‘ಬ್ಯಾಚುಲರ್ ಪಾರ್ಟಿ’ ಚಿತ್ರದಲ್ಲಿ ಅನುಮತಿಯಿಲ್ಲದೆ ಎರಡು ಹಾಡುಗಳನ್ನು ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ, ನಿರ್ದೇಶಕ, ನಿರ್ಮಾಪಕ ರಕ್ಷಿತ್ ಶೆಟ್ಟಿ ಒಟ್ಟು 25 ಲಕ್ಷ ರೂಪಾಯಿ ಪಾವತಿಸುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.
ಕೋರ್ಟ್ ರಕ್ಷಿತ್ ಶೆಟ್ಟಿ ಅವರ ನಿರ್ಮಾಣ ಸಂಸ್ಥೆಯಾದ ‘ಪರಂವಾ ಸ್ಟುಡಿಯೋಸ್’ಗೆ ದಂಡ ವಿಧಿಸಿದೆ. 2020ರ ಹಕ್ಕುಸ್ವಾಮ್ಯ ಒಪ್ಪಂದದ ಪ್ರಕಾರ ‘ನ್ಯಾಯ ಎಲ್ಲಿದೆ’ ಮತ್ತು ‘ಒಮ್ಮೆ ನಿನ್ನನ್ನು’ ಎರಡು ಹಾಡುಗಳ ಮಾಲೀಕತ್ವ ತಮ್ಮದಾಗಿದೆ ಎಂದು ‘ಎಮ್‌ಆರ್‌ಟಿ ಮ್ಯೂಸಿಕ್ ಸಂಸ್ಥೆ ವಾದಿಸಿತ್ತು. ‘ಬ್ಯಾಚುಲರ್ ಪಾರ್ಟಿ’ ಚಿತ್ರದಲ್ಲಿ ಈ ಹಾಡುಗಳನ್ನು ಅನುಮತಿ ಪಡೆಯದೇ ಬಳಸಿಕೊಳ್ಳಲಾಗಿತ್ತು ಎಂದು ಎಮ್‌ಆರ್‌ಟಿ ಮ್ಯೂಸಿಕ್ ಆರೋಪಿಸಿತ್ತು.
ವಿಚಾರಣೆ ವೇಳೆ ರಕ್ಷಿತ್ ಶೆಟ್ಟಿ ವಾದ ಮಂಡಿಸಿದರೂ ಅದು ನ್ಯಾಯಾಲಯಕ್ಕೆ ಮನವರಿಕೆಯಾಗಿಲ್ಲ. ‘ನ್ಯಾಯ ಎಲ್ಲಿದೆ’ ಹಾಡನ್ನು ಕೇವಲ 7 ಸೆಕೆಂಡ್, ‘ಒಮ್ಮೆ ನಿನ್ನನ್ನು’ ಹಾಡನ್ನು 31 ಸೆಕೆಂಡ್ ಮಾತ್ರ ಬಳಸಲಾಗಿದೆ. ಇದು ಅತೀ ಕಡಿಮೆ ಅವಧಿ ಆಗಿರುವುದರಿಂದ ಹಕ್ಕುಸ್ವಾಮ್ಯ ಉಲ್ಲಂಘನೆಯಾಗುವುದಿಲ್ಲ ಎಂದು ವಾದಿಸಲಾಗಿತ್ತು.
ರಕ್ಷಿತ್ ಶೆಟ್ಟಿ ವಾದವನ್ನು ತಿರಸ್ಕರಿಸಿದ ನ್ಯಾಯಾಲಯ ‘ಹಾಡುಗಳ ಬಳಕೆಯು ಕೇವಲ ಕಾಕತಾಳೀಯವಲ್ಲ. ಸಿನಿಮಾದ ಕಥೆಯ ನಿರೂಪಣೆಗೆ ಪೂರಕವಾಗಿ ಮತ್ತು ವಾಣಿಜ್ಯ ಲಾಭಕ್ಕಾಗಿ ಉದ್ದೇಶಪೂರ್ವಕವಾಗಿ ಬಳಸಲಾಗಿದೆ’. ನಾಯಕ ಸಂಕಷ್ಟದಲ್ಲಿರುವಾಗ ‘ನ್ಯಾಯ ಎಲ್ಲಿದೆ’ ಹಾಡನ್ನು ಹಿನ್ನೆಲೆಯಲ್ಲಿ ಹಾಕಿರುವುದು ಒಂದು ಸೃಜನಾತ್ಮಕ ನಿರ್ಧಾರವಾಗಿದ್ದು, ಇದು ಹಕ್ಕುಸ್ವಾಮ್ಯದ ಅಡಿ ಬರುತ್ತದೆ ಎಂದು ಹೇಳಿದೆ.
ನ್ಯಾಯಾಲಯ ರಕ್ಷಿತ್ ಶೆಟ್ಟಿ ಅವರಿಗೆ ಜೈಲು ಶಿಕ್ಷೆ ವಿಧಿಸುವುದರಿಂದ ವಿನಾಯಿತಿ ನೀಡಿದೆ. ಹಕ್ಕುಸ್ವಾಮ್ಯ ಉಲ್ಲಂಘನೆಗಾಗಿ ಈಗಾಗಲೇ ಠೇವಣಿ ಇರಿಸಲಾಗಿರುವ 20 ಲಕ್ಷ ರೂಪಾಯಿಗಳನ್ನು ಎಮ್‌ಆರ್‌ಟಿ ಮ್ಯೂಸಿಕ್‌ಗೆ ನೀಡಲು ಸೂಚಿಸಿ ನ್ಯಾಯಾಲಯದ ಆದೇಶವನ್ನು ಸಮಯಕ್ಕೆ ಸರಿಯಾಗಿ ಪಾಲಿಸದ ಕಾರಣ ಹೆಚ್ಚುವರಿಯಾಗಿ 5 ಲಕ್ಷ ರೂಪಾಯಿ ದಂಡ ಕಟ್ಟಬೇಕೆಂದು ಆದೇಶ ನೀಡಿದೆ.
—–





Be the first to comment