ಅ. 16 ರಂದು ‘ಬೃಂದಾವಿಹಾರಿ’ ತೆರೆಗೆ

ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ಅಭಿನಯದ ಬಹು ನಿರೀಕ್ಷಿತ ‘ಬೃಂದಾವಿಹಾರಿ’ ಚಿತ್ರ ಅಕ್ಟೋಬರ್ 16ರ ದಸರಾ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ.

ಗಣೇಶ್ ಮತ್ತು ನಿರ್ದೇಶಕ ಶ್ರೀನಿವಾಸ ರಾಜು ಜೋಡಿ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಭರ್ಜರಿ ಯಶಸ್ಸಿನ ನಂತರ ಮತ್ತೊಮ್ಮೆ ‘ಬೃಂದಾವಿಹಾರಿ’ ಚಿತ್ರದಲ್ಲಿ ಜೊತೆಯಾಗಿದ್ದಾರೆ. ಇತ್ತೀಚೆಗೆ  ಚಿತ್ರದ ಪ್ರಚಾರಕ್ಕೆ ಚಾಲನೆ ನೀಡಲು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ವೇಳೆ ಮಾತನಾಡಿದ ನಾಯಕ ಗಣೇಶ್, ‘ಹಿರಿಯ ನಟಿ ಲಕ್ಷ್ಮಿ ಅವರ ಜೊತೆ ಕೆಲಸ ಮಾಡಿರುವುದು ನನಗೆ ಬಹಳ ಖುಷಿಯಾಗಿದೆ. ಚಿತ್ರೀಕರಣ ಸಮಯದಲ್ಲಿ ಅವರಿಂದ ಸಾಕಷ್ಟು ಕಲಿತಿದ್ದೇನೆ. ಹಿರಿಯ ಕಲಾವಿದರಾದ ಅಶೋಕ್, ರಾಮ್ ಕುಮಾರ್, ರಂಗಾಯಣ ರಘು ಮುಂತಾದವರ ಜೊತೆಗೆ ಅಭಿನಯಿಸಿರುವುದು ವಿಶೇಷ ಅನುಭವ ನೀಡಿದೆ’ ಎಂದು ಹೇಳಿದರು.

‘ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಮಾಧವ.  ಮುಗ್ದತೆ, ಭಾವನೆಗೆ ಬೆಲೆ ಕೊಡುವ ಪಾತ್ರ.  ನಿರ್ದೇಶಕರು ಎಲ್ಲರಿಂದಲೂ ಒಳ್ಳೆಯ ಕೆಲಸ ತೆಗೆಸಿದ್ದಾರೆ. ಚಿತ್ರ ಅತ್ಯುತ್ತಮವಾಗಿ ಮೂಡಿ ಬಂದಿದೆ.  ದಸರಾ ವೇಳೆ ಎಲ್ಲರೂ ಕುಟುಂಬ ಸಮೇತವಾಗಿ ಬಂದು ನಮ್ಮ ಚಿತ್ರ ನೋಡಬಹುದು’ ಎಂದು ಹೇಳಿದರು.

ನಿರ್ದೇಶಕ ಶ್ರೀನಿವಾಸ ರಾಜು ಮಾತನಾಡಿ, ‘ಈ ಸಿನಿಮಾ ನನಗೆ ತೃಪ್ತಿ ನೀಡಿದೆ. ಈ ಸಿನಿಮಾಗೆ ನಿಜವಾದ ನಾಯಕ ಎಂದರೆ ಗಣೇಶ್. ಅಷ್ಟು ಅದ್ಬುತವಾಗಿ ನಟಿಸಿದ್ದಾರೆ.  ನಮ್ಮ ಚಿತ್ರ ಆರಂಭವಾಗಿ ಒಂದು ವರ್ಷಗಳಾಗಿದೆ. ಮುಂದಿನ ದಿನಗಳಲ್ಲಿ ಹಾಡುಗಳು ಹಾಗೂ ಟ್ರೇಲರ್ ಬಿಡುಗಡೆಯಾಗಲಿದೆ’ ಎಂದರು.

ಮುಳಬಾಗಿಲಿನ ಜನಪ್ರಿಯ ಶಾಸಕರು ಹಾಗೂ ನಿರ್ಮಾಪಕರಾಗಿರುವ ಸಮೃದ್ಧಿ ವಿ ಮಂಜುನಾಥ್  ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೆವಿಎನ್ ಸಂಸ್ಥೆ  ಚಿತ್ರವನ್ನು ವಿತರಣೆ ಮಾಡುತ್ತಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!