ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿಯಾದ ಫೋಟೋಗಳನ್ನು ಹಂಚಿಕೊಂಡ ಬಳಿಕ ಖ್ಯಾತ ಗಾಯಕ ಅದ್ನಾನ್ ಸಮಿ ಟ್ರೋಲ್ ಗೆ ಗುರಿಯಾಗಿದ್ದಾರೆ.
ಫೆಬ್ರವರಿಯಲ್ಲಿ ಅದ್ನಾನ್ ಸಮಿ ಅವರು ಮೋಹನ್ ಭಾಗವತ್ ಅವರನ್ನು ಭೇಟಿಯಾದ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ‘ಅವರೊಂದಿಗೆ ಅದ್ಭುತ ಸಮಯ ಕಳೆದಿದ್ದೇನೆ. ಆರ್‌ಎಸ್‌ಎಸ್ ಬಗ್ಗೆ ಇರುವ ಹಲವು ತಪ್ಪು ಕಲ್ಪನೆಗಳನ್ನು ಅವರು ಸರಳವಾಗಿ ವಿವರಿಸಿದರು. ಅವರು ಅತ್ಯಂತ ಸಂಸ್ಕೃತ ಮತ್ತು ಉದಾತ್ತ ವ್ಯಕ್ತಿ’ ಎಂದು ಅದ್ನಾನ್ ಸಮಿ ಬರೆದಿದ್ದರು. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.
ಈಗ ಅದ್ನಾನ್ ಸಮಿ ಅವರು ತಮ್ಮನ್ನು ಟೀಕಿಸುವವರ ಬಗ್ಗೆ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ತಮ್ಮನ್ನು ಟೀಕಿಸುವವರ ಬಗ್ಗೆ ಯಾವುದೇ ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಸ್ವತಂತ್ರ ಮನಸ್ಸಿನ ವ್ಯಕ್ತಿ. ನನಗೆ ಏನು ಸರಿ ಅನಿಸುತ್ತದೋ ಅದನ್ನೇ ಮಾಡುತ್ತೇನೆ. ನಾನು ದೇವರಿಗೆ ಮಾತ್ರ ಉತ್ತರ ಕೊಡಬೇಕೇ ಹೊರತು ಬೇರೆ ಯಾರಿಗೂ ಅಲ್ಲ’ ಎಂದು ಹೇಳಿದ್ದಾರೆ.
‘ಒಂದು ಫೋಟೋ ಅಥವಾ ಪೋಸ್ಟ್ ನೋಡಿ ನನ್ನ ವ್ಯಕ್ತಿತ್ವದ ಬಗ್ಗೆ ನಿರ್ಧಾರಕ್ಕೆ ಬರುವವರು ಭ್ರಮೆಯಲ್ಲಿದ್ದಾರೆ. ನನ್ನನ್ನು ಟ್ರೋಲ್ ಮಾಡುವವರಲ್ಲಿ ಬಹುತೇಕರು ನನ್ನ ಅಭಿಮಾನಿಗಳೇ ಅಲ್ಲ. ಅವರು ಕೇವಲ ನೆಗೆಟಿವಿಟಿ ಹರಡಲು ಕಾಯುತ್ತಿರುತ್ತಾರೆ’ ಎಂದು ಅವರು ಕಿಡಿಕಾರಿದ್ದಾರೆ.
‘ಯಾರಾದರೂ ನನ್ನೊಂದಿಗೆ ಗೌರವದಿಂದ ನಡೆದುಕೊಂಡರೆ ಅವರು ಯಾವ ಸಂಘಟನೆಯವರೇ ಆಗಿರಲಿ, ಯಾವ ಸಿದ್ಧಾಂತದವರೇ ಆಗಿರಲಿ ನಾನು ಅದೇ ರೀತಿಯಲ್ಲಿ ವರ್ತಿಸುತ್ತೇನೆ. ಬೇರೆಯವರ ಅಭಿಪ್ರಾಯ ಆಧರಿಸಿ ನಾನು ಯಾರನ್ನೂ ಅಳೆಯುವುದಿಲ್ಲ. ಸಂಪೂರ್ಣವಾಗಿ ತಿಳಿಯದ ವ್ಯಕ್ತಿಗಳ ಬಗ್ಗೆ ತೀರ್ಪು ನೀಡುವುದಿಲ್ಲ’ ಎಂದು ನೇರವಾಗಿ ಹೇಳಿದ್ದಾರೆ.
—–





Be the first to comment