ನಟ ದರ್ಶನ್ ಪುತ್ರ ವಿನೀಶ್ ಪ್ರಯಾಣಿಸುತ್ತಿದ್ದ ಕಾರು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ರಸ್ತೆ ಅಪಘಾತಕ್ಕೆ ಈಡಾಗಿದ್ದು, ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ವಿಜಯಲಕ್ಷ್ಮಿ ದರ್ಶನ್ ಸ್ಪಷ್ಟನೆ ನೀಡಿದ್ದಾರೆ.
ರಾಜರಾಜೇಶ್ವರಿ ನಗರದಲ್ಲಿ ಫೋರ್ಡ್ ಎಂಡೋವರ್ ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ನಡೆದಿತ್ತು. ರಸ್ತೆಯಲ್ಲಿ ದ್ವಿಚಕ್ರ ವಾಹನಕ್ಕೆ ಕಾರು ತಗುಲಿ ಘಟನಾ ಸ್ಥಳದಲ್ಲಿ ವಿನೀಶ್ ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದಿರುವ ವಿಡಿಯೋಗಳು ಹರಿದಾಡಿದ್ದವು.
‘ವಿನೀಶ್ ಅವರಿಗೆ ಅಪಘಾತವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಸಂಪೂರ್ಣ ಸುಳ್ಳು. ಅವರು ಸುರಕ್ಷಿತವಾಗಿದ್ದಾರೆ ಮತ್ತು ಆರಾಮವಾಗಿದ್ದಾರೆ. ಘಟನೆ ನಡೆದಾಗ ವಿನೀಶ್ ಕಾರು ಚಲಾಯಿಸುತ್ತಿರಲಿಲ್ಲ. ಕುಟುಂಬದ ಚಾಲಕನೇ ವಾಹನವನ್ನು ಚಲಾಯಿಸುತ್ತಿದ್ದರು’ ಎಂದು ವಿಜಯಲಕ್ಷ್ಮಿ ಸ್ಪಷ್ಟನೆ ನೀಡಿದ್ದಾರೆ.
‘ಘಟನೆಯಲ್ಲಿ ಭಾಗಿಯಾಗಿದ್ದ ಬೈಕ್ ಸವಾರರು ತಪ್ಪು ತಮ್ಮದೇ ಎಂದು ಒಪ್ಪಿಕೊಂಡು ಸ್ಥಳದಲ್ಲೇ ಕ್ಷಮೆಯನ್ನೂ ಕೇಳಿದ್ದಾರೆ. ಬೈಕ್‌ನಲ್ಲಿದ್ದ ಜನರು ಸುರಕ್ಷಿತವಾಗಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ವಿನೀಶ್ ಕಾರಿನಿಂದ ಕೆಳಗಿಳಿದಿದ್ದರು. ಆದರೆ ಆ ಕ್ಷಣಗಳ ದೃಶ್ಯಗಳನ್ನು ತಪ್ಪುದಾರಿಗೆಳೆಯುವ ರೀತಿಯಲ್ಲಿ ಪ್ರಸ್ತುತಪಡಿಸಲಾಗಿದೆ. ಒಂದು ಕುಟುಂಬವಾಗಿ ನಾವು ಈಗಾಗಲೇ ಕಷ್ಟದ ಸಮಯವನ್ನು ಎದುರಿಸುತ್ತಿದ್ದೇವೆ. ಪರಿಶೀಲಿಸದ ಸುದ್ದಿಗಳ ಹರಡುವಿಕೆಯು ನಮ್ಮ ನೋವು ಮತ್ತು ಆತಂಕವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಮಾಧ್ಯಮ ಸಂಸ್ಥೆಗಳು ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಾಗಿ ವಿನಂತಿಸುತ್ತೇವೆ. ಇಂತಹ ಸುಳ್ಳು ವರದಿಗಳನ್ನು ಯಾರೂ ನಂಬಬೇಡಿ ಅಥವಾ ಹಂಚಿಕೊಳ್ಳಬೇಡಿ’ ಎಂದು ವಿಜಯಲಕ್ಷ್ಮಿ ಮನವಿ ಮಾಡಿದ್ದಾರೆ.

—–





Be the first to comment