ಬೇಲ್

‘ಬೇಲ್’ ಚಿತ್ರದ ‘ಕುಮಾರಿ’ ಹಾಡಿಗೆ ಹೆಜ್ಜೆ ಹಾಕಿದ ನಿವೇದಿತಾ ಗೌಡ!

ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಕುತೂಹಲ ಮೂಡಿಸಿರುವ, ಬಹುತಾರಾಗಣದ ಬಹುನಿರೀಕ್ಷಿತ ಚಿತ್ರ ‘ಬೇಲ್’ ಸಿನಿಮಾದಿಂದ ಬಹುನಿರೀಕ್ಷಿತ ಸ್ಪೆಷಲ್ ಹಾಡು ‘ಕುಮಾರಿ’ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. ಈ ಸಾಂಗ್‌ನಲ್ಲಿ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಹಾಗೂ ನಟಿ ನಿವೇದಿತಾ ಗೌಡ ತಮ್ಮ ಮೋಹಕ ಮೈಮಾಟ ಮತ್ತು ಸಖತ್ ಸ್ಟೆಪ್ಸ್‌ಗಳ ಮೂಲಕ ಪಡ್ಡೆಹೈಕ್ಳ ದಿಲ್ ಗೆದ್ದಿದ್ದಾರೆ. ಸದ್ಯ ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸುತ್ತಿರುವ ಈ ಹಾಡು ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಎಲ್ಲರ ಬಾಯಲ್ಲೂ ‘ಕುಮಾರಿ ಕುಮಾರಿ’ ಎಂದು ಗುನುಗುವಂತೆ ಮಾಡಿ ಭರ್ಜರಿ ಕ್ರೇಜ್ ಸೃಷ್ಟಿಸಿದೆ.

ಸಿನಿಮಾದ ಕಥಾಹಂದರದಲ್ಲಿ ಸಿನಿಮಾ ಶೂಟಿಂಗ್ ಹಿನ್ನೆಲೆಯಲ್ಲಿ ಬರುವಂತಹ ಈ ಕಲರ್‌ಫುಲ್ ಡ್ಯಾನ್ಸ್ ನಂಬರ್‌ನಲ್ಲಿ ನಿವೇದಿತಾ ಗೌಡ ಅವರೊಂದಿಗೆ ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ ‘ಲೂಸ್ ಮಾದ’ ಯೋಗಿ ಕೂಡ ಸಖತ್ ಎನರ್ಜಿಟಿಕ್ ಆಗಿ ಹೆಜ್ಜೆ ಹಾಕಿದ್ದಾರೆ. ಯೋಗಿ ಮತ್ತು ನಿವೇದಿತಾ ಅವರ ಡ್ಯಾನ್ಸ್ ಕೆಮಿಸ್ಟ್ರಿ ಹಾಗೂ ಆಕರ್ಷಕ ಮೂವ್ಸ್‌ಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಅವರ ಟ್ರೆಂಡಿ ಬೀಟ್ಸ್‌ಗೆ ನಿರ್ದೇಶಕ ಪವನ್ ಒಡೆಯರ್ ಕ್ಯಾಚಿ ಸಾಹಿತ್ಯ ಬರೆದಿದ್ದು, ಪ್ರಸಿದ್ಧ ಗಾಯಕರಾದ ನಕಾಶ್ ಅಜೀಜ್ ಹಾಗೂ ಮಂಗ್ಲಿ ಜಂಟಿಯಾಗಿ ತಮ್ಮ ಕಂಠದ ಮೂಲಕ ಹಾಡಿಗೆ ಇನ್ನಷ್ಟು ಹುರುಪು ತುಂಬಿದ್ದಾರೆ.

ಬೇಲ್

ಪ್ರತಿಷ್ಠಿತ ‘ಕೆವಿಎನ್ ಪ್ರೊಡಕ್ಷನ್ಸ್’ ಬ್ಯಾನರ್‌ನಡಿ ಖ್ಯಾತ ನಿರ್ಮಾಪಕ ವೆಂಕಟ್ ಕೆ. ನಾರಾಯಣ ಅವರು ಅತ್ಯಂತ ಅದ್ಧೂರಿ ಬಜೆಟ್‌ನಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಸಂಪೂರ್ಣ ಜವಾಬ್ದಾರಿಯನ್ನು ಪವನ್ ಒಡೆಯರ್ ಹೊತ್ತಿದ್ದಾರೆ. ಚಿತ್ರಕ್ಕೆ ವೈದಿ ಎಸ್. ಅವರ ಕಣ್ಮನ ಸೆಳೆಯುವ ಛಾಯಾಗ್ರಹಣವಿದ್ದು, ಶಶಾಂಕ್ ನಾರಾಯಣ್ ಅವರ ಸಂಕಲನವಿದೆ. ಕಮರ್ಷಿಯಲ್ ಅಂಶಗಳ ಜೊತೆಗೆ ಗಟ್ಟಿತನದ ಕಥೆಯನ್ನೊಳಗೊಂಡ ಈ ಸಿನಿಮಾ ಪ್ರೇಕ್ಷಕರಲ್ಲಿ ದಿನದಿಂದ ದಿನಕ್ಕೆ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡುತ್ತಿದೆ.

ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್, ಸಾಯಿಕುಮಾರ್, ಮಲಯಾಳಂ ಖ್ಯಾತ ನಟ ಜಯರಾಮ್, ಲೂಸ್ ಮಾದ ಯೋಗಿ, ದೀಕ್ಷಿತ್ ಶೆಟ್ಟಿ ಹಾಗೂ ಸಂಜನಾ ಆನಂದ್ ಸೇರಿದಂತೆ ದಕ್ಷಿಣ ಭಾರತದ ಘಟಾನುಘಟಿ ಕಲಾವಿದರ ಬಹುದೊಡ್ಡ ತಾರಾಗಣವಿದೆ. ‘ಕುಮಾರಿ’ ಹಾಡಿನ ಮೂಲಕ ಸಿನಿರಸಿಕರ ನಾಡಿಮಿಡಿತ ಹೆಚ್ಚಿಸಿರುವ ಚಿತ್ರತಂಡ, ಗಾಂಧಿ ಜಯಂತಿಯ (ಅಕ್ಟೋಬರ್‌ 2) ವಿಶೇಷ ಸಂದರ್ಭವಾಗಿ ಇದೇ ಅಕ್ಟೋಬರ್ 2ರಂದು ‘ಬೇಲ್’ ಚಿತ್ರವನ್ನು ವಿಶ್ವಾದ್ಯಂತ ಬೆಳ್ಳಿತೆರೆಗೆ ತರಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!