ಬಲರಾಮ

Movie Review: ಎಲ್ಲರ ಮನಗೆಲ್ಲುವ ‘ಬಲರಾಮನ ದಿನಗಳು’

ಚಿತ್ರ: ಬಲರಾಮನ ದಿನಗಳು
ನಿರ್ದೇಶನ: ಕೆ.ಎಂ ಚೈತನ್ಯ
ನಿರ್ಮಾಣ: ಪದ್ಮಾವತಿ ಜಯರಾಮ್ ಮತ್ತು ಶ್ರೇಯಸ್ ಜಯರಾಮ್
ತಾರಾಗಣ: ವಿನೋದ್ ಪ್ರಭಾಕರ್, ಪ್ರಿಯಾ ಆನಂದ್, ಆಶಿಷ್ ವಿದ್ಯಾರ್ಥಿ ಮೊದಲಾದವರು…
ರೇಟಿಂಗ್: 3.5/5

ಬಲರಾಮನಿಗೆ ಬೆಂಗಳೂರಲ್ಲೊಂದು ಕೆಲಸ ಬೇಕಿತ್ತು. ಆದರೆ ಸರ್ಟಿಫಿಕೇಟ್ ಜೊತೆ ಬೆಂಗಳೂರಿಗೆ ಬಂದವನಿಗೆ ಎದುರಾಗಿದ್ದು ಮಾತ್ರ ರೌಡಿ ಲೋಕದ ಸ್ವಾಗತ. ರೌಡಿಗೆ ಬುದ್ಧಿ ಕಲಿಸುವ ಮೊದಲ ಪ್ರಯತ್ನದಲ್ಲೇ ರೌಡಿಯ ಸಾವಾಗುತ್ತದೆ. ವಿಪರ್ಯಾಸ ಏನೆಂದರೆ ಅದೇ ರೌಡಿಯ ಜಾಗಕ್ಕೆ ಬಲರಾಮ ಬಂದು ನಿಲ್ಲುತ್ತಾನೆ. ಅದಕ್ಕೆ ಕಾರಣವಾಗುವ ಜಯರಾಮ ಯಾರು? ಆತನ ಗ್ಯಾಂಗ್ ನಲ್ಲಿ ಬಲರಾಮನ ಸ್ಥಾನವೇನು? ಭೂಗತ ಪಾತಕಿಗಳನ್ನು ಎದುರು ಹಾಕಿಕೊಳ್ಳುವ ಸಂದರ್ಭ ಎದುರಾಗುವುದು ಹೇಗೆ? ಇವೆಲ್ಲವನ್ನು ಚಿತ್ರದಲ್ಲಿ ಅತ್ಯಂತ ಸೊಗಸಾಗಿ ತೋರಿಸಲಾಗಿದೆ.

ಬಲರಾಮ ಬಲಶಾಲಿ ಯುವಕ. ಕೆಲಸಕ್ಕೆಂದು ಸರ್ಟಿಫಿಕೆಟ್ ಹಿಡಿದುಕೊಂಡು ಬೆಂಗಳೂರಿಗೆ ಬಂದವನು ಕೋಪದ ಕೈಗೆ ಬುದ್ಧಿ ಕೊಟ್ಟು ರೌಡಿಯಾಗುತ್ತಾನೆ. ಜಯರಾಮನ ಗ್ಯಾಂಗ್ ಸೇರಿಕೊಂಡವನ ಮುಂದಿನ ಬಾಳು ಏನಾಗುತ್ತದೆ ಎನ್ನುವುದೇ ಚಿತ್ರದ ಮುಖ್ಯಭಾಗ. ಇಂಥ ಬಲರಾಮನ ಪಾತ್ರವನ್ನು ವಿನೋದ್ ಪ್ರಭಾಕರ್ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ನಾಯಕನ ನಟನ ಮಾತ್ರವಲ್ಲ, ಸಂಭಾಷಣೆಗಳಿಗೂ ನಾಯಕತ್ವ ದೊರಕಿಸುವಲ್ಲಿ ಡೈಲಾಗ್ ರೈಟರ್ ಕೆ .ಎಲ್. ರಾಜಶೇಖರ್ ಗೆದ್ದಿದ್ದಾರೆ.

