ಚಿತ್ರ: ಮೋಡ ಕವಿದ ವಾತಾವರಣ
ನಿರ್ದೇಶನ: ಸಿಂಪಲ್ ಸುನಿ
ನಿರ್ಮಾಣ: ಸುನಿ ಸಿನೆಮಾಸ್
ತಾರಾಗಣ: ಶೀಲಂ ಸ್ವಾಮಿ, ಮೋಕ್ಷ ಕುಶಲ್, ಸಾತ್ವಿಕಾ, ರೇಖಾ ಎಸ್ ಪ್ರಸಾದ್, ಋಷಿ ಮುಂತಾದವರು…
ರೇಟಿಂಗ್ : 3.5/5
ಪ್ರೇಮಕಥೆಯನ್ನು ಹೇಗೆಲ್ಲ ಹೇಳಬಹುದು ಎನ್ನುವುದರಲ್ಲಿ ಪಿಎಚ್ಡಿ ಮಾಡಿದ್ದರೆ ಬಹುಶಃ ಅದು ನಿರ್ದೇಶಕ ಸುನಿಯೇ ಇರಬೇಕು. ಅದಕ್ಕೊಂದು ಅದ್ಭುತ ಉದಾಹರಣೆಯೇ ಮೋಡ ಕವಿದ ವಾತಾವರಣ.
ಆರಂಭದಲ್ಲಿ ಎರಡು ಬೇರೆ ಬೇರೆ ಪ್ರಣಯ ಜೋಡಿಗಳ ಕುರಿತಾಗಿ ಶುರುವಾಗುವ ಪ್ರೇಮಕತೆ ಹೇಗೆ ಒಂದಕ್ಕೊಂದು ಬೆರೆಯುತ್ತಾ ಹೋಗುತ್ತದೆ ಎನ್ನುವುದನ್ನು ತೋರಿಸುತ್ತಾರೆ. ಅರೆರೆ ಈ ಜೋಡಿ ಬದಲಾಗುತ್ತಾ ಎನ್ನುವ ಶಂಕೆ ಮೂಡುತ್ತಾ ಹೋದಾಗ ಅದಲ್ಲ ಇದು ಎಂದು ಹೊಸ ಟ್ವಿಸ್ಟ್ ಬರೆಯುತ್ತಾರೆ. ಹೀಗೆ ಹೊಸ ಹೊಸ ಟ್ವಿಸ್ಟ್ ನೀಡುತ್ತಾ ನಮ್ಮ ಯೋಚನೆಗಳಿಗೆ ‘ಎಲ್ಲಿಯೂ ನಿಲ್ಲದಿರು ಮನೆಯನೆಂದು ಕಟ್ಟದಿರು’ ಎನ್ನುತ್ತಾರೆ. ಹೀಗೆ ಏರಿಳಿದು ಸಾಗುವ ನದಿಯಂತೆ ಸಾಗುವ ಚಿತ್ರ ಕೊನೆಯಲ್ಲಿ ಇದಕ್ಕೆಲ್ಲ ಮೇಲೆ ಮೋಡ ಕವಿದಿರುವುದೇ ಕಾರಣ ಎಂದು ಸಾರುತ್ತದೆ.
ಚರಿಷ್ ಎನ್ನುವ ಯುವಕನ ಪಾತ್ರ ಆರಂಭದಲ್ಲಿ ಫ್ಲರ್ಟ್ ನಂತೆ ಕಾಣಿಸುತ್ತದೆ. ಎರಡನೇ ಹಂತದಲ್ಲಿ ಪ್ರೇಮಿಯೇನೋ ಅನಿಸುತ್ತದೆ. ಮೂರನೇ ಹಂತದಲ್ಲಿ ಸೈಕೋ ಇರಬಹುದೇ ಎನ್ನುವ ಸಂದೇಹ ಮೂಡಿಸುತ್ತದೆ. ನಾಲ್ಕನೆಯದಾಗಿ ಈತನೊಬ್ಬ ವೈದ್ಯ ಎನ್ನುವುದನ್ನು ಖಚಿತಪಡಿಸುತ್ತದೆ. ಟ್ಬಿಸ್ಟ್ ಅಲ್ಲಿಗೆ ಮುಗಿಯುತ್ತಾ ಅಂದರೆ ಖಂಡಿತಾ ಇಲ್ಲ. ಅಲ್ಲಿಂದಾಚೆ ನಾಯಕಿಯ ಕ್ಯಾರೆಕ್ಟರ್ ಬಯಲಾಗುತ್ತಾ ಹೋಗುತ್ತದೆ. ಪ್ರತಿಯೊಂದು ಹಂತದಲ್ಲಿಯೂ ಪ್ರೇಕ್ಷಕ ಸೀಟಿನ ತುದಿಯಲ್ಲಿ ಕುಳಿತುಕೊಳ್ಳುವಂತೆ ಮಾಡುತ್ತದೆ.
