ಚಿತ್ರ: ರಕ್ಕಿ
ನಿರ್ದೇಶನ: ವೆಂಕಟ್ ಭಾರದ್ವಾಜ್
ನಿರ್ಮಾಣ: ಸುರೇಶ್ ಸಾಲಿಗ್ರಾಮ
ತಾರಾಗಣ: ರಕ್ಕಿ ಸುರೇಶ್, ಆಶಿಕಾ ಸೋಮಶೇಖರ್, ಪಲ್ಲವಿ ಮಂಜುನಾಥ್, ಬಿ ಸುರೇಶ್ ಮುಂತಾದವರು…
ರೇಟಿಂಗ್ : 3.5/5
ಒಬ್ಬ ರೌಡಿಯನ್ನು ನಂಬಿ ಲೈಫ್ ನಡೆಸಲು ಅಸಾಧ್ಯ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ರೌಡಿಯಾಗಿದ್ದರೂ ಅದೃಷ್ಟವನ್ನು ಜೊತೆಯಲ್ಲೇ ಇಟ್ಟುಕೊಂಡವನು ರಕ್ಕಿ. ಇದಕ್ಕೆ ಆತನ ಒಳ್ಳೆಯತನವೇ ಕಾರಣವಾ? ಅದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.
ರೌಡಿಸಮ್ ಸಬ್ಜೆಕ್ಟ್ ಅನ್ನು ಪ್ರಧಾನವಾಗಿ ಇಟ್ಟುಕೊಂಡು ಇಷ್ಟೊಂದು ಚಂದದ ಸಾಂಸಾರಿಕ ಚಿತ್ರ ಮಾಡಬಹುದೇ? ಬಹುಶಃ ಇಂಥದೊಂದು ಕಲ್ಪನೆ ನಿರ್ದೇಶಕ ವೆಂಕಟ್ ಭಾರದ್ವಾಜ್ ಅವರಿಗಷ್ಟೇ ಬರಲು ಸಾಧ್ಯ. ಡ್ಯಾನಿ ಎನ್ನುವ ಭೂಗತ ಪಾತಕಿಯನ್ನು, ಆತನ ಪತ್ನಿಯನ್ನು ಎಲ್ಲೋ ಪಕ್ಕದ ಮನೆ ಆಂಟಿ ಅಂಕಲ್ ಎನ್ನುವಷ್ಟೇ ಸಹಜವಾಗಿ ತೋರಿಸಲಾಗಿದೆ. ಈ ಕಾರಣದಿಂದಲೇ ಡ್ಯಾನಿ ಮತ್ತು ಕುಟುಂಬ ಪ್ರೇಕ್ಷಕರಿಗೂ ಆತ್ಮೀಯವಾಗುತ್ತದೆ. ರೌಡಿಸಂನಲ್ಲಿ ಡ್ಯಾನಿಯ ಪಟ್ಟ ಶಿಷ್ಯನೇ ರಕ್ಕಿ. ರಕ್ಕಿಗೂ ಡ್ಯಾನಿಯ ಮಗಳು ಸಿರಿಗೂ ಪ್ರೀತಿ. ವಿಶೇಷ ಅಂದರೆ ಇದು ಡ್ಯಾನಿ ಮನೆಯವರಿಗೂ ಗೊತ್ತು. ಆದರೆ ಪ್ರೀತಿ ಸಕ್ಸಸ್ ಆಗುತ್ತಾ? ರಕ್ಕಿಗೆ ಇರುವ ಫ್ಲ್ಯಾಶ್ ಬ್ಯಾಕ್ ಸ್ಟೋರಿ ಏನು? ಇವೆಲ್ಲವನ್ನು ಕುತೂಹಲಭರಿತವಾಗಿ ತೋರಿಸಿದ್ದಾರೆ.
