ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಅಭಿನಯದ ತಮಿಳು ಚಿತ್ರ ಜನ ನಾಯಗನ್ ಗುರುವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ತಮಿಳಗ ವೆಟ್ರಿ ಕಳಗಂ ಕಾರ್ಯಕರ್ತರು ಹಾಗೂ ವಿಜಯ್ ಅಭಿಮಾನಿಗಳು ಥಿಯೇಟರ್‌ಗಳಲ್ಲಿ ಕುಣಿದು ಸಂಭ್ರಮಿಸಿದ್ದಾರೆ.
ಚಿತ್ರದ ‘ಮೊದಲ ದಿನದ ಮೊದಲ ಪ್ರದರ್ಶನ’ವನ್ನು ವೀಕ್ಷಿಸಿದ ಸಾವಿರಾರು ಅಭಿಮಾನಿಗಳು, ಪೊಂಗಲ್ ವಿತರಿಸಿ, ಪಟಾಕಿ ಸಿಡಿಸಿ, ಬೃಹತ್ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿದರು. ಚಿತ್ರ ಮಂದಿರಗಳ ಹೊರಗಡೆ ವಿಜಯ್ ಅವರ ಬೃಹತ್ ಹೋರ್ಡಿಂಗ್‌ಗಳಿಗೆ ಅಭಿಮಾನಿಗಳು ಹಾಲಿನ ಅಭಿಷೇಕವನ್ನು ಮಾಡಿದರು.
ತಮಿಳುನಾಡಿನಾದ್ಯಂತ ಚಿತ್ರಮಂದಿರಗಳನ್ನು ಬೃಹತ್ ಕಟೌಟ್‌ಗಳು, ಬ್ಯಾನರ್‌ಗಳು, ಹೂವಿನ ಅಲಂಕಾರ ಮತ್ತು ಬಣ್ಣಬಣ್ಣದ ದೀಪಗಳಿಂದ ಸಿಂಗರಿಸಲಾಗಿತ್ತು. ಸಾವಿರಾರು ಅಭಿಮಾನಿಗಳು ಒಂದೇ ಮಾದರಿಯ ಟಿ-ಶರ್ಟ್‌ಗಳನ್ನು ಧರಿಸಿ ಟಿವಿಕೆ ಪಕ್ಷದ ಧ್ವಜಗಳನ್ನು ಹಿಡಿದು ಸಂಭ್ರಮಿಸಿದರು.
ಪೊಂಗಲ್ ಹಬ್ಬದ ವೇಳೆಗೆ ತೆರೆಗೆ ಬರಬೇಕಿದ್ದ ‘ಜನ ನಾಯಗನ್’ ಚಿತ್ರ ಸೆನ್ಸಾರ್ ಪ್ರಕ್ರಿಯೆಯ ಅಡೆತಡೆಗಳನ್ನು ಎದುರಿಸಿದ ಬಳಿಕ ಜುಲೈ 23 ರಂದು ಭಾರತವೂ ಸೇರಿದಂತೆ ವಿಶ್ವಾದ್ಯಂತ ಅತ್ಯಂತ ಅದ್ದೂರಿಯಾಗಿ ತೆರೆ ಕಂಡಿದೆ.
‘ವಿಳಂಬದ ನಂತರ ಚಿತ್ರ ಬಿಡುಗಡೆಯಾಗಿರುವುದರಿಂದ ಸಂತೋಷವಾಗಿದೆ. ಆದರೆ ‘ಜನ ನಾಯಗನ್’ ವಿಜಯ್ ಅವರ ಕೊನೆಯ ಚಿತ್ರವಾಗಿರುವುದರಿಂದ ಬೇಸರವಾಗುತ್ತಿದೆ’ ಎಂದು ಅಭಿಮಾನಿಗಳು ಹೇಳಿದ್ದಾರೆ.
ಹೆಚ್. ವಿನೋತ್ ನಿರ್ದೇಶಿಸಿರುವ ಈ ರಾಜಕೀಯ ಆಕ್ಷನ್ ಚಿತ್ರದಲ್ಲಿ ವಿಜಯ್ ಮತ್ತು ಪೂಜಾ ಹೆಗ್ಡೆ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಬಾಬಿ ಡಿಯೋಲ್, ಮಾಮಿತಾ ಬೈಜು, ಪ್ರಕಾಶ್ ರಾಜ್, ಗೌತಮ್ ವಾಸುದೇವ್ ಮೆನನ್, ನರೇನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
—-





Be the first to comment