ಚಿತ್ರ: ಲೋ ನವೀನ
ನಿರ್ದೇಶಕರು: ಧನುರ್ಧಾರಿ ಪವನ್
ನಿರ್ಮಾಪಕರು: ಕೀರ್ತಿ ಸ್ವಾಮಿ
ತಾರಾಗಣ: ನವೀನ್ ಸಜ್ಜು, ವರ್ಷಾ ಗಿರಿಧರ್ ಮೊದಲಾದವರು…
ರೇಟಿಂಗ್ : 4/5
ಪ್ರೇಮಕಥೆಯನ್ನು ಎಷ್ಟೇ ರೀತಿ ಹೇಳಿದರೂ ಆಯಾ ತಲೆಮಾರಿಗೆ ಅದು ಹೊಸದು ಎನ್ನುವಂತೆ ಗೋಚರಿಸುತ್ತದೆ. ಇಂಥ ಸಂದರ್ಭದಲ್ಲಿ ಕಥೆಯೂ ಹೊಸದು, ಕಥೆಯ ನಿರೂಪಣೆಯೂ ಹೊಸದು ಎನ್ನುವಂಥಾದರೆ ಅದು ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ. ಅಂಥದೊಂದು ಚಿತ್ರವೇ ‘ಲೋ.. ನವೀನ’.
ಇದು ಹಳ್ಳಿಯೊಂದರಲ್ಲಿ ನಡೆಯುವ ಕಥೆ ಎನ್ನುವಂತೆ ಚಿತ್ರ ಆರಂಭವಾಗುತ್ತದೆ. ನವೀನ ಆ ಹಳ್ಳಿಯ ಮೋಸ್ಟ್ ಎಲಿಜಬಲ್ ಬ್ಯಾಚುಲರ್. ಆತನಿಗೆ ತನ್ನ ಮಾವನ ಮಗಳೆಂದರೆ ಪ್ರೀತಿ. ಆದರೆ ಅವಳಿಗೆ ಅದಾಗಲೇ ನಿಶ್ಚಿತಾರ್ಥವಾಗಿರುತ್ತದೆ. ಹೀಗಿದ್ದರೂ ಆ ಅತ್ತೆಯ ಮಗಳು ನವೀನನೊಡನೆ ರಾತ್ರೋ ರಾತ್ರಿ ಹೊರಟು ನಿಲ್ಲುತ್ತಾಳೆ. ಮುಂದೇನಾಗುತ್ತದೆ ಎನ್ನುವುದೇ ಚಿತ್ರದ ಹೈಲೈಟ್.
ಹಾಡಿನಿಂದಲೇ ಶುರುವಾಗುವ ಚಿತ್ರದಲ್ಲಿ ಹಾಡುಗಳು ಕೂಡ ಪ್ರಮುಖ ಆಕರ್ಷಣೆ. ಖುದ್ದು ಸಂಗೀತ ನೀಡಿ ಹಾಡಿರುವ ನವೀನ್ ಸಜ್ಜು, ಹಾಡುವಷ್ಟೇ ಸರಾಗವಾಗಿ ಅಭಿನಯಿಸಿದ್ದಾರೆ. ಹಳ್ಳಿಯ ಬರಗೆಟ್ಟ ಮುಗ್ದ ಪ್ರೇಮಿಯ ಎಲ್ಲ ಲಕ್ಷಣಗಳನ್ನು ತನ್ನ ಹಾವ, ಭಾವಗಳಲ್ಲಿ ತುಂಬಿಕೊಳ್ಳುವಲ್ಲಿ ನವೀನ್ ಸಜ್ಜು ಯಶಸ್ವಿಯಾಗಿದ್ದಾರೆ.
ನವೀನನ ಮಾವನ ಮಗಳು ಆಶಾ ಪಾತ್ರವನ್ನು ನವನಟಿ ವರ್ಷಾ ಗಿರಿಧರ್ ನಿರ್ವಹಿಸಿದ್ದಾರೆ. ಮೊದಲಾರ್ಧದಲ್ಲಿ ಇದ್ದರೆ ಇಂಥ ಮಾವನ ಮಗಳಿರಬೇಕು ಅನಿಸಿದರೆ ಮಧ್ಯಂತರದ ಬಳಿಕ ಅದರ ವಿರುದ್ಧ ಭಾವವನ್ನು ಮೂಡಿಸುವಲ್ಲಿ ವರ್ಷಾ ಗೆದ್ದಿದ್ದಾರೆ. ಹಳ್ಳಿ ಮತ್ತು ಬೆಂಗಳೂರು ಎರಡನ್ನು ಕೂಡ ಚಿತ್ರದಲ್ಲಿ ತೋರಿಸಲಾಗಿದೆ. ಈ ಎರಡೂ ಭಾಗಗಳಿಗೆ ಸಂಬಂಧಿಸಿದಂತೆ ನವೀನನ ಸ್ನೇಹಿತರ ಬಳಗವನ್ನು ಕೂಡ ಚೆನ್ನಾಗಿ ತೋರಿಸಲಾಗಿದೆ. ಅದರಲ್ಲೂ ಹಳ್ಳಿಯಲ್ಲಿ ಮದುವೆ ವಯಸ್ಸು ದಾಟಿದ ಹಿರಿಯ ಸ್ನೇಹಿತ ನಿಂಗಣ್ಣನ ಪಾತ್ರಧಾರಿ ಮತ್ತು ನಗರದಲ್ಲಿ ಅಡುಗೆ ಭಟ್ಟನಾಗಿ ನಟಿಸಿರುವ ಪ್ರಕಾಶ್ ತೂಮಿನಾಡು ಮನದೊಳಗೆ ಬಹಳ ಕಾಲ ಉಳಿದುಬಿಡುತ್ತಾರೆ.
ನವೀನನ ಹಳೆಯ ಭಗ್ನ ಪ್ರೇಮದ ಕಾಮಿಡಿ ಪ್ರಸಂಗಗಳೊಂದಿಗೆ ವಿನೂತನ ಪ್ರೇಮಕಥೆಯನ್ನೂ ಸೇರಿಸಿ ನಿರ್ದೇಶಕರು ರಸವತ್ತಾದ ಒಂದು ಪ್ರೇಮ ರಸಾಯನ ತಯಾರಿಸಿದ್ದಾರೆ.ಈ ರುಚಿಯನ್ನು ಸವಿಯದೇ ಹೋದರೆ ಅದು ಪ್ರೇಕ್ಷಕರ ಪಾಲಿಗೆ ನಷ್ಟ ಎಂದೇ ಹೇಳಬಹುದು.





Be the first to comment