“ಕೈಗಂಟಿರುವ ರಕ್ತ ತೊಳೆದರೆ ಹೋಗುತ್ತೆ, ಹೆಸರಿಗಂಟಿರುವ ರಕ್ತ ಸತ್ತ ಮೇಲೂ ಇರುತ್ತೆ” ಎನ್ನುವ ಸಂಭಾಷಣೆಯಂತೂ ಈಗಾಗಲೇ ಸಿನಿಪ್ರಿಯರ ನಡುವೆ ಸದ್ದು ಮಾಡತೊಡಗಿದೆ. ಬಲರಾಮನ ಪಾತ್ರಕ್ಕೆ ಬೆಂಗಳೂರಲ್ಲೊಂದು ಪ್ರೇಮಕಥೆ ಇದೆ. ರೇವತಿ ಎನ್ನುವ ಪ್ರೇಯಸಿಯ ಪಾತ್ರವನ್ನು ಪ್ರಿಯಾ ಆನಂದ್ ನಿಭಾಯಿಸಿದ್ದಾರೆ. ಸಂತೋಷ್ ನಾರಾಯಣನ್ ಸಂಗೀತದಲ್ಲಿ ಗಮನ ಸೆಳೆಯುವ ಪ್ರೇಮಗೀತೆಗಳು ಇಲ್ಲಿವೆ.

ಬಲರಾಮನಿಗೆ ಮೊದಲ ಕೆಲಸ ನೀಡುವ ಧಣಿ ಜಯರಾಮನಾಗಿ ಪಾತ್ರದಲ್ಲಿ ಆಶಿಷ್ ವಿದ್ಯಾರ್ಥಿ ಕಾಣಿಸಿದ್ದಾರೆ.‌ ಜಯರಾಮನ ಪ್ರತಿಸ್ಪರ್ಧಿ ಗ್ಯಾಂಗ್ ಮೋನಪ್ಪ ರೈ ಪಾತ್ರವನ್ನು ರಮೇಶ್ ಇಂದಿರಾ ಮಾಡಿ ದ್ದಾರೆ. ರೈ ಗ್ಯಾಂಗ್ ನಲ್ಲಿರುವ ‘ಕತ್ತಿ’ಯಾಗಿ ವಿನಯ್ ಗೌಡ ಗಮನ ನಟನೆ ಆಕರ್ಷಕವಾಗಿದೆ. ಬಿಗ್ ಬಾಸ್ ಖ್ಯಾತಿಯ ಮತ್ತೋರ್ವ ನಟ ರಜತ್ ಕೂಡ ಸಣ್ಣದೊಂದು ರೌಡಿಯ ಪಾತ್ರದಲ್ಲೇ ಕಾಣಿಸಿದ್ದಾರೆ. ಡ್ರ್ಯಾಗನ್ ಮಂಜು ಒಂದೇ ದೃಶ್ಯದಲ್ಲಿ ಬಂದರೂ ಚಿತ್ರಪೂರ್ತಿ ಕಾಡುವಂಥ ಪಾತ್ರ ಮಾಡಿದ್ದಾರೆ.

ಪೂರ್ತಿ ಸಿನಿಮಾ ಒಂದು ರೌಡಿಸಂ‌ ಕಥೆ ಎನ್ನುವುದರ ಆಚೆಗೆ ಅಂದಿನ ಕಾಲದ ಜನಜೀವನ, ಪರಿಸ್ಥಿತಿ ಎಲ್ಲವನ್ನು ಕಣ್ಣಿಗೆ ರಾಚುವಂತೆ ತೋರಿಸಿದೆ. ಒಟ್ಟು ಚಿತ್ರ ತಂಡದ ಪ್ರಯತ್ನದಿಂದಾಗಿ ಒಂದು ಕಲ್ಟ್ ಕ್ಲಾಸಿಕ್ ಚಿತ್ರ ಸಿದ್ಧವಾಗಿದೆ. ಹೀಗಾಗಿಯೇ ಸಿನಿಮಾ ಎಲ್ಲ ವರ್ಗದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುವ ಹಾಗೆ ಸಿದ್ಧಗೊಂಡಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!