‘ದೈಜಿ’ಯಲ್ಲಿ ಶಿವಶ್ರೀ ತೇಜಸ್ವಿ ಸೂರ್ಯ ಗಾಯನ

ರಮೇಶ್ ಅರವಿಂದ್ ನಟನೆಯ ‘ದೈಜಿ’ ಮೂಲಕ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ಶಿವಶ್ರೀ ತೇಜಸ್ವಿ ಸೂರ್ಯ ಅವರು ಹಿನ್ನೆಲೆ ಗಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.

‘ಚಿತ್ರದ ಒಂದು ನಿರ್ಣಾಯಕ ಹಾಗೂ ಪವಿತ್ರವಾದ ಹಾಡಿಗಾಗಿ ನಮಗೆ ಅತ್ಯಂತ ಶುದ್ಧ ಮತ್ತು ದೈವಿಕ ಎನಿಸುವ  ಧ್ವನಿಯ ಅಗತ್ಯವಿತ್ತು. ಸಿನಿಮಾದ ನಿರ್ಮಾಪಕರಾದ ರವಿ ಕಶ್ಯಪ್ ಅವರ ಪತ್ನಿ ಸುಧಾ ಕಶ್ಯಪ್ ಅವರು ಶಿವಶ್ರೀ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಹಿನ್ನೆಲೆಯನ್ನು ಹೊಂದಿರುವ ಕಾರಣ ಅವರ ಹೆಸರನ್ನು ಸೂಚಿಸಿದರು. ನಾನು ಅವರಿಗೆ ಹಾಡಿನ ಕಲ್ಪನೆ ಮತ್ತು ಅದರ ಆಳವಾದ ಅರ್ಥವನ್ನು ವಿವರಿಸಿದೆ. ತಕ್ಷಣವೇ ಅದಕ್ಕೆ ಮನಸೋತು ಹಾಡಲು ಒಪ್ಪಿಕೊಂಡರು’ ಎಂದು ಆಕಾಶ್ ಶ್ರೀವತ್ಸ ತಿಳಿಸಿದ್ದಾರೆ.

ಈ ಹಾಡಿನ ಮತ್ತೊಂದು ಆವೃತ್ತಿಯನ್ನು ‘ಕಾಂತಾರ: ಚಾಪ್ಟರ್ 1’ ಖ್ಯಾತಿಯ ಗಾಯಕ ಅಬ್ಬಿ ವಿ ಹಾಡಿದ್ದಾರೆ. ನಕುಲ್ ಅಭ್ಯಂಕರ್ ಸಂಗೀತ ಸಂಯೋಜಿಸಿರುವ ಎರಡು ಹಾಡುಗಳಿಗೆ ನಟ ಧನಂಜಯ ಸಾಹಿತ್ಯ ಬರೆದಿದ್ದಾರೆ. ಅದರಲ್ಲಿ ಒಂದು ಹಾಡನ್ನು ಸೋನು ನಿಗಮ್ ಹಾಡಿದ್ದಾರೆ. ಜೂಡಾ ಅವರು ರಚಿಸಿ ಸಂಯೋಜಿಸಿರುವ ಇಂಗ್ಲಿಷ್ ಹಾಡನ್ನು 14 ವರ್ಷದ ವಿಭಾ ಕಶ್ಯಪ್ ಹಾಡಿದ್ದಾರೆ.

 ಸೈಕಲಾಜಿಕಲ್ ಥ್ರಿಲ್ಲರ್ ಆಕಾಶ್ ಶ್ರೀವತ್ಸ ನಿರ್ದೇಶನದ ‘ದೈಜಿ’ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದೆ. ಇದರಲ್ಲಿ ವಿವಿಧ ಪ್ರಕಾರಗಳಿಗೆ ಸೇರಿದ ಏಳು ಹಾಡುಗಳಿವೆ. ಇವುಗಳಿಗೆ ಜೂಡಾ ಸ್ಯಾಂಡಿ, ನಕುಲ್ ಅಭ್ಯಂಕರ್ ಮತ್ತು ಸಚಿನ್ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದಾರೆ.   ಜೂಡಾ ಸ್ಯಾಂಡಿ ಚಿತ್ರಕ್ಕೆ ಹಿನ್ನೆಲೆ ಸಂಗೀತ  ಸಂಯೋಜಿಸಿದ್ದಾರೆ.

‘ದೈಜಿ’ ಚಿತ್ರದಲ್ಲಿ ರಮೇಶ್ ಅರವಿಂದ್, ರಾಧಿಕಾ ನಾರಾಯಣ್, ದಿಗಂತ್, ಅವಿನಾಶ್, ಕೆ.ಎಸ್. ಶ್ರೀಧರ್, ಅಲೆಕ್ಸಾಂಡ್ರಾ ಟೇಲರ್, ರಮೇಶ್ ಪಂಡಿತ್,  ನಿಧಿ ಹೆಗಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!