ಕನ್ನಡದ ಸುರದ್ರೂಪಿ ಹಾಗೂ ಪ್ರತಿಭಾವಂತ ನಟ ಸಂತೋಷ್ ಬಾಲರಾಜ್ ಅನಿರೀಕ್ಷಿತ ಸಾವು ಎಲ್ಲರಿಗೂ ತುಂಬಾ ನೋವು ತಂದ ವಿಷಯ. ಸಂತೋಷ್ ಬಾಲರಾಜ್ ಅವರು ನಿಧನರಾಗುವುದಕ್ಕೂ ಮೊದಲು “ಬೆಂಟ್ಲಿ” ಎಂಬ ಚಿತ್ರದಲ್ಲಿ ನಟಿಸಿದ್ದರು ಹಾಗೂ ನಿರ್ದೇಶನವನ್ನು ಮಾಡಿದ್ದರು. ಸಂತೋಷ್ ಬಾಲರಾಜ್ ಅವರ ತಂದೆ ಆನೇಕಲ್ ಬಾಲರಾಜ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದರು. ವಿಪರ್ಯಾಸವೆಂದರೆ ಆನೇಕಲ್ ಬಾಲರಾಜ್ ಹಾಗೂ ಸಂತೋಷ್ ಬಾಲರಾಜ್ ಇಬ್ಬರು ಈಗ ನಿಧನರಾಗಿದ್ದಾರೆ. ಸಹೋದರ ಸಂತೋಷ್ ಬಾಲರಾಜ್ ಹಾಗೂ ತಂದೆ ಆನೇಕಲ್ ಬಾಲರಾಜ್ ಅವರ ಕನಸಿನ ಕೂಸಾಗಿದ್ದ ಈ ಚಿತ್ರವನ್ನು ಸಂತೋಷ್ ಬಾಲರಾಜ್ ಅವರ ಸಹೋದರಿ ಹಾಗೂ ಆನೇಕಲ್ ಬಾಲರಾಜ್ ಅವರ ಪುತ್ರಿ ಶ್ವೇತ ಬಾಲರಾಜ್ ಪೂರ್ಣಗೊಳಿಸಿ ತೆರೆಗೆ ತರಲು ಸಿದ್ದತೆ ಮಾಡಿಕೊಂಡಿದ್ದಾರೆ. ಸೆಪ್ಟೆಂಬರ್ 18 ರಂದು ಈ ಚಿತ್ರ ಬಿಡುಗಡೆಯಾಗಲಿದೆ. ಚಿತ್ರ ಬಿಡುಗಡೆಗೂ ಪೂರ್ವದಲ್ಲಿ ಇತ್ತೀಚೆಗೆ ಟ್ರೇಲರ್ ಹಾಗೂ ಹಾಡುಗಳ ಪ್ರದರ್ಶನದ ಜೊತೆಗೆ ಪತ್ರಿಕಾಗೋಷ್ಠಿ ನಡೆಯಿತು. ಹಿರಿಯ ನಟಿ ಶೃತಿ, ನಿರ್ಮಾಪಕಿ ಶ್ವೇತ ಬಾಲರಾಜ್, ಶ್ವೇತ ಬಾಲರಾಜ್ ಅವರ ಪತಿ ಹಾಗೂ ನಟ ಅಶೋಕ್, MAARSS DIGITAL MUSIC AND ENTERTAINMENT LLP ಸಂಸ್ಥೆ ಮೂಲಕ ಚಿತ್ರವನ್ನು ವಿತರಣೆ ಮಾಡುತ್ತಿರುವ ಭರತ್ ಜೈನ್, ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಹಾಗೂ ನಟ ಪ್ರದೀಪ್ ದೊಡ್ಡಯ್ಯ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ನಮ್ಮ ಮಾವ ಆನೇಕಲ್ ಬಾಲರಾಜ್ ಹಾಗೂ ಭಾವಮೈದುನ ಸಂತೋಷ್ ಬಾಲರಾಜ್ ಅವರು ಇಲ್ಲದೆ ಈ ಸಮಾರಂಭ ನಡೆಯುತ್ತಿರುವುದು ನೋವಿನ ಸಂಗತಿ. ನಾನು ಕೂಡ ಈ ಚಿತ್ರದಲ್ಲಿ ನಟಿಸಿದ್ದೇನೆ. ವಿಲನ್ ಪಾತ್ರ. ಸಂತೋಷ್’ಅವರು