ರಕ್ಕಿ ಎನ್ನುವ ಚಿತ್ರದ ಟೈಟಲ್ ರೋಲ್ ಪಾತ್ರವನ್ನು ನಿಭಾಯಿಸಿದವರ ಹೆಸರೇ ರಕ್ಕಿ. ಒಂದು ರೀತಿ ತಮ್ಮದೇ ಹೆಸರನ್ನೇ ಚಿತ್ರದಲ್ಲಿಯೂ ಬಳಸಿದ್ದಾರೆ. ಪರದೆ ಮೇಲಿನ ರಕ್ಕಿ ಕೂಡ ತಾನೇ ಎನ್ನುವ ಹಾಗೆ ಲೀಲಾಜಾಲವಾಗಿ ನಟಿಸಿದ್ದಾರೆ. ಸಿನಿಮಾಗೆ ತಾನು ಹೊಸಬ ಎನ್ನುವ ಭಾವನೆ ಮೂಡದ ರೀತಿಯಲ್ಲಿ ಅಭಿನಯ ನೀಡಿದ್ದಾರೆ. ನಟನೆಯೊಂದಿಗೆ ಫೈಟ್, ಸಾಂಗ್ ನಲ್ಲಿಯೂ ಆಕರ್ಷಕವಾಗಿ ಕಾಣಿಸಿದ್ದಾರೆ. ಕನ್ನಡಕ್ಕೆ ಒಬ್ಬ ಭರವಸೆಯ ಯುವನಟ ದೊರಕಿರುವುದರಲ್ಲಿ ಯಾವ ಸಂದೇಹವೂ ಇಲ್ಲ.
ನಾಯಕನ ಜೋಡಿಯಾಗಿ ಇಬ್ಬರು ಯುವ ನಟಿಯರಿದ್ದಾರೆ. ಡ್ಯಾನಿ ಪುತ್ರಿ ಸಿರಿಯಾಗಿ ಪಲ್ಲವಿ ಮಂಜುನಾಥ್ ನಟಿಸಿದ್ದಾರೆ. ಚಾಂದಿನಿ ಮತ್ತು ಸುಮಾ ಎನ್ನುವ ಎರಡು ವೈರುಧ್ಯಗಳ ಪಾತ್ರವನ್ನು ಆಶಿಕಾ ಸೋಮಶೇಖರ್ ನಿರ್ವಹಿಸಿದ್ದಾರೆ. ಸಿರಿ ತಂದೆ ಪಾತಕಿಯ ಪಾತ್ರವನ್ನು ಬಿ ಸುರೇಶ್ ಮಾಡಿದ್ದಾರೆ. ಸುರೇಶ್ ಜೋಡಿಯಾಗಿ ಹರಿಣಿ ಬಣ್ಣ ಹಚ್ಚಿದ್ದಾರೆ. ಡೈಲಾಗ್ ಮಾತ್ರವಲ್ಲ ಈ ಕುಟುಂಬದಲ್ಲಿ ಒಂದು ಸಾಂಸಾರಿಕ ಗೀತೆಯೂ ಇದೆ. ಹೀಗಾಗಿಯೇ ಚಿತ್ರದಲ್ಲಿ ಮನರಂಜನಾತ್ಮಕ ಅಂಶಗಳಿಗೆ ಕೊರತೆಯೇ ಇಲ್ಲ.
ಪೊಲೀಸ್ ಅಧಿಕಾರಿಯಾಗಿ ರಮೇಶ್ ಪಂಡಿತ್ ತಮ್ಮ ಎಂದಿನ ಶೈಲಿಯ ಸಹಜಾಭಿನಯ ನೀಡಿದ್ದಾರೆ. ರೇಖಾ ಕುಮಾರ್, ಬಲ ರಾಜ್ ವಾಡಿ, ಸಪ್ನಾ ದೀಕ್ಷಿತ್, ಜಿ.ಜಿ ಯಾನೇ ಗೋವಿಂದೇ ಗೌಡ, ಹೀಗೆ ಜನಪ್ರಿಯ ಕಲಾವಿದರ ಸರತಿಯೇ ಇದೆ. ಚಿತ್ರದಲ್ಲಿ ರಕ್ಕಿಯನ್ನು ನಂಬಿದವರ ಲೈಫ್ ನಲ್ಲಿ ಲಕ್ ಕಾಣುತ್ತದೆ. ರಿಯಲ್ ನಲ್ಲಿ ರಕ್ಕಿ ಸಿನಿಮಾ ನಂಬಿ ನೋಡಿದವರಿಗೆ ಮನರಂಜನೆ ಗ್ಯಾರಂಟಿ.





Be the first to comment