ಕಿಚ್ಚ ಸುದೀಪ್ ಅವರು ತಮಿಳು ನಿರ್ದೇಶಕ, ನಟ ಪಿ. ಸಮುದ್ರಖನಿ ಅವರ ‘ಸ್ಕೂಲ್ ಬಸ್’ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸೆ.2ರಂದು ಸುದೀಪ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರತಂಡ ಮಧ್ಯರಾತ್ರಿ ಸುದೀಪ್ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದೆ. ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅರ್ಪಿಸುತ್ತಿರುವ ಈ ಚಿತ್ರ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ.
‘ನಾಡೋಡಿಗಲ್’, ‘ಅಪ್ಪ’ ಮತ್ತು ‘ವಿನೋದಯ ಸಿತಂ’ ಮುಂತಾದ ಚಿತ್ರಗಳ ಮೂಲಕ ಜನಪ್ರಿಯರಾಗಿರುವ ಪಿ. ಸಮುದ್ರಖನಿ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಜೊತೆಗೆ ಪ್ರಮುಖ ಪಾತ್ರದಲ್ಲೂ ಅಭಿನಯಿಸುತ್ತಿದ್ದಾರೆ. ಮಕ್ಕಳ ಜವಾಬ್ದಾರಿ ಹೊತ್ತ ಶಾಲಾ ಬಸ್ ಚಾಲಕನೊಬ್ಬನ ಸುತ್ತ ಈ ಕಥೆ ಸಾಗಲಿದೆ. ಮಕ್ಕಳ ಭಾವನೆಗಳು, ಪೋಷಕರ ಕಳಕಳಿ ಹಾಗೂ ಶಿಕ್ಷಕರ ಬದುಕಿನ ವಿವಿಧ ಮಗ್ಗುಲುಗಳ ಮೇಲೆ ಸಿನಿಮಾ ಬೆಳಕು ಚೆಲ್ಲಲಿದೆ.
ಈ ಹಿಂದೆ ತಮಿಳಿನಲ್ಲಿ ‘ಪುಲಿ’ ಮತ್ತು ‘ಮುಡಿಂಜ ಇವನ ಪುಡಿ’ (ಕನ್ನಡದ ‘ಕೋಟಿಗೊಬ್ಬ 2’) ಸೇರಿದಂತೆ ಹಲವು ಚಿತ್ರಗಳ ಮೂಲಕ ಗುರುತಿಸಿಕೊಂಡಿದ್ದ ಸುದೀಪ್ ‘ಸ್ಕೂಲ್ ಬಸ್’ ಪ್ರಾಜೆಕ್ಟ್ ಒಪ್ಪಿಕೊಳ್ಳಲು ಅದರ ಆಕರ್ಷಕ ಕಥಾವಸ್ತು ಪ್ರಮುಖ ಕಾರಣ ಎನ್ನಲಾಗಿದೆ.
ಲೆನಿನ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಡಾ. ಪಿ. ಲೆನಿನ್ ಮುತ್ತುರಾಜ್ ಮತ್ತು ಡಾ. ಎ. ಟಿ. ಆಶಾ ಲೆನಿನ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಸ್ಯಾಮ್ ಸಿ.ಎಸ್ ಸಂಗೀತ ಸಂಯೋಜಿಸುತ್ತಿದ್ದು, ಎನ್. ಕೆ. ಏಕಾಂಬರಂ ಛಾಯಾಗ್ರಹಣ, ಎ. ಎಲ್. ರಮೇಶ್ ಸಂಕಲನ, ಜಾಕಿ ಕಲಾ ನಿರ್ದೇಶನ ಹಾಗೂ ಸಿಲ್ವಾ ಮತ್ತು ದಿನೇಶ್ ಸುಬ್ಬರಾಯನ್ ಸಾಹಸ ನಿರ್ದೇಶನ ಇದೆ.
‘ಸ್ಕೂಲ್ ಬಸ್’ ಚಿತ್ರವನ್ನು ಕನ್ನಡ, ತಮಿಳು, ತೆಲುಗು, ಹಿಂದಿ, ಇಂಗ್ಲಿಷ್, ಚೈನೀಸ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಭಾಷೆಗಳಲ್ಲಿ ವಿಶ್ವದಾದ್ಯಂತ ತೆರೆಗೆ ತರಲಾಗುತ್ತಿದೆ.
—–





Be the first to comment