ಡೆಡ್ಲಿ ಕಿಲ್ಲರ್‌

Movie Review: ಪ್ರೇಕ್ಷಕರನ್ನೇ ಕೊಲ್ಲುವ ಕಿಲ್ಲರ್!

ಚಿತ್ರ: ಡೆಡ್ಲಿ ಕಿಲ್ಲರ್‌
ನಿರ್ದೇಶನ: ಥ್ರಿಲ್ಲರ್‌ ಮಂಜು
ನಿರ್ಮಾಣ: ಪ್ರಶಾಂತ್‌ ಆರ್‌ ತಂಬ್ರಲ್ಲಿ ಮಠ
ತಾರಾಗಣ: ಥ್ರಿಲ್ಲರ್‌ ಮಂಜು, ಅಭಯ್‌ ವೀರ್‌ ಮತ್ತು ನಿವಿಷ್ಕಾ ಮುನಿರತ್ನಂ ಮುಂತಾದವರು…
ರೇಟಿಂಗ್: 1.5/5

ಒಂದು‌ ಗ್ಯಾಪ್ ಬಳಿಕ ಥ್ರಿಲ್ಲರ್ ಮಂಜು ಮರಳಿ ಬಂದಿದ್ದಾರೆ. ಆದರೆ ಈ ಬಾರಿ ಅವರು ಥ್ರಿಲ್ಲರ್ ಮಂಜು ಆಗಿರದೆ ಡೈರೆಕ್ಟರ್ ಕಿಲ್ಲರ್ ಮಂಜು ಆಗಿದ್ದಾರೆ. ಯಾಕೆಂದರೆ ಡೆಡ್ಲಿ ಕಿಲ್ಲರ್ ಎನ್ನುವ ಚಿತ್ರ ಆ ಮಟ್ಟಕ್ಕೆ ನೋಡುಗರ ಮೇಲೆ ದಾಳಿ ಮಾಡುತ್ತದೆ.

ಇದು ಆರು ಜನ ಹಂತಕರ ಕಥೆ. ಆರಂಭವೇನೋ‌ ಅವಸರದಲ್ಲೇ ಆಗುತ್ತದೆ. ಆದರೆ ಈ ಹಂತಕರು ಪೊಲೀಸರಿಂದ ತಪ್ಪಿಸಿ ಕಾಡಿನೊಳಗೆ ಸಿಕ್ಕಿಕೊಂಡ ಬಳಿಕ‌ ಕಥೆ ಮುಂದುವರಿಯುವುದೇ ಇಲ್ಲ. ಕಾಡೊಳಗಿನ‌ ಒಂದು ಮನೆಯಲ್ಲಿ ಇವರೆಲ್ಲರೂ ತಂಗುತ್ತಾರೆ. ಆದರೆ ಆ ಮನೆಯಲ್ಲಿರುವ ಇಬ್ಬರನ್ನು ಬಂಧಿಗಳಾಗಿ ಮಾಡುತ್ತಾರೆ. ನಿಜಕ್ಕೂ ಅಲ್ಲಿ ಬಂಧಿಗಳಾಗಿದ್ದು ಯಾರು? ಅವರ ಉದ್ದೇಶವೇನು ಎಂದು ತೋರಿಸುವುದೇ ಚಿತ್ರದ ಕಾನ್ಸೆಪ್ಟ್. ಆದರೆ ಥಿಯೇಟರ್ ಒಳಗೆ ಬಂಧಿತರಾಗಿ ಚಡಪಡಿಸುವ ಪರಿಸ್ಥಿತಿ ಎದುರಾಗುವುದು ಮಾತ್ರ ಅಮಾಯಕ ಪ್ರೇಕ್ಷಕರಿಗೆ.

