ಕರಾವಳಿ

Movie Review: ಕಣ್ಸೆಳೆಯುವ ಕರಾವಳಿಯ ಕಂಬಳ ವೈಭವ

ಚಿತ್ರ: ಕರಾವಳಿ
ನಿರ್ದೇಶನ: ಗುರುದತ್ತ ಗಾಣಿಗ
ನಿರ್ಮಾಣ: ಗುರುದತ್ತ ಗಾಣಿಗ ಮತ್ತು ವಿನೋದ್ ಕುಮಾರ್ ಎಸ್
ತಾರಾಗಣ: ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ, ಮಿತ್ರ, ಸಂಪದ ಮೊದಲಾದವರು….
ರೇಟಿಂಗ್ : 3.5/5

ಕಂಬಳವನ್ನೇ ಪ್ರಧಾನ ಕಥೆಯಾಗಿಸಿ ಇಂಥದೊಂದು‌ ಚಿತ್ರ ತೆಗೆದಿರುವುದು ವಿಶೇಷ. ಹಾಗಾಗಿಯೇ ಇದು ನಭೂತೋ ನಭವಿಷ್ಯತಿ ಎಂದೇ ಹೇಳಬಹುದು. ಯಾಕೆಂದರೆ ಚಿತ್ರದಲ್ಲಿ ಇಬ್ಬರು ಸ್ಟಾರ್ ನಾಯಕರಿದ್ದರೂ ಕಥೆ ಪೂರ್ತಿಯಾಗಿ ಕಂಬಳದ ಸುತ್ತವೇ ಸುತ್ತುತ್ತದೆ.

ಆದಿಶೇಷ ಊರಿಗೆ ದೊಡ್ಡವನು. ಆತನ ಮನೆತನದವರು ತಲೆಮಾರಿನಿಂದ ಕೋಟಿ ಚೆನ್ನಯ್ಯ ಕಂಬಳವನ್ನು ನಡೆಸಿಕೊಂಡು ಬಂದಿರುತ್ತಾರೆ.‌ ಆದರೆ ಪ್ರತಿ ಬಾರಿಯೂ ಆತನ ಮನೆತನದಿಂದ ಸ್ಪರ್ಧಿಸುವ ಜೋಡು ಕೋಣಗಳೇ ಗೆಲ್ಲುತ್ತವೆ. ಆ ಜೋಡಿ‌ಕೋಣಗಳನ್ನು ಓಡಿಸುವಾತನ ಹೆಸರು ಮಹಾವೀರ. ಆದರೆ ಆದಿಶೇಷ ಮತ್ತು ಮಹಾವೀರ ಬೇರಾಗುತ್ತಾರೆ. ಪರಿಣಾಮ ಏನಾಗುತ್ತದೆ ಎನ್ನುವುದೇ ಚಿತ್ರದ ಕಥೆ.

ಮಹಾವೀರನಾಗಿ ರಾಜ್ ಬಿ ಶೆಟ್ಟಿ ನಟಿಸಿದ್ದಾರೆ. ಅವರು ಇಡೀ ಕಂಬಳದ ಸಂಭ್ರಮವನ್ನು ತಮ್ಮ ಕಂಗಳಲ್ಲಿ ತುಂಬಿಕೊಂಡಿದ್ದಾರೆ. ಮೂರು ದಶಕಗಳ ಬಳಿಕ ಕಂಬಳಕ್ಕೆ ಮರುಜೀವ ನೀಡುವ ಧನಂಜಯನಾಗಿ ಪ್ರಜ್ವಲ್ ದೇವರಾಜ್ ನಟಿಸಿದ್ದಾರೆ. ಅವರು ಕರಾವಳಿಯ ವ್ಯಕ್ತಿಯಾಗಿಯೇ ಕಾಣಿಸಿಕೊಂಡಿದ್ದಾರೆ. ದನಕರುಗಳ ಮೇಲಿನ‌ ಪ್ರೇಮ, ಹೊಡೆದಾಟ ಸೇರಿದಂತೆ ವೈವಿಧ್ಯಮಯ ಭಾವಗಳನ್ನು ಪ್ರದರ್ಶಿಸುವ ಅವಕಾಶ ಪಡೆದಿದ್ದಾರೆ. ಆದಿಶೇಷನಾಗಿ ರಮೇಶ್ ಇಂದಿರಾ ನಟನೆ ಅದ್ಭುತವಾಗಿ ಮೂಡಿ ಬಂದಿದೆ. ಉಳಿದಂತೆ ಮಹಾಬಲ ಎನ್ನುವ ಪ್ರಮುಖ ಪಾತ್ರವನ್ನು ಮಿತ್ರ ನಿಭಾಯಿಸಿದ್ದಾರೆ. ಚಿತ್ರದ ಉದ್ದಕ್ಕೂ ಮಹಾಬಲನ ನಟನೆ ಗಮನ ಸೆಳೆಯುತ್ತದೆ.

ಪ್ರಜ್ವಲ್ ಗೆ ಜೋಡಿಯಾಗಿ ಸಂಪದ ಮನ ಸೆಳೆಯುತ್ತಾರೆ. ರಾಜ್ ಬಿ ಶೆಟ್ಟಿ ಜೋಡಿಯಾಗಿ ಸುಶ್ಮಿತಾ ಭಟ್ ಅವರಿಗೆ ಹೆಚ್ಚಿನ ಅವಕಾಶಗಳಿಲ್ಲ. ವಿದ್ಯಾಮೂರ್ತಿ, ಗೋವಿಂದೇಗೌಡ ಸೇರಿದಂತೆ ಇನ್ನೊಂದಷ್ಟು ಪಾತ್ರಗಳು ಚಿತ್ರದಲ್ಲಿ ವಿಶೇಷ ಗಮನ ಸೆಳೆಯುತ್ತವೆ. ಸಚಿನ್ ಬಸ್ರೂರು ಸಂಗೀತದ ಹಾಡುಗಳು ಮತ್ತು ಹಿನ್ನೆಲೆ ಸಂಗೀತವನ್ನು ಮೆಚ್ಚಲೇಬೇಕು.

ಕರಾವಳಿಯ ಯಕ್ಷಗಾನದಿಂದ ಆರಂಭಿಸಿ ಮಳೆ, ಕೆಸರಿನೊಂದಿಗೆ ಕಂಬಳದ ಕಳೆಯನ್ನು ಕಟ್ಟಿಕೊಡುವ ಕರಾವಳಿ ಚಿತ್ರ ಪ್ರೇಕ್ಷಕರಿಗೆ ಒಂದು ಅದ್ಭುತ ಅನುಭವ ನೀಡುವ ಕಲಾಕವಿತೆಯಂತೆ ಮೂಡಿ ಬಂದಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!