ಚಿತ್ರ : ಅಮರ್ಥ
ನಿರ್ದೇಶನ : ಗುರು ಹೆಗ್ಡೆ ಮತ್ತು ವಿನಯ್ ಪ್ರೀತಮ್
ನಿರ್ಮಾಣ : ಕನ್ಯಾನ ಸದಾಶಿವ ಶೆಟ್ಟಿ
ತಾರಾಗಣ : ಶ್ರೀನಗರ ಕಿಟ್ಟಿ, ಮೇಘನಾ ರಾಜ್ ಮೊದಲಾದವರು…
ರೇಟಿಂಗ್ : 3.5/5
ಇಬ್ಬರ ಕಥೆಯಂತೆ ಆರಂಭವಾಗಿ ಬಾಲ್ಯದ ಸ್ನೇಹಿತರ ಕಥೆಯಾಗಿ ಬದಲಾಗಿ ಕೊನೆಯಲ್ಲಿ ನಮ್ಮೆಲ್ಲರ ಬದುಕಂತೆ ಕಾಣಿಸುವುದೇ ಅಮರ್ಥ.
ಆರಂಭದಲ್ಲಿ ಅರ್ಥವಿಲ್ಲದ ಶೀರ್ಷಿಕೆ ಎನ್ನುವಂತೆ ಗೋಚರವಾಗಿದ್ದ ಅಮರ್ಥ ಪ್ರಸ್ತುತ ಪ್ರೇಕ್ಷಕರ ಮನ ಸೇರುವಲ್ಲಿ ಸಮರ್ಥವಾಗಿದೆ. ಅದಕ್ಕೆ ಮುಖ್ಯ ಕಾರಣ ಚಿತ್ರಕ್ಕೆ ಆಯ್ದುಕೊಂಡಿರುವ ವಿಷಯ.
ರಮೇಶ ಮತ್ತು ಲಕ್ಷ್ಮೀ ಬಾಲ್ಯಕಾಲದ ಆಪ್ತರು. ಆದರೆ ಕಾಲದ ಪ್ರಯಾಣದಲ್ಲಿ ಪಥ ಬದಲಾಯಿಸಿದವರು. ಮತ್ತೆ ಒಂದಾಗುವ ಸಂದರ್ಭ ಹೇಗೆ? ಅದಕ್ಕೆ ಕಾರಣವಾಗುವ ಘಟನೆ ಏನು? ಬಾಲ್ಯದ ನೆನಪುಗಳ ಜೊತೆ ಬಯಲಾಗುವ ಸತ್ಯ ಏನು ಎನ್ನುವುದನ್ನು ಅಮರ್ಥದಲ್ಲಿ ಸೊಗಸಾಗಿ ಕಟ್ಟಿಕೊಡಲಾಗಿದೆ.
ಲಕ್ಷ್ಮೀ ಪಾತ್ರದ ಬಾಳಲ್ಲಿ ಉಂಟಾಗುವ ಬದಲಾವಣೆಯಿಂದಲೇ ಕಥೆಯ ಆರಂಭ. ಲಕ್ಷ್ಮಿಯಾಗಿ ಮೇಘನಾ ರಾಜ್ ನಟನೆ ಅಮೋಘ. ರಮೇಶನಾಗಿ ಶ್ರೀನಗರ ಕಿಟ್ಟಿ ನಟಿಸಿದ್ದಾರೆ. ಬಾಲ್ಯದ ಅನುಭವಗಳನ್ನು ಮುಖದಲ್ಲಿ ಕಟ್ಟಿಕೊಡಬಲ್ಲ ಇವರ ನಟನಾ ಶಕ್ತಿಯನ್ನು ಪ್ರಶಂಸಿಸಲೇಬೇಕು. ಅದಕ್ಕೆ ಪೂರಕವಾಗಿ ಬಾಲ್ಯದ ಪಾತ್ರಗಳು ಕೂಡ ಇವರದೇ ಹೋಲಿಕೆ ಹೊಂದಿದೆ. ಅದು ಕಥೆ ಇನ್ನಷ್ಟು ಪರಿಣಾಮಕಾರಿಯಾಗಿ ಮನಸೇರಲು ಕಾರಣವಾಗುತ್ತದೆ.
ನಾಸ್ಟಾಲ್ಜಿಕ್ ಫೀಲಿಂಗ್ ಹೊತ್ತು ತರುವ ರೀತಿಯಲ್ಲಿ ಕರಾವಳಿಯ ಅಮೃತಹಳ್ಳಿ ಎನ್ನುವ ಊರನ್ನು ಚಿತ್ರೀಕರಿಸಿರುವುದು, ಮನಮುಟ್ಡುವ ಹಾಡುಗಳು, ಹಿತಮಿತ ಸಂಭಾಷಣೆಗಳು ಚಿತ್ರದ ಹೈಲೈಟ್. ಸಿನೆಮಾ ನೋಡುವ ಪ್ರೇಕ್ಷಕರು ತಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುತ್ತಾರೆ. ಅಥವಾ ತಮ್ಮ ಬಾಲ್ಯದಲ್ಲಿ ಇಂಥ ಘಟನೆಗಳು ನಡೆದಿಲ್ಲವೆಂದು ಹಪಹಪಿಸುತ್ತಾರೆ. ಅಲ್ಲಿಗೆ ಗುರುಹೆಗ್ಡೆ ಮತ್ತು ವಿನಯ್ ಎನ್ನುವ ಜೋಡಿ ನಿರ್ದೇಶಕರು ಪ್ರೇಕ್ಷಕರ ನಾಡಿಮಿಡಿತ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಚಿತ್ರದಲ್ಲಿ ಮಂಜುಭಾಷಿಣಿ, ಉಷಾ ಭಂಡಾರಿ, ಆರಾಧನಾ ಭಟ್, ತಮ್ಮಣ್ಣ ಶೆಟ್ಟಿ ಮೊದಲಾದ ಕಲಾವಿದರು ಇದ್ದಾರೆ. 25 ವರ್ಷಗಳ ಜೀವನವನ್ನು ಯಾರದೋ ಜೀವನ ಕೇವಲ ಎರಡೂ ಕಾಲು ಗಂಟೆಯಲ್ಲಿ ನಮ್ಮದಾಗುವ ಸೋಜಿಗವೇ ಅಮರ್ಥ.





Be the first to comment