ರವಿಚಂದ್ರನ್ ಕ್ಷಮೆ ಕೇಳಿ ಕಣ್ಣೀರಿಟ್ಟ ನಟಿ

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ವಿರುದ್ಧ ಅತ್ಯಾಚಾರ ಯತ್ನ ಆರೋಪ ಮಾಡಿದ್ದ ‘ಹಳ್ಳಿ ಮೇಷ್ಟು’ ನಟಿ 34 ವರ್ಷಗಳ ನಂತರ ಘಟನೆ ನೆನೆದು ಕಣ್ಣೀರಿಟ್ಟು ಕ್ಷಮೆ ಕೇಳಿದ್ದಾರೆ.

ಕನ್ನಡ ನಟ, ನಿರ್ದೇಶಕ ರಘುರಾಮ್‌ ಅವರ ಯೂಟ್ಯೂಬ್‌ ಚಾನೆಲ್‌  ಸಂದರ್ಶನದಲ್ಲಿ  ಮಾತನಾಡಿದ ನಟಿ ಬಿಂದಿಯಾ,  ‘ರವಿಚಂದ್ರನ್ ಅವರು ದೊಡ್ಡ ಬ್ರೇಕ್ ಕೊಟ್ರು. ಆದ್ರೆ  ಮ್ಯಾಗಜೀನ್ ವರದಿಯಿಂದ ದೊಡ್ಡ ಕೇಸ್ ಆಯ್ತು. ಆ ರೀತಿ ಆಗಬಾರದಿತ್ತು. ಇವತ್ತಿಗೂ ರವಿ ಸರ್ ಚಿತ್ರದಲ್ಲಿ ತಾಯಿ ಪಾತ್ರ, ಅಜ್ಜಿ ಪಾತ್ರ ಕೊಟ್ರೆ  ಯಾವುದೇ ಸಂಭಾವನೆ ಇಲ್ಲದೇ ನಟಿಸ್ತೀನಿ. ದಯವಿಟ್ಟು ಒಂದು ಅವಕಾಶ ಕೊಡಿ ಸರ್’ ಎಂದು ಗೋಗರೆದಿದ್ದಾರೆ.

‘ಅಂದಿನ ಕೇಸ್ ನಲ್ಲಿ ನನ್ನ ಆರೋಪಕ್ಕೆ ಯಾವುದೇ ಆಧಾರ ಇರಲಿಲ್ಲ. ನಾನು ಹೇಳಿದ್ದು ಬೇರೆ, ಮ್ಯಾಗಜೀನ್‌ನಲ್ಲಿ ಬಂದಿದ್ದು ಬೇರೆ. ಅದು ರವಿಚಂದ್ರನ್ ಅವರ ಬಗ್ಗೆ ತಪ್ಪು ಅಭಿಪ್ರಾಯ ವ್ಯಕ್ತವಾಗುವಂತಾಗಿತ್ತು. ಕೋರ್ಟ್‌ನಲ್ಲಿ ಅವರನ್ನು ನೋಡಿದಾಗ ಸಂಕಟವಾಯಿತು. ಅಷ್ಟು ದೊಡ್ಡ ನಟ ಅಲ್ಲಿಗೆ ಬರುವಂತಾಯಿತು. ರವಿ ಸರ್ ನಿಜಕ್ಕೂ ಯಾವುದೇ ತಪ್ಪು ಮಾಡ್ಲಿಲ್ಲ’ ಎಂದು ಬಿಂದಿಯಾ ಹೇಳಿದ್ದಾರೆ.

1992ರಲ್ಲಿ ತೆರೆಗೆ ಬಂದ ಕನ್ನಡದ ಸೂಪರ್  ಹಿಟ್ ಸಿನಿಮಾ ‘ಹಳ್ಳಿಮೇಷ್ಟ್ರು’ ಚಿತ್ರದಲ್ಲಿ ನಟಿ ಬಿಂದಿಯಾ ನಟಿಸಿದ್ದರು. ತಮಿಳಿನ ‘ಮುಂದಾನೈ ಮುಡಿಚು’ ಚಿತ್ರದ ರೀಮೇಕ್ ಆಗಿದ್ದ ‘ಹಳ್ಳಿಮೇಷ್ಟ್ರು’  ಭರ್ಜರಿ ಕಲೆಕ್ಷನ್  ಮಾಡಿತ್ತು.  ಮ್ಯಾಗಝೀನ್‌ವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ, ‘’ರವಿಚಂದ್ರನ್ ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದರು’’ ಎಂದು ಬಿಂದಿಯಾ ಆರೋಪ ಮಾಡಿದ್ದರು.

ಇದರಿಂದ ಕೆರಳಿದ ರವಿಚಂದ್ರನ್ ಸತ್ಯ  ಬಹಿರಂಗಗೊಳಿಸುವ ಸಲುವಾಗಿ  ಬಿಂದಿಯಾ ಅವರನ್ನ ಕೋರ್ಟ್‌ಗೆ ಎಳೆದಿದ್ದರು. ತಮ್ಮ ಮೇಲೆ ಮಾಡಿರುವ ಆರೋಪ  ಸಾಬೀತು ಪಡಿಸುವಂತೆ ಸವಾಲು ಹಾಕಿ ಬಿಂದಿಯಾ ವಿರುದ್ಧ  ಕೇವಲ 1 ರೂಪಾಯಿಗೆ ಮಾನನಷ್ಟ ಮೊಕದ್ದಮೆ ಹಾಕಿದ್ದರು.

ವಿಚಾರಣೆ ವೇಳೆ ಬಿಂದಿಯಾ ‘’ನಾನು ಆ  ಹೇಳಿಕೆ ನೀಡಿಲ್ಲ. ಅದೆಲ್ಲಾ ಸುಳ್ಳು’’ ಎಂದು ತಪ್ಪೊಪ್ಪಿ   ಕ್ಷಮೆ ಕೇಳಿದ್ದರು. ಬಳಿಕ ಪ್ರಕರಣ ಇತ್ಯರ್ಥವಾಗಿತ್ತು.  ಆ ಘಟನೆಯನ್ನು ಬಿಂದಿಯಾ ನೆನೆದು ಕಣ್ಣೀರು ಹಾಕಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!