ಗ್ರಾಮಾಯಣ

‘ಗ್ರಾಮಾಯಣ’ದ ‘ಏನೇ ಹೇಳು ಕುಸುಮ’ ಹಾಡಿಗೆ ಮೆಚ್ಚುಗೆಯ ಮಹಾಪೂರ

ಲಹರಿ ಫಿಲಂಸ್ ನಿರ್ಮಾಣದ, ದೇವನೂರು ಚಂದ್ರು ರಚನೆ – ನಿರ್ದೇಶನದ ಹಾಗೂ ವಿನಯ್ ರಾಜಕುಮಾರ್ – ಮೇಘ ಶೆಟ್ಟಿ ನಾಯಕ – ನಾಯಕಿಯಾಗಿ ಅಭಿನಯಿಸಿರುವ “ಗ್ರಾಮಾಯಣ” ಚಿತ್ರದ “ಏನೇ ಹೇಳು ಕುಸುಮ” ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ಲಹರಿ ವೇಲು ಈ ಹಾಡನ್ನು ಅನಾವರಣ ಮಾಡಿದರು. ಪ್ರಮೋದ್ ಮರವಂತೆ ಬರೆದು, ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿರುವ ಈ ಹಾಡನ್ನು ನಿಹಾಲ್ ತವ್ರೊ ಹಾಗೂ ಸಾಕ್ಷಿ ಕಲ್ಲೂರ್ ಹಾಡಿದ್ದಾರೆ. ಹಾಡು ಬಿಡುಗಡೆಯಾದ ಕ್ಷಣದಿಂದಲೇ ಮೆಚ್ಚುಗೆಯ ಮಾಹಾಪೂರವೇ ಹರಿದು ಬರುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಚಿತ್ರ ಜುಲೈ 3 ರಂದು ತೆರೆಗೆ ಬರುತ್ತಿದೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಚಿತ್ರದ ಐದನೇ ಹಾಡನ್ನು ಬಿಡುಗಡೆ ಮಾಡಿ ಮಾತನಾಡಿದ ನಿರ್ಮಾಪಕ ಲಹರಿ ವೇಲು, “ಗ್ರಾಮಾಯಣ” ನಮ್ಮ ಲಹರಿ ಸಂಸ್ಥೆ ನಿರ್ಮಾಣದ ಒಂಭತ್ತನೇ ಚಿತ್ರ. ಒಂಭತ್ತು ನಮ್ಮ ಸಂಸ್ಥೆಗೆ ಅದೃಷ್ಟದ ಸಂಖ್ಯೆ. ಸುವರ್ಣ ವರ್ಷದ ಸಂಭ್ರಮದಲ್ಲಿರುವ ನಮ್ಮ ಸಂಸ್ಥೆಯಿಂದ ಗ್ರಾಮೀಣ ಸೊಗಡಿನ ಒಂದೊಳ್ಳೆ ಸದಭಿರುಚಿಯ ಚಿತ್ರ ನಿರ್ಮಾಣವಾಗಿರುವುದು ಖುಷಿಯಾಗಿದೆ. ನಿರ್ದೇಶಕ ದೇವನೂರು ಚಂದ್ರು ಒಂದೊಳ್ಳೆ ಚಿತ್ರ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಒಂಭತ್ತು ಹಾಡುಗಳಿದೆ. ಇಂದು ಐದನೇ ಹಾಡು ಬಿಡುಗಡೆಯಾಗಿದೆ. ಈ ಹಾಡು ಬಹಳ ಚೆನ್ನಾಗಿದೆ. ಈ ಹಿಂದೆ ಶಿವರಾಜಕುಮಾರ್ ಅವರು ಬಿಡುಗಡೆ ಮಾಡಿದ್ದ “ಬೆಂಕಿ” ಹಾಡು ಸೂಪರ್ ಹಿಟ್ ಆಗಿದೆ. ಚಿತ್ರ ಜುಲೈ 3 ರಂದು ತೆರೆಗೆ ಬರುತ್ತಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.