ಚಿತ್ರದಲ್ಲಿ ಥ್ರಿಲ್ಲರ್ ಮಂಜು ಡಾನ್ ಎನ್ನುವ ಪಾತ್ರ ಮಾಡುತ್ತಾರೆ. ಅದೇನೇ ಡಾನ್ ಆಗಿದ್ದರೂ ಆ ಮನೆಯೊಳಗೆ ಸೇರಿಕೊಂಡ ಮೇಲೆ ಗೂಡೊಳೊಗಿನ ಡಾನ್ ಅಷ್ಟೇ. ಅದರಲ್ಲೂ ಮಧ್ಯಂತರದ ಬಳಿಕ‌ ತನ್ನ ಪಾತ್ರ ಕಾಮಿಡಿ‌ ಪೀಸ್ ಎಂದು ಖುದ್ದಾಗಿ ತೋರಿಸಿಕೊಟ್ಟಿದ್ದಾರೆ ಮಂಜು. ಮಂಜು ಸೇರಿದಂತೆ ಐದು ಮಂದಿ ಕೊಲೆಗಾರರು ಇದ್ದಾರೆ. ಅವರು ನಿಜಕ್ಕೂ‌ ಭಯಾನಕ ಎಂದು ಅರಿವಾಗುವುದು ಅವರ ಅಭಿನಯವನ್ನು ಕಂಡಾಗಲೇ. ಪೂರ್ತಿ ಚಿತ್ರ ಮನೆ ಮತ್ತು ಕಾಡೊಳಗೆ ಕಿರುಚಾಟದಲ್ಲೇ ಸಾಗುತ್ತದೆ. ಹಾಸ್ಯದ ಹೆಸರಲ್ಲಿ ಅಸಂಬದ್ಧ ಸಂಭಾಷಣೆಗಳು ಕೂಡ ಸೇರಿ ನೋಡುಗನೇ ಶಿಕ್ಷೆ ಅನುಭವಿಸುವಂತೆ ಮಾಡಲಾಗಿದೆ. ಇಂಥದೊಂದು ಕಾನ್ಸೆಪ್ಟ್ ಬಹುಶಃ ನಿರ್ಮಾಪಕರದ್ದೇ ಇರಬೇಕು.‌ ಚಿತ್ರವನ್ನು ಬಜೆಟ್ ಫ್ರೆಂಡ್ಲಿ ಮಾಡಲೆಂದೇ ಒಂದೇ ಮನೆಯೊಳಗೆ ಮತ್ತು ಕಾಡೊಳಗೆ ಚಿತ್ರೀಕರಿಸಿಟ್ಟಿದ್ದಾರೆ. ಕಾಡಿನ ಮನೆಯೊಳಗೆ ಜಯ್ ಎನ್ನುವಾತ ಸದಾ ತನ್ನ ಪತ್ನಿ ಕಾವೇರಿಯ ಧ್ಯಾನದಲ್ಲಿರುತ್ತಾನೆ. ಬಹುಶಃ ಹುಚ್ಚ ವೆಂಕಟ್ ಬಳಿಕ ಕಾವೇರಿಗಾಗಿ ಇಷ್ಟೊಂದು ಕಣ್ಣೀರು ಹಾಕುವ ಕಲಾವಿದ ಅಂದರೆ ಈತನೇ ಖಂಡಿತ.

ಚಿತ್ರದ ಏಕೈಕ‌ ಆಕರ್ಷಣೆ ಎಂದರೆ ಹಾಡುಗಳು. ವಿನು ಮನಸು ಸಂಗೀತದಲ್ಲಿನ ಹಾಡುಗಳು ಆಲಿಸುವಂತಿವೆ. ಆದರೆ ಅವುಗಳನ್ನು ಕೂಡ ಆಕರ್ಷಕವಾಗಿ ಚಿತ್ರೀಕರಿಸುವಲ್ಲಿ ಎಡವಿದ್ದಾರೆ. ಮಾತ್ರವಲ್ಲ, ಒಂದು ದೆವ್ವದ ಹಾಡನ್ನು ಹಗಲಲ್ಲೇ ಚಿತ್ರೀಕರಿಸಿ ಕಾಮಿಡಿ ಮಾಡಿದ್ದಾರೆ. ಮಾತ್ರವಲ್ಲ ಅದನ್ನು ರಿಪೀಟ್ ಮೋಡಲ್ಲಿ ಮತ್ತೆ ಮತ್ತೆ ಹಾಕಿ ನಿಜಕ್ಕೂ ಹಾರರ್ ಅನುಭವ ನೀಡುತ್ತಾರೆ.

ಥ್ರಿಲ್ಲರ್ ಮಂಜು ಅವರ ಹೊರತು ಚಿತ್ರದಲ್ಲಿ ಮತ್ತೊಂದು ಪರಿಚಿತ ಮುಖ ಕಾಣಿಸುವುದಿಲ್ಲ. ಪಾತ್ರಗಳೇ ಕೆಟ್ಟದಾಗಿ ಕಾಡುವಾಗ ಕಲಾವಿದರ ಬಗ್ಗೆ ಹುಡುಕಾಡುವುದು ಸರಿಯಲ್ಲ. ಆದರೆ ಡೆಡ್ಲಿ ಕಿಲ್ಲರ್ ಪ್ರದರ್ಶಿಸುವ ಚಿತ್ರಮಂದಿರದವರು ಪ್ರೇಕ್ಷಕರಿಗಾಗಿ ಹುಡುಕಾಟ ನಡೆಸಲೇಬೇಕಾದ ಪರಿಸ್ಥಿತಿ ಎದುರಾಗಿರುವುದು ಸತ್ಯ.

Be the first to comment

Leave a Reply

Your email address will not be published. Required fields are marked *

Translate »
error: Content is protected !!