜ ಹೇಗೆ ನೋಡುತ್ತದೆ ಎಂಬುದೆ ಚಿತ್ರದ ಕಥಾ ಸಾರಾಂಶ‌. ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ‌‌. ಚಿತ್ರೀಕರಣ ಮುಕ್ತಾಯವಾಗಿ ಚಿತ್ರ ಬಿಡುಗಡೆ ಹಂತದಲ್ಲಿದೆ‌” ಎಂದರು.

ಚಿತ್ರದಲ್ಲಿ ನಾಲ್ಕು ಹಾಡುಗಳಿರುವುದಾಗಿ ಸಂಗೀತ ನಿರ್ದೇಶಕ ಸಿಂಗರ್ ಶ್ರೀನಿವಾಸ್ ತಿಳಿಸಿದರು. ತಮ್ಮ ಪಾತ್ರದ ಬಗ್ಗೆ ಶಶಾಂಕ್, ಸೂರಜ್ ಮಾಹಿತಿ ನೀಡಿದರು.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!