ಲವ್ ಸೀಸನ್ಸ್ ಎನ್ನುವ ಆಕರ್ಷಕ ಹೆಸರಿನ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರದ ನಿರ್ಮಾಪಕ, ನಿರ್ದೇಶಕ ಮತ್ತು ನಾಯಕ ನಟ ಮೂವರು ಕೂಡ ಹೊಸಬರೇ. ಆದರೆ ಮೂವರು ಸೇರಿ ಟೀಸರ್ ಆಕರ್ಷಕವಾಗಿಸಿದ್ದಾರೆ.
ಕಾರ್ತಿಕ್ ಅಲಿಯಾಸ್ ಕೃತ್ವಿಕ್ ಈ ಚಿತ್ರದ ನಿರ್ದೇಶಕರು. “2017 ರಲ್ಲಿ ನಾನೊಂದು ಲವ್ ಮಾಡಿದ್ದೆ. ಪ್ರಪೋಸ್ ಮಾಡಬೇಕು ಎಂದು ಹೋದೆ ಆದರೆ ಧೈರ್ಯನೇ ಬರಲಿಲ್ಲ. ಈಗ ಅದೇ ಪರಿಸ್ಥಿತಿಯ ಹಿನ್ನೆಲೆ ಇಟ್ಟುಕೊಂಡು ಈ ಚಿತ್ರ ಮಾಡಿದ್ದೇನೆ” ಎಂದು ಕಾರ್ತಿಕ್ ಹೇಳಿದರು. ಉಪೇಂದ್ರ ನಟನೆಯ ಬುದ್ಧಿವಂತ 2 ಸೇರಿದಂತೆ ಒಂದಷ್ಟು ಸಿನಿಮಾ ಮತ್ತು ಡಾಕ್ಯುಮೆಂಟರೀಸ್ ಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಕೃತ್ವಿಕ್ ಗೆ ರಂಗಭೂಮಿ ಹಿನ್ನೆಲೆ ಇರುವುದು ಗಮನಾರ್ಹ.
ನಮ್ಮ ಜೀವನದಲ್ಲಿ ನಡೆದಿರುವ ಅನುಭವಗಳನ್ನು ಸ್ಫೂರ್ತಿಯಾಗಿಸಿ, ಈಗಿನ ಜನರೇಶನ್‌ಗೆ ಮಾನವೀಯ ಮೌಲ್ಯಗಳನ್ನು ಹೇಳುವಂಥ ಚಿತ್ರ ಇದು ಎನ್ನುತ್ತಾರೆ ಕೃತ್ವಿಕ್.
ಚಿತ್ರದ ಮೂಲಕ ನಾಯಕರಾಗಿ ಎಂಟ್ರಿ ನೀಡುತ್ತಿರುವವರು ಮುಕುಂದ ರಾಮಸ್ವಾಮಿ. ಇವರ ತಂದೆಯೇ ಚಿತ್ರದ ನಿರ್ಮಾಪಕ. ಆದರೆ ತಂದೆ ಮಗನ ಸಂಬಂಧ ಸೆಟ್ ನಲ್ಲಿರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಚಿತ್ರಕ್ಕೆ ಸಂಬಂಧಿಸಿದಂತೆ ಒಬ್ಬ ನಟ-ಪ್ರೊಡ್ಯೂಸರ್ ಆಗೇ ಇದ್ದೆವು. ಸಿನಿಮಾವೇ ನನ್ನ ಗುರಿ ಎಂದು ನಟ ಮುಕುಂದ ರಾಮಸ್ವಾಮಿ ಹೇಳಿದರು.
ಈ ಸಿನಿಮಾಗೆ ಸಣ್ಣಗಾಗಬೇಕಿತ್ತು. ಹಠ ತೊಟ್ಟು ಒಂದೇ ತಿಂಗಳಲ್ಲಿ 7 ಕೆಜಿ ಕಮ್ಮಿ ಆಗಿದ್ದೀನಿ. ಯಾಕೆ ಈ ರೀತಿ ಮಾಡಿದ್ದೀನಿ ಅಂತ ನಿಮಗೆ ಸಿನಿಮಾ ನೋಡಿದಾಗ ತಿಳಿಯುತ್ತದೆ. ಇದು ಬರಿ ಲವ್ ಸ್ಟೋರಿ ಅಲ್ಲ. ನೀತಿ ಕೂಡ ಇರುವ ಲವ್ ಸ್ಟೋರಿ. ಮಾತ್ರವಲ್ಲ, ಇಡೀ ಫ್ಯಾಮಿಲಿ ಜೊತೆ ಕುಳಿತುಕೊಂಡು ನೋಡುವ ಸಿನಿಮಾ ಎಂದರು.
