ಚಿತ್ರ: ಮದರ್ ಪ್ರಾಮಿಸ್
ನಿರ್ದೇಶನ: ಪೂರ್ಣಚಂದ್ರ ಮೈಸೂರು.
ತಾರಾಗಣ: ಧನಂಜಯ, ಮಹಾದೇವ, ಪೂರ್ಣಚಂದ್ರ ಮೈಸೂರು, ಗೀತಾ ಮೊದಲಾದವರು….
ರೇಟಿಂಗ್ : 3.5/5
ರೊಸ್ಸಿ ಬೆಂಗಳೂರಿನ ಗ್ಯಾಂಬ್ಲಿಂಗ್ ಕಿಂಗ್. ಆತನೋರ್ವ ಬೈಕ್ ರೇಸರ್. ಮಾತ್ರವಲ್ಲ ಆತನದೊಂದು ಗ್ಯಾಂಗ್ ಕೂಡ ಇದೆ. ಒಂದು ಕಾಲದಲ್ಲಿ ಒಂದೇ ಗ್ಯಾಂಗ್ ಆಗಿದ್ದ ಸ್ನೇಹಿತ ‘ದೊನ್ನೆ ಬಿರಿಯಾನಿ’ ಈಗ ತನ್ನದೇ ಗ್ಯಾಂಗ್ ಮೂಲಕ ಹೆಸರು ಮಾಡಿದ್ದಾನೆ. ಈ ಇಬ್ಬರ ನಡುವೆ ಗ್ಯಾಂಗ್ ವಾರ್ ನಡೆಯುವ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಅದಕ್ಕೆ ಕಾರಣ ಏನು ಎನ್ನುವುದೇ ಈ ಚಿತ್ರದ ಕಥೆ.
ದೊನ್ನೆ ಬಿರಿಯಾನಿಗೆ ಬೆಂಗಳೂರಿನ ಅಂಗುಲಿಮಾಲ ಎನ್ನುವ ಅಡ್ಡ ಹೆಸರು ಕೂಡ ಇದೆ. ಯಾಕೆಂದರೆ ತನ್ನ ಬಳಿ ದಂಧೆ ನಡೆಸಲು ಬಂದವರು ನಿಯತ್ತಿನಲ್ಲಿ ನಿಲ್ಲದೆ ಹೋದರೆ ಅವರ ಕೈ ಬೆರಳುಗಳನ್ನು ಕತ್ತರಿಸಿ ಹಾಕುವುದು ಆತನ ಹವ್ಯಾಸ. ಈ ಕಾರಣದಿಂದಲೇ ಆತನೆಂದರೆ ಇಡೀ ಬೆಂಗಳೂರೇ ಭಯಪಡುತ್ತದೆ. ಇಂಥ ದೊನ್ನೆ ಬಿರಿಯಾನಿಯ ಬಳಿಯಲ್ಲಿ ಇಬ್ಬರು ಹೊಸದಾಗಿ ಕೆಲಸಕ್ಕೆ ನೇಮಕಗೊಳ್ಳುತ್ತಾರೆ. ನೇಮಕಗೊಳಿಸಿದಾತನೊಡನೆ ಸೇರಿ ಅವರು ಮಾಡುವ ಎಡವಟ್ಟುಗಳೇ ಈ ಚಿತ್ರದಲ್ಲಿ ಭರಪೂರ ಹಾಸ್ಯಕ್ಕೆ ಕಾರಣವಾಗಿವೆ.
ಚಿತ್ರದಲ್ಲಿ ರೊಸ್ಸಿಯಾಗಿ ಡಾಲಿ ಧನಂಜಯ ಅಭಿನಯಿಸಿದ್ದಾರೆ. ತಾಯಿ ಸೆಂಟಿಮೆಂಟ್, ಕೆಲಸದ ಮೇಲಿನ ನಿಯತ್ತು ಮೊದಲಾದವನ್ನು ಪ್ರದರ್ಶಿಸುವ ದೃಶ್ಯಗಳಲ್ಲಿ ಧನಂಜಯ್ ನಟನೆ ಗಮನಾರ್ಹವಾಗಿದೆ. ದೊನ್ನೆ ಬಿರಿಯಾನಿ ಪಾತ್ರವನ್ನು ಮಹಾದೇವ್ ನಿರ್ವಹಿಸಿದ್ದಾರೆ. ಈ ಪಾತ್ರ ದೃಶ್ಯದಿಂದ ದೃಶ್ಯಕ್ಕೆ ಕುತೂಹಲ ಸೃಷ್ಟಿಸುತ್ತಾ ಸಾಗುತ್ತದೆ.
ರ್ಯಾಂಡಿ ಯಾನೇ ರಣಧೀರನಾಗಿ ಪೂರ್ಣಚಂದ್ರ ಮೈಸೂರು ಚಿತ್ರಪೂರ್ತಿ ಲವಲವಿಕೆಯ ಅಭಿನಯ ನೀಡಿದ್ದಾರೆ. ಒಂದು ಸಾಲಿನ ಕಥೆಯನ್ನು ಹಾಸ್ಯದ ಲೇಪದೊಂದಿಗೆ ಗಂಟೆಗಳ ಕಾಲ ಎಂಜಾಯ್ ಮಾಡುವಂತೆ ನೀಡಿದ್ದಾರೆ. ರ್ಯಾಂಡಿಯ ತಾಯಿಯಾಗಿ ಹಿರಿಯ ನಟಿ ಗೀತಾ ಅಭಿನಯಿಸಿದ್ದಾರೆ. ಆಕೆ ರೊಸ್ಸಿ ಮತ್ತು ದೊನ್ನೆ ಬಿರಿಯಾನಿಗೆ ಶಾಲಾ ಶಿಕ್ಷಕಿಯೂ ಹೌದು. ಆಣೆ ಪ್ರಮಾಣ ಮಾಡಿ ಒಳಿತನ್ನು ಕಲಿಸುವುದು, ತಪ್ಪು ಮಾಡಿದರೆ ಕೆನ್ನೆಗೆ ಬಡಿಯುವುದು ಆಕೆಯ ಅಭ್ಯಾಸ. ಸಿಕ್ಕ ಪಾತ್ರವನ್ನು ಚೆನ್ನಾಗಿಯೇ ನಿರ್ವಹಿಸಿದ್ದಾರೆ ಗೀತಾ.
ತಾಯಿ ಸೆಂಟಿಮೆಂಟ್ ಸಾಂಗ್ ಕೂಡ ಅದ್ಭುತವಾಗಿ ಮೂಡಿಬಂದಿದೆ. ಸಮಕಾಲೀನ ಸಿನಿಮಾಗಳ ಸಂಭಾಷಣೆಗಳನ್ನು, ಸನ್ನಿವೇಶಗಳನ್ನು ನೆನಪಿಸುವಂಥ ದೃಶ್ಯಗಳನ್ನು ಸೇರಿಸುವ ಮೂಲಕ ಅಲ್ಲಿಯೂ ಹಾಸ್ಯಕ್ಕೆ ಸಂದರ್ಭವನ್ನು ಸೃಷ್ಟಿಸಲಾಗಿದೆ. ಮದರ್ ಪ್ರಾಮಿಸ್ ಇಲ್ಲಿ ಮನರಂಜನೆಗೆ ಕೊರತೆ ಇಲ್ಲ.





Be the first to comment