ನಿಧನರಾಗುವುದಕ್ಕೆ ಮೊದಲೆ ಈ ಚಿತ್ರದ ತಮ್ಮ ಭಾಗದ ಕೆಲಸವನ್ನು ಪೂರ್ಣ ಮಾಡಿದ್ದರು. ಈಗ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ. ಟ್ರೇಲರ್ ಗೆ ಲೂಸ್ ಮಾದ ಯೋಗಿ ಧ್ವನಿ ನೀಡಿದ್ದಾರೆ. ಹಲವಾರು ಸ್ನೇಹಿತರು ಸಹಕಾರ ನೀಡಿದ್ದಾರೆ ಎಲ್ಲರಿಗೂ ಧನ್ಯವಾದ ಎಂದರು ನಟ ಹಾಗೂ ನಿರ್ಮಾಪಕಿ ಶ್ವೇತ ಬಾಲರಾಜ್ ಅವರ ಪತಿ ಅಶೋಕ್.

ಇದು ನನ್ನ ತಂದೆ ಹಾಗೂ ತಮ್ಮನ ಕನಸಿನ ಕೂಸು. ಈ ಚಿತ್ರವನ್ನು ಸೆಪ್ಟೆಂಬರ್ 18 ರಂದು ತೆರೆಗೆ ತರುತ್ತಿದ್ದೇವೆ. ಭರತ್ ಜೈನ್ ಅವರು ನಮ್ಮ ಚಿತ್ರ ವಿತರಣೆ ಮಾಡುತ್ತಿದ್ದಾರೆ. ನನ್ನ ಪತಿ ಅಶೋಕ್ ಅವರು ಸಹಕಾರ ನೀಡಿದ್ದಾರೆ. ಇಂದು ಆಗಮಿಸಿರುವ ನಟಿ ಶೃತಿ ಅವರಿಗೆ ಹಾಗೂ ನಟ ಪ್ರದೀಪ್ ಅವರಿಗೆ ಧನ್ಯವಾದ. ನನಗೆ ಹೆಚ್ಚು ಮಾತನಾಡಲು ಆಗುತ್ತಿಲ್ಲ ಎಂದು ತಂದೆ ಹಾಗೂ ಸಹೋದರನನ್ನು ನೆನೆದು ನಿರ್ಮಾಪಕಿ ಶ್ವೇತ ಬಾಲರಾಜ್ ಭಾವುಕರಾದರು.
ಒಂದು ಚಿತ್ರ ಇನ್ನೇನು ಬಿಡುಗಡೆಯಾಗುತ್ತಿದೆ ಎಂದರೆ ಎಲ್ಲಿಲ್ಲದ ಸಂಭ್ರಮ ಮನೆ ಮಾಡಿರುತ್ತದೆ. ಆದರೆ, ಸಂತಾಪ ಸೂಚಿಸಿ ಸಮಾರಂಭ ಮಾಡುತ್ತಿರುವುದು ನೋವಿನ ಸಂಗತಿ ಎಂದು ಮಾತನಾಡಿದ ನಟಿ ಶೃತಿ, ಈ ಸಿನಿಮಾದಲ್ಲಿ ನಾನು ಭಾಗವಹಿಸಿ ಬಹಳ ವರ್ಷಗಳಾಗಿದೆ. ನನ್ನ ಪಾತ್ರ ಕೂಡ ಹೆಚ್ಚು ನೆನಪಿಲ್ಲ. ಆದರೆ, ತಂದೆ ಹಾಗೂ ಸಹೋದರನ ಕೊನೆಯ ಆಸೆಯನ್ನು ಹೆಣ್ಣುಮಗಳಾಗಿ ಶ್ವೇತ ಅವರು ಈಡೇರಿಸುತ್ತಿರುವುದು ನನಗೆ ಬಹಳ ಖುಷಿಯಾಗಿದೆ. ನಟಿಯಾಗಿ ನಾನು ಅಭಿನಯಿಸಿರುವ ಸಿನಿಮಾದ ಸಮಾರಂಭಕ್ಕೆ ಬರುವುದು ನನ್ನ ಕರ್ತವ್ಯ. ಈ ಚಿತ್ರದ ನಿರ್ಮಾಪಕರು ಹಾಗೂ ನಾಯಕ ನಮ್ಮೊಂದಿಗಿಲ್ಲದೆ ಈ ಚಿತ್ರ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಎಲ್ಲರು ನೋಡಿ ಯಶಸ್ವಿ ಮಾಡಿದರೆ ಅವರಿಗೆ ನಿಜಕ್ಕೂ ಖುಷಿಯಾಗುತ್ತದೆ ಎಂದರು.