ನಿರ್ಮಾಪಕರು ಎನ್ ಆರ್ ಮಂಜುನಾಥ್ ಮಾತನಾಡಿ “ಇದು ನನ್ನ ಮಗನ ಕನಸು. ಇದು. ಹಾಗಾಗಿ ಸಿನಿಮಾ ಕ್ಷೇತ್ರಕ್ಕೆ ಬಂದು ಚಾಲೆಂಜ್ ಆಗಿ ತಗೊಂಡು ಸಿನಿಮಾ ಮಾಡಿದೆ. ಅನೇಕ ಡೈರೆಕ್ಟರ್ ಅನೇಕ ಕಥೆಗಳನ್ನು ಹೇಳಿದ್ದಾರೆ. ಆದರೆ ಕೃತ್ವಿಕ್ ಚೆನ್ನಾಗಿ ಕಥೆ ಹೇಳಿದ್ದಾರೆ. ಸಿನಿಮಾ ಕೂಡ ಚೆನ್ನಾಗಿ ಮೂಡಿ ಬಂದಿದೆ. ಸೆನ್ಸಾರ್ ಸರ್ಟಿಫಿಕೇಟ್ ಕೂಡ ಬಂದಿದೆ. ಹಾಡುಗಳು ಅದ್ಭುತವಾಗಿವೆ. ಹಾಡಿನಿಂದಲೇ ಸಿನಿಮಾ ನೋಡಬೇಕು ಅನಿಸುತ್ತದೆ. ಸಂದೇಶವಿದೆ. ನಾಲ್ಕು ಹಾಡುಗಳಿವೆ. ಅರ್ಮಾನ್ ಮಲಿಕ್ ಮೊದಲಾದವರು ಹಾಡಿದ್ದಾರೆ. ವೀರ್ ಸಮರ್ಥ್ ಸಂಗೀತವಿದೆ. ನಾನು ರಾಜಕೀಯದಲ್ಲಿದ್ದೆ. ಈಗ ರಾಜಕೀಯ ಇಲ್ಲ. ಸಿನಿಮಾಗೆ ಬಂದಿದ್ದೇನೆ. ತಂದೆ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ಸ್ಥಾಪಿಸಿದ್ದೀನಿ. ನನ್ನ ಮಗ ಮುಕುಂದ್‌ನ ಕನಸು ಇದು. ನನಗೆ 50 ವರ್ಷ, ನಾನು ಶಕ್ತಿಯುತವಾಗಿದ್ದುಕೊಂಡು ಸಿನಿಮಾ ಮಾಡ್ತೀನಿ ಎಂದರು.

ನಾಯಕ ನಟಿ ದಿಯಾ ಕೀರ್ತಿ ಮಾತನಾಡಿ “ನಾನು ಕ್ರಿಶ್ಚಿಯನ್ ಪಾತ್ರ ಮಾಡಿದ್ದೀನಿ. ಇದು ನನಗೂ ಮೊದಲ ಸಿನಿಮಾ. ಎಲ್ಲರ ಮನಸ್ಸಿಗೂ ನನ್ನ ಪಾತ್ರ ತಲುಪುತ್ತದೆ. ಈಗಿನ ಜನರೇಶನಲ್ಲಿ ಆ ತರಹ ಕ್ಯಾರೆಕ್ಟರ್ ಯಾರಿಗೂ ಸಿಗೋಕೆ ಸಾಧ್ಯವಿಲ್ಲ. ಚಿಕ್ಕಬಳ್ಳಾಪುರ ನೇಟಿವ್ ನನ್ನದು ಎಂದರು. ಮತ್ತೋರ್ವ ನಾಯಕಿ ಚಂದನಾ ಗೌಡ “ಪ್ರತಿ ಸಿನಿಮಾನೂ ಒಂದು ಕಲಿಕೆ” ಎಂದು ಹೇಳಿದರು.
ಖ್ಯಾತ ನಟ ರಾಜೇಶ್ ನಟರಂಗ ಮಾತನಾಡಿ, “ಇದು ನಟನಿಗೆ, ನಿರ್ಮಾಪಕ ನಿರ್ದೇಶಕನಿಗೆ ಪ್ರಥಮ ಸಿನಿಮಾ ಆಗಿರಬಹುದು. ಆದರೆ ನಮಗೆ ಕೂಡಾ ಪ್ರತಿಯೊಂದು ಸಿನಿಮಾ ಕೂಡಾ ಹೊಸತು. ಹಾಗಾಗಿ ಆ ಭಯ, ಜವಾಬ್ದಾರಿ ಇದ್ದೇ ಇರುತ್ತದೆ. ಕೃತ್ವಿಕ್ ಅವರು ಹೊಯ್ಸಳ ಸಿನಿಮಾದಲ್ಲಿ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದರು. ಆಗ ಅವರ ಜೊತೆ ಕೆಲಸ ಮಾಡಿದ್ದೆ. ನಿರ್ಮಾಪಕರು ಕೂಡಾ ನೂರಾರು ಸಿನಿಮಾ ಮಾಡಲಿ. ಅದರಲ್ಲಿ 90 ಸಿನಿಮಾದಲ್ಲಿ ನನಗೆ ನಟಿಸುವ ಅವಕಾಶ ಸಿಗಲಿ ಎಂದು ನಕ್ಕು ನುಡಿದರು.
ನಟಿ ಸಂಗೀತಾ ಅನಿಲ್, ಕಾಮಿಡಿ ಕಿಲಾಡಿ ಸದಾನಂದ, ನಟ ಚೇತನ್ ದುರ್ಗಾ ಮೊದಲಾದವರು ಮಾತನಾಡಿ ತಮ್ಮ ಅನುಭವ ಹಂಚಿಕೊಂಡರು.






Be the first to comment