ರಿಲ್ಯಾಕ್ಸ್

Movie Review: ಅಪಹರಣದ ಆಟದಲ್ಲಿ ಅಲೆಕ್ಸ್ ಅಲೆದಾಟ

ಚಿತ್ರ: ರಿಲ್ಯಾಕ್ಸ್
ನಿರ್ದೇಶನ: ಶ್ರೀನಿವಾಸ ಮಂಡ್ಯ
ನಿರ್ಮಾಣ: ಎ.ಎಮ್.ಎಮ್ ಕೃಷ್ಣ
ತಾರಾಗಣ: ಕೋಮಲ್, ಸೊನಾಲ್ ಮೊಂಟೆರೊ, ವಿನೋದ್ ಪ್ರಭಾಕ‌ರ್ ಮುಂತಾದವರು…
ರೇಟಿಂಗ್ : 3.5/5

ಅಲೆಕ್ಸ್‌ ಒಬ್ಬ ಮಧ್ಯಮ ವರ್ಗದ ವ್ಯಕ್ತಿ. ಬಡತನವನ್ನು ಮಾತ್ರ ಕಂಡವನು. ಆದರೆ ಆತನ ಬಾಳಿನಲ್ಲಿ ನಿರೀಕ್ಷಿಸಿಯೇ ಇರದಂಥ ಅದ್ಭುತ ಘಟನೆಗಳು ನಡೆಯುತ್ತವೆ. ಅಪಹರಣದ ಕೃತ್ಯವೊಂದು ಆತನ ಬದುಕನ್ನೇ ಬದಲಾಯಿಸುತ್ತದೆ.

ಸೀತೆಯನ್ನು ಅಪಹರಿಸಿ ಪ್ರಣಯಕ್ಕಾಗಿ ಕಾದ ರಾವಣ ನಮಗೆಲ್ಲ ಗೊತ್ತು. ಆದರೆ ಇಬ್ಬರು ಅಪರಿಚಿತರು ಒಂದೇ ಮನೆಯಲ್ಲಿ ಸೇರಿಕೊಂಡಾಗ ಅವರ ನಡುವೆ ಪ್ರೇಮ ಮೂಡಬಹುದೇ? ಅಂಥದೊಂದು ಸನ್ನಿವೇಶ ಮತ್ತು ಅದಕ್ಕೂ ಮೊದಲಿನ ನಾಟಕೀಯ ಸನ್ನಿವೇಶಗಳಿಗೆ ಸಾಕ್ಷಿಯಾಗುವ ಚಿತ್ರವೇ ರಿಲ್ಯಾಕ್ಸ್.

ಒಂಟಿ ಮನೆಯೊಳಗಿರುವ ಅಲೆಕ್ಸ್ ಪಾತ್ರದಲ್ಲಿ ನಟ ಕೋಮಲ್ ಕುಮಾ‌ರ್ ಅಭಿನಯಿಸಿದ್ದಾರೆ. ಕೋಮಲ್ ಅವರಿಗೆ ಇಲ್ಲಿ ಹಾಸ್ಯದ ಜತೆಯಲ್ಲಿಯೇ ನೋವು, ಕಷ್ಟ, ಸಂಕಟ ಎಲ್ಲವನ್ನು ಅಭಿನಯಿಸುವ ಅವಕಾಶ ದೊರಕಿದೆ. ಆದರೆ ಕೋಮಲ್ ಪೇಚಾಟಗಳೆಲ್ಲವೂ ಪ್ರೇಕ್ಷಕರ ಪಾಲಿಗೆ ಹಾಸ್ಯ ರಸದೂಟವಾಗಿದೆ. ಇದೇ ಮನೆಗೆ ಅಪಹೃತಳಾಗಿ ಬರುವ ಶ್ರೀಮಂತ ಯುವತಿ ಐಶ್ವರ್ಯ ಪಾತ್ರವನ್ನು ಸೊನಾಲ್ ಮೊಂಟೆರೊ ನಿರ್ವಹಿಸಿದ್ದಾರೆ. ಕಥೆಯಲ್ಲಿ ಸೊನಾಲ್ ಸೊಕ್ಕಿನ ಬೆಕ್ಕಾದರೆ ಪ್ರಾಣ ಸಂಕಟ ಎದುರಿಸುವ ಇಲಿಯಾಗಿ ಕೋಮಲ್ ಕಮಾಲ್‌ ಮಾಡಿದ್ದಾರೆ.

ಆದರೆ ಈ ಚಿತ್ರ ಇಬ್ಬರ ಮಧ್ಯದಲ್ಲಿ ನಡೆಯುವ ಕಥೆ ಮಾತ್ರವಲ್ಲ. ಈ ಮನೆಯೊಳಗೆ ನಡೆಯುವ ಘಟನೆಗಳ ಹಿಂದಿನ ಸೂತ್ರಧಾರರು ಬೇರೆಯೇ ಇರುತ್ತಾರೆ. ಆದರೆ ಅವರ ಉದ್ದೇಶ ಏನು? ಅದನ್ನು ಇವರಿಬ್ಬರು ಸೇರಿ ನೆರವೇರಿಸುತ್ತಾರ ಎನ್ನುವುದೇ ಕಥೆಯ ಪ್ರಮುಖ ಘಟ್ಟ. ಹಾಗಾಗಿಯೇ ಚಿತ್ರದಲ್ಲಿನ ಇತರ ಪಾತ್ರಗಳಿಗೂ ಸಾಕಷ್ಟು ಪ್ರಾಮುಖ್ಯತೆ ಇದೆ. ಅದರಲ್ಲಿ ಕೂಡ ವಿನೋದ್‌ ಪ್ರಭಾಕ‌ರ್ ಅವರು ನಿರ್ವಹಿಸಿರುವ ರಿಷಿ ಪಾತ್ರ ಪ್ರೇಕ್ಷಕರಿಗೆ ಹೊಸತನದ ಕಿಕ್ ನೀಡುವುದು ಖಚಿತ.

ಚಿತ್ರದ ನಿರ್ಮಾಪಕ ಮಧು ಅವರು ಕೂಡ ಇಲಿ ಒಂದು ಪ್ರದಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತರ ಪ್ರಮುಖ ಪೋಷಕ ಪಾತ್ರಗಳನ್ನು ಅರುಣಾ ಬಾಲರಾಜ್, ಅರವಿಂದ ರಾವ್ ಮೊದಲಾದ ಜನಪ್ರಿಯ ಕಲಾವಿದರು ನಿರ್ವಹಿಸಿದ್ದಾರೆ. ಒಂದಷ್ಟು ಗ್ಯಾಪ್ ಬಳಿಕ ಕನ್ನಡಕ್ಕೆ ಮರಳಿರುವ ಜನಪ್ರಿಯ ಸಂಗೀತ ನಿರ್ದೇಶಕ ಜಸ್ಸಿ ಗಿಫ್ಟ್ ಅವರ ಸಂಗೀತದಲ್ಲಿನ ಹಾಡುಗಳು ಚಿತ್ರದ ಆಕರ್ಷಣೆಗಳಲ್ಲೊಂದಾಗಿದೆ. ಕೋಮಲ್ ಹಾಸ್ಯ, ವಿನೋದ್ ಪ್ರಭಾಕರ್ ಆ್ಯಕ್ಷನ್‌ ಎರಡೂ ಸೇರಿ ಪ್ರೇಕ್ಷಕರ ಪಾಲಿಗೆ ಒಂದು ಪುಲ್ ಪ್ಯಾಕ್ ಮನರಂಜನೆ ಸಿಕ್ಕಂತಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!