ನಾನು ಕರುಣಾಕರ

Movie Review: ಕರುಣಾಜನಕ ಪರಿಸ್ಥಿತಿಯಲ್ಲಿ ಕರುಣಾಕರನ ಪಾಡು

ಚಿತ್ರ: ನಾನು ಕರುಣಾಕರ
ನಿರ್ದೇಶನ: ಆರ್ಯನ್ ತೇಜಸ್
ನಿರ್ಮಾಪಕರು: ನಮನ್ ನಾರಾಯಣ್ ಮತ್ತು ವೈಭವ್ ಸುರೇಶ್
ತಾರಾಗಣ: ಆರ್ಯನ್ ತೇಜಸ್, ರಾಧಾ ಭಗವತಿ ಮೊದಲಾದವರು…
ರೇಟಿಂಗ್ : 2.5/5

ಒಂದು ಒಳ್ಳೆಯ ಸಬ್ಜೆಕ್ಟ್ ಆಯ್ದುಕೊಂಡು ಎಲ್ಲವೂ ನಾನೇ ಆಗಬೇಕು ಎಂದು ಹೊರಟರೆ ಆಗಬಹುದಾದ ಅನಾಹುತವೇನು ಎನ್ನುವುದಕ್ಕೆ ‘ನಾನು ಕರುಣಾಕರ’ ಒಂದು ಉದಾಹರಣೆ. ಎರಡೆರಡು ಜವಾಬ್ದಾರಿ ಹೊತ್ತುಕೊಂಡ ಆರ್ಯನ್ ತೇಜಸ್ ತಾವು ಹೊರಲಾರದ ಭಾರವನ್ನು ಪ್ರೇಕ್ಷಕರ ಮೇಲೆ ಹೇರಿದಂತಿದೆ ಈ ಚಿತ್ರ.

ಮಧ್ಯಮವರ್ಗದ ಕುಟುಂಬವೊಂದರ ಯುವಕನಿಗೆ ಸಿನಿಮಾ ನಿರ್ದೇಶನದ ಕನಸು. ಆದರೆ ಅದರ ಮಧ್ಯೆ ಪತ್ನಿ ಮತ್ತು ಮಗುವಿನ ಬೇಡಿಕೆ ಈಡೇರಿಸುವುದೇ ಅದಕ್ಕಿಂತ ದೊಡ್ಡ ಸಾಹಸದ ಪರಿಸ್ಥಿತಿ. ಈ ಎರಡು ಗುರಿಗಳ ನಡುವೆ ಹೊಂದಾಣಿಕೆಯ ಬದುಕು ನಡೆಸುವುದು ಹೇಗೆ? ಅದರಲ್ಲಿ ನೆಮ್ಮದಿ ಕಾಣುವುದು ಹೇಗೆ ಎನ್ನುವುದೇ ಪ್ರಶ್ನೆ. ಇದಕ್ಕೆ ಉತ್ತರವಾಗಿ ನಾನು ಕರುಣಾಕರ ಮೂಡಿ ಬಂದಿದೆ.

ಚಿತ್ರದ ಹೆಸರೇ ನೆನಪಿಸುವಂತೆ ‘ನಾನು ಮುಕೇಶ್..’ ಎನ್ನುವ ಜಾಹೀರಾತಿನ ರೋದನೆಗಿಂತ ಇಲ್ಲಿನ ರೋದನೆ ಕಡಿಮೆ ಏನಲ್ಲ. ಮಧ್ಯಮ ಕುಟುಂಬದ ಮಂದಿ ಆಲ್ರೆಡಿ ಅನುಭವಿಸುತ್ತಿರುವ ನೋವನ್ನು ಮತ್ತೆ ತಾವೇ ದುಡ್ಡುಕೊಟ್ಟು ಚಿತ್ರಮಂದಿರದಲ್ಲಿ ನೋಡಲು ಬರುವುದಾದರೂ ಯಾಕೆ? ಅದರಲ್ಲೂ ಕ್ರೌಡ್ ಪುಲ್ ಮಾಡಬಲ್ಲ ಸ್ಟಾರ್ ಕಲಾವಿದರು ಕೂಡ ಈ ಚಿತ್ರದಲ್ಲಿಲ್ಲ. ಇಷ್ಟೆಲ್ಲ ಕುಂದುಗಳಿದ್ದರೂ, ಇದೊಂದು ಕೌಟುಂಬಿಕ ಚಿತ್ರ ಎನ್ನುವ ಕಾರಣಕ್ಕೆ ನಂಬಿ ದುಡ್ಡು ಹಾಕಿದ ನಿರ್ಮಾಪಕರನ್ನು ಮೆಚ್ಚಲೇಬೇಕು.

ಒಬ್ಬ ಬರಹಗಾರ, ನಟ, ನಿರ್ದೇಶಕನಾಗಿ ಬಹುಮುಖದಲ್ಲಿ ಹೊಮ್ಮಿರುವ ಆರ್ಯನ್ ತೇಜಸ್ ಗೆ ನಟನಾಗಿ ಮಾತ್ರ ಹೆಚ್ಚಿನ ಅಂಕ ನೀಡಬಹುದಾಗಿದೆ. ಬಹುಶಃ ಸಹನಿರ್ದೇಶಕನ ಬವಣೆಯನ್ನು ಅನುಭವಿಸಿ ಅರಿವಿರುವ ಕಾರಣ ಇರಬಹುದು. ಪಾತ್ರವಾಗಿ ಜೀವಿಸುವ ಪ್ರಯತ್ನ ಮಾಡಿದ್ದಾರೆ. ನಾಯಕಿಯಾಗಿ ರಾಧಾ ಭಗವತಿ ಬಾಯಿಬಡುಕಿ ಮಮತಾ ಪಾತ್ರದಲ್ಲಿ ನಟಿಸಿದ್ದಾರೆ. ಇವರಿಬ್ಬರ ಪುತ್ರನಾಗಿ ಭವೀಶ್ ನಟನೆ ಮಾಡಿದ್ದಾರೆ.

ಚಿತ್ರದಲ್ಲಿ ಹಿರಿಯ ನಟ ಕರಿಸುಬ್ಬು ಒಂದು ಪ್ರಧಾನ ಪಾತ್ರ ಮಾಡಿದ್ದಾರೆ. ಉಳಿದಂತೆ ಅಪೂರ್ವ ಶ್ರೀ, ಬಿ.ಎಂ ವೆಂಕಟೇಶ್, ಕಾಮಿಡಿ ಕಿಲಾಡಿಗಳು ಲೋಕೇಶ್ ಮೊದಲಾದವರ ತಂಡವೇ ಇದೆ. ಆದರೆ ಕಿರುತೆರೆ ಡ್ರಾಮದಂತೆ ಕಾಣಿಸುವ ಈ ಚಿತ್ರದಲ್ಲಿ ಎಲ್ಲ ಪಾತ್ರಗಳು ಕಳೆದುಹೋಗಿವೆ. ಸಂಬಂಧದ ಹೆಸರಲ್ಲಿ ತಲೆಕೆಡಿಸಿಕೊಂಡು ತೃಪ್ತಿ ಪಡೆಯುವವರು ನೀವಾಗಿದ್ದರೆ ಖಂಡಿತಾ ಈ ಚಿತ್ರವನ್ನು ನೋಡಬಹುದು.

Be the first to comment

Leave a Reply

Your email address will not be published. Required fields are marked *

Translate »
error: Content is protected !!