ನನಗೆ ಆನೇಕಲ್ ಬಾಲರಾಜ್ ಅವರು ಬಾಲ್ಯದಿಂದಲೂ ಪರಿಚಯ. ಅವರ ನಿರ್ಮಾಣದ ಸಾಕಷ್ಟು ಚಿತ್ರಗಳ ಹಾಡುಗಳು ನಮ್ಮ ಜಂಕಾರ್ ಸಂಸ್ಥೆ ಮೂಲಕ ಬಿಡುಗಡೆಯಾಗಿದೆ . ಈಗ “ಬೆಂಟ್ಲಿ” ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಸಹ ನಮ್ಮ ಜಂಕಾರ್ ಯೂಟ್ಯೂಬ್ ಚಾನಲ್ ಮೂಲಕವೇ ಬಿಡುಗಡೆಯಾಗಿದೆ. ಈ ಚಿತ್ರವನ್ನು ಬಿಡುಗಡೆ ಮಾಡಬೇಕೆಂದು ಶ್ವೇತ ಅವರು ಕೇಳಿದರು. ನಮ್ಮ MAARSS DIGITAL MUSIC AND ENTERTAINMENT LLP ಸಂಸ್ಥೆ ಮೂಲಕ ಈ ಚಿತ್ರವನ್ನು ವಿತರಣೆ ಮಾಡುತ್ತಿದ್ದೇವೆ. ಸೆಪ್ಟೆಂಬರ್ 18 ರಂದು ಚಿತ್ರ ಬಿಡುಗಡೆಯಾಗುತ್ತಿದೆ ಎಂದರು ವಿತರಕ ಭರತ್ ಜೈನ್.
ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಹಾಗೂ ನಟ ಪ್ರದೀಪ್ ದೊಡ್ಡಯ್ಯ ಸಹ “ಬೆಂಟ್ಲಿ” ಚಿತ್ರದ ಕುರಿತು ಮಾತನಾಡಿದರು.
ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಕೆ.ಕೆ ಹಾಗೂ ಗುಂಡ್ಲುಪೇಟೆ ಸುರೇಶ್ ಛಾಯಾಗ್ರಹಣವಿರುವ ಈ ಚಿತ್ರ ಆಕ್ಷನ್ ಮೆಲೋಡಿ ಡ್ರಾಮಾ ಕಥಾಹಂದರ ಹೊಂದಿದೆ. ಹೆಸರಾಂತ ಮಾರ್ಸ್ ಡಿಜಿಟಲ್ ಮ್ಯೂಸಿಕ್ & ಎಂಟರ್ಟೈನ್ಮೆಂಟ್ ಎಲ್ ಎಲ್ ಪಿ ಸಂಸ್ಥೆ ಈ ಚಿತ್ರದ ವಿತರಣೆ ಹಕ್ಕನ್ನು ಪಡೆದುಕೊಂಡಿದೆ.
ಸಂತೋಷ್ ಬಾಲರಾಜ್ ಅವರಿಗೆ ನಾಯಕಿಯಾಗಿ ಸಿಮ್ರಾನ್ ನಾಟೇಕರ್ ನಟಿಸಿದ್ದಾರೆ. ಶೃತಿ, ಚರಣ್ ರಾಜ್, ಬಲ ರಾಜ್ ವಾಡಿ, ಅಶೋಕ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.





Be the first to comment