ಗ್ರಾಮಾಯಣ

“ಏನೇ ಹೇಳು ಕುಸುಮ” ಒಂದು ಮೆಲೋಡಿ ಹಾಡು. ಕೇಳುತ್ತಾ, ಕೇಳುತ್ತಾ ಮನಸ್ಸಿಗೆ ಮುಟ್ಟುವ ಗುಣ ಮೆಲೋಡಿ ಹಾಡುಗಳದ್ದು. ಇಂತಹ ಉತ್ತಮ ಹಾಡು ಕೊಟ್ಟ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅವರಿಗೆ, ಹಾಡು ಬರೆದುಕೊಟ್ಟ ಪ್ರಮೋದ್ ಮರವಂತೆ ಅವರಿಗೆ ಹಾಗೂ ಗಾಯಕ – ಗಾಯಕಿಗೆ ಧನ್ಯವಾದ. “ಗ್ರಾಮಾಯಣ”, ಗ್ರಾಮೀಣ ಸೊಗಡಿನ ಸಿನಿಮಾ. ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳಿರುವ ಸಿನಿಮಾ ಕೂಡ. ಈವರೆಗೂ ಮಾಡಿರದ ಪಾತ್ರದಲ್ಲಿ ವಿನಯ್ ರಾಜಕುಮಾರ್ ಅಭಿನಯಿಸಿದ್ದಾರೆ. ಮೇಘ ಶೆಟ್ಟಿ ಅವರದು ಕೂಡ ವಿಭಿನ್ನ ಪಾತ್ರ. ಅಚ್ಯುತಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಸಾಗರ್, ಬಲ ರಾಜವಾಡಿ, ಅಪರ್ಣ ವಸ್ತಾರೆ, ಸೀತಾ ಕೋಟೆ, ಪ್ರಶಾಂತ್ ಹೊನ್ನಾಳಿ, ಅವಿನಾಶ್ ರೈ ಹೀಗೆ ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಇರುವ ಈ ಚಿತ್ರದ ವಿಶೇಷ ಪಾತ್ರದಲ್ಲಿ ಲೂಸ್ ಮಾದ ಯೋಗಿ ಅಭಿನಯಿಸಿದ್ದಾರೆ. ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣ ಕೂಡ ಚಿತ್ರಕ್ಕೆ ಪೂರಕವಾಗಿದೆ. ಒಟ್ಟಾರೆ ಇಡೀ ತಂಡದ ಶ್ರಮದಿಂದ “ಗ್ರಾಮಾಯಣ” ಒಂದೊಳ್ಳೆ ಚಿತ್ರವಾಗಿ ಇದೇ ಜುಲೈ 3 ರಂದು ನಿಮ್ಮ ಮುಂದೆ ಬರಲಿದೆ ಎಂದರು ನಿರ್ದೇಶಕ ದೇವನೂರು ಚಂದ್ರು.

ಕಲಾವಿದರ ಸಂಘದ ಆವರಣದಲ್ಲೇ ಅಪ್ಪ, ದೊಡ್ಡಪ್ಪ ಹಾಗೂ ಚಿಕ್ಕಪ್ಪ ಅವರಿಂದ ಈ ಚಿತ್ರಕ್ಕೆ ಚಾಲನೆ ದೊರಕಿತ್ತು. ಈಗ ಇದೇ ಜಾಗದಲ್ಲೇ ಚಿತ್ರದ ಬಿಡುಗಡೆ ದಿನಾಂಕ ಕೂಡ ಘೋಷಣೆಯಾಗಿರುವುದು ಸಂತೋಷವಾಗಿದೆ. ಇದು ನಾನು ನಾಯಕನಾಗಿ ನಟಿಸಿರುವ ಒಂಭತ್ತನೆಯ ಚಿತ್ರ. ಪೂರ್ಣಚಂದ್ರ ತೇಜಸ್ವಿಯವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡು ಸೇರಿದಂತೆ ಎಲ್ಲಾ ಹಾಡುಗಳು ಚೆನ್ನಾಗಿದೆ. ಜುಲೈ 3 ರಂದು ಬಿಡುಗಡೆಯಾಗುತ್ತಿರುವ ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ನಾಯಕ ವಿನಯ್ ರಾಜಕುಮಾರ್ ಹೇಳಿದರು.

ಗ್ರಾಮಾಯಣ

ಈ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ. ಕುಸುಮ ನನ್ನ ಪಾತ್ರದ ಹೆಸರು. ಇಂದು ಅದೇ ಹೆಸರಿನಿಂದ ಹಾಡೊಂದು ಬಿಡುಗಡೆಯಾಗಿದೆ. ಹಾಡು ಚೆನ್ನಾಗಿದೆ ಎಂದು ನಾಯಕಿ ಮೇಘ ಶೆಟ್ಟಿ ತಿಳಿಸಿದರು.

ನಾನು “ಲೂಸಿಯಾ” ಚಿತ್ರದಿಂದ ಪೂರ್ಣಚಂದ್ರ ತೇಜಸ್ವಿಯವರನ್ನು ಬಲ್ಲೆ. ಉತ್ತಮ ಸಂಗೀತ ನಿರ್ದೇಶಕರು ಅವರು. ನಮ್ಮ “ಗ್ರಾಮಾಯಣ” ಚಿತ್ರದಲ್ಲೂ ಒಂಭತ್ತು ಸುಮಧುರ ಹಾಡುಗಳಿದೆ. ಎಲ್ಲಾ ಹಾಡುಗಳು ಒಂದಕ್ಕಿಂತ ಒಂದು ಚೆನ್ನಾಗಿದೆ . ದೇವನೂರು ಚಂದ್ರು ಅವರ ನಿರ್ದೇಶನ, ತಂತ್ರಜ್ಞರ ಕಾರ್ಯ ವೈಖರಿ ಹಾಗೂ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ ಎಂದು ನಿರ್ಮಾಪಕ ನವೀನ್ ಮನೋಹರ್ ಹೇಳಿದರು.

ಹಾಡುಗಳ ಕುರಿತು ಸಂಗೀತ ಸಂಯೋಜಕ ಪೂರ್ಣಚಂದ್ರ ತೇಜಸ್ವಿ ಮಾಹಿತಿ ನೀಡಿದರು. ಗೀತರಚನೆಕಾರ ಪ್ರಮೋದ್ ಮರವಂತೆ ಹಾಗೂ ಗಾಯಕಿ ಸಾಕ್ಷಿ ಕಲ್ಲೂರ್ “ಏನೇ ಹೇಳು ಕುಸುಮ” ಹಾಡಿನ ಬಗ್ಗೆ ಮಾತನಾಡಿದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!