ಕಥಾ ನಾಯಕ ಚರಿಷ್ ತನ್ನ ಪ್ರಿಯತಮೆ ಸಾತ್ವಿಕಾ ಜತೆಗೆ ರೆಸಾರ್ಟ್ ಗೆ ಹೋಗುತ್ತಾನೆ. ಅಲ್ಲಿ ಸೌಪರ್ಣಿಕಾ ಎನ್ನುವ ಯುವತಿಯನ್ನು ಭೇಟಿಯಾಗುತ್ತಾನೆ. ಆಕೆ ತನ್ನ ಭಾವಿ ಪತಿಯೊಂದಿಗೆ ಆಗಮಿಸಿರುತ್ತಾಳೆ. ಚಿತ್ರದ ಮುಕ್ಕಾಲು ಪಾಲು ಕಥೆ ರೆಸಾರ್ಟ್ ನಲ್ಲೇ ನಡೆಯುತ್ತದೆ. ಮಳೆ ಮತ್ತು ಮೋಡದ ಹಿನ್ನೆಲೆಯಲ್ಲಿ ಸಾಗುವ ಕಥೆಗೆ ಸಾಗರದ ಆಗಾಧತೆಯಿದೆ. ನಾಲ್ಕೇ ಪಾತ್ರಗಳೊಂದಿಗೆ ಸಾಗುವ ಸಿನಿಮಾದಲ್ಲಿ ನವರಸಗಳಿವೆ.
ನಿರ್ದೇಶಕ ಸುನಿ ಎಂದಿನಂತೆ ಚಿತ್ರ ಪೂರ್ತಿ ತಮ್ಮ ಸಂಭಾಷಣೆಯ ಕುಸುರಿ ಕೆತ್ತನೆಯನ್ನು ಉಳಿಸಿಕೊಂಡೇ ಬಂದಿದ್ದಾರೆ. ನಾಯಕ ಚರಿಷ್ ಪಾತ್ರವನ್ನು ಶೀಲಂ ಎಮ್ ಸ್ವಾಮಿ ಅಭಿನಯಿಸಿದ್ದಾರೆ. ಲವಲವಿಕೆ ತುಂಬಿದ ಯುವಕನಾಗಿ ಕಾಣಿಸಿಕೊಂಡಿದ್ದಾರೆ. ಕಥಾನಾಯಕಿ ಮೋಕ್ಷ ಕುಶಾಲ್ ಪಾತ್ರಕ್ಕೂ ಉತ್ತಮ ಅವಕಾಶ ನೀಡಲಾಗಿದೆ. ಈ ಕ್ಯಾರೆಕ್ಟರ್ ನಲ್ಲಿರುವ ಟ್ವಿಸ್ಟ್ ಏನು ಎನ್ನುವುದನ್ನು ಪರದೆಯ ಮೇಲೆ ನೋಡುವುದೇ ಸೊಗಸು.
ಮನೋವೈದ್ಯೆಯಾಗಿ ನಟಿಸಿರುವ ಸ್ಪರ್ಶ ರೇಖಾ ಒಂದು ಕಡೆಯಾದರೆ ಒಂದು ವಿಶೇಷ ಪಾತ್ರವನ್ನು ನಿಭಾಯಿಸಲೆಂದೇ ರಿಷಿ ಕೂಡ ಎಂಟ್ರಿ ನೀಡುತ್ತಾರೆ. ರಿಷಿ ಪಾತ್ರದ ಆರಂಭ ಮತ್ತು ಅಂತ್ಯವಾಗುವ ರೀತಿ ಅಮೋಘ. ಅದನ್ನು ರಿಷಿ ಪರದೆ ಮೇಲೆ ವ್ಯಕ್ತಪಡಿಸಿರುವ ಶೈಲಿಯೂ ಅತ್ಯುತ್ತಮ. ಜುಡಾ ಸ್ಯಾಂಡಿ ಸಂಗೀತದಲ್ಲಿನ ಹಾಡುಗಳು ಮನಮುಟ್ಟುವಂತಿವೆ. ಪ್ರೇಮಿಗಳ ಲೋಕದ ಒಳಹರಿವುಗಳನ್ನು ವಿವಿಧ ಬಗೆಬಗೆಯಾಗಿ ಬಡಿಸಿರುವ ರೀತಿಗೆ ಪ್ರೇಕ್ಷಕರು ಕರಗಿ ದಂಗುಬಡಿಯುತ್ತಾ ಹೋಗುತ್ತಾರೆ. ಇಂಥದೊಂದು ಅನುಭವಕ್ಕಾಗಿಯಾದರೂ ಈ ಚಿತ್ರವನ್ನು ಒಮ್ಮೆ ವೀಕ್ಷಿಸಲೇಬೇಕು.





Be the first to comment