ಖ್ಯಾತ ನಿರ್ದೇಶಕ ಕೆ. ಭಾಗ್ಯರಾಜ್ ನಿಧನ

ತಮಿಳು ಚಿತ್ರರಂಗದ ಹಿರಿಯ ನಿರ್ದೇಶಕ, ನಟ, ಕಥೆಗಾರ ಹಾಗೂ ಚಿತ್ರಕಥೆಗಾರ ಕೆ. ಭಾಗ್ಯರಾಜ್ (73)  ಶನಿವಾರ ಚೆನ್ನೈನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ಜನಿಸಿದ ಅವರು, ಖ್ಯಾತ ನಿರ್ದೇಶಕ ಭಾರಥಿರಾಜಾ ಅವರ ಸಹಾಯಕರಾಗಿ ಚಿತ್ರರಂಗ ಪ್ರವೇಶಿಸಿದರು. ಬಳಿಕ ತಮ್ಮ  ವಿಶಿಷ್ಟ ಕಥೆ, ನಿರ್ದೇಶನ ಮತ್ತು ಅಭಿನಯದ ಮೂಲಕ ತಮಿಳು ಚಿತ್ರರಂಗದ ಸೃಜನಶೀಲ ನಿರ್ದೇಶಕರಾಗಿ ಗುರುತಿಸಿಕೊಂಡರು.80 ಮತ್ತು 90ರ ದಶಕಗಳಲ್ಲಿ ಹಾಸ್ಯ,ಸಾಮಾಜಿಕ ಮೌಲ್ಯಗಳನ್ನು ಒಳಗೊಂಡ ಕಥೆಗಳ ಮೂಲಕ  ಜನಪ್ರಿಯತೆ ಗಳಿಸಿದರು. ಅವರು 25ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದು, 75ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಭಾಗ್ಯರಾಜ್ ಅವರು ನಟಿಯರಾದ ಊರ್ವಶಿ ಮತ್ತು ಕಲ್ಪನಾ ಅವರನ್ನು ತಮಿಳು ಚಿತ್ರರಂಗಕ್ಕೆ ಪರಿಚಯಿಸಿದ್ದರು.  ಮಾಜಿ ಮುಖ್ಯಮಂತ್ರಿ ಹಾಗೂ ನಟ ಎಂ.ಜಿ. ರಾಮಚಂದ್ರನ್ (ಎಂಜಿಆರ್) ಅವರು ಭಾಗ್ಯರಾಜ್ ಅವರನ್ನು  ತಮಿಳು “ಚಿತ್ರರಂಗದ ಉತ್ತರಾಧಿಕಾರಿ” ಎಂದು ಹೊಗಳಿದ್ದರು.

ಭಾಗ್ಯರಾಜ್ ಅವರು ಮುಂದಾನೈ ಮುಡಿಚು, ಅಂಧ 7 ನಾಟ್ಕಲ್, ಚಿನ್ನ ವೀಡು, ಸುಂದರ ಕಾಂಡಂ, ಎಂಗ ಚಿನ್ನ ರಾಸಾ, ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್  ಸೇರಿದಂತೆ ಹಲವು ಸೂಪರ್‌ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು 1986ರಲ್ಲಿ ಬಿಡುಗಡೆಯಾದ ಹಿಂದಿ ಸಿನಿಮಾ ‘ಆಖ್ರಿ ರಾಸ್ತ’   ಮೂಲಕ ಬಾಲಿವುಡ್‌ನಲ್ಲೂ ಪ್ರತಿಭೆ ಪ್ರದರ್ಶಿಸಿದ್ದರು. ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ದ್ವಿಪಾತ್ರ, ಜಯಾ ಪ್ರದಾ, ಶ್ರೀದೇವಿ,ಅನುಪಮ್ ಖೇರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು.

ಭಾಗ್ಯರಾಜ್ ಅವರು ಪತ್ನಿ ನಟಿ ಪೂರ್ಣಿಮಾ ಭಾಗ್ಯರಾಜ್, ಪುತ್ರ ನಟ ಶಾಂತನು ಭಾಗ್ಯರಾಜ್, ಪುತ್ರಿ ಸಾರಣ್ಯಾ ಭಾಗ್ಯರಾಜ್ ಅವರನ್ನು ಅಗಲಿದ್ದಾರೆ. ಭಾಗ್ಯರಾಜ್  ನಿಧನಕ್ಕೆ ತಮಿಳು ಚಿತ್ರರಂಗದ ಗಣ್ಯರು,   ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!