ಚಿತ್ರ : KD
ನಿರ್ದೇಶನ : ಪ್ರೇಮ್
ನಿರ್ಮಾಣ : ವೆಂಕಟ್ ಕೆ ನಾರಾಯಣ
ತಾರಾಗಣ : ಧ್ರುವ ಸರ್ಜಾ, ಸಂಜಯ್ ದತ್, ರೀಶ್ಮಾ ನಾಣಯ್ಯ ಮೊದಲಾದವರು…
ರೇಟಿಂಗ್ : 4/5
ಎಂಬತ್ತರ ದಶಕದಲ್ಲಿ ಬೆಂಗಳೂರಿನಲ್ಲಿ ನಡೆಯುವ ಕಥೆ. ಕಾಳಿದಾಸ ಸೀಮೆ ಎಣ್ಣೆ ಮಾರುವ ಯುವಕ. ಗಂಧದ ಕಡ್ಡಿ ಕಾರ್ಖಾನೆಯಲ್ಲಿ ದುಡಿಯುವ ಯುವತಿಯೊಡನೆ ಆತನಿಗೆ ಪ್ರೀತಿ. ಆದರೆ ಈ ಪ್ರೀತಿಗೆ ಮಿಗಿಲು ಆತನಿಗೆ ದೇವಣ್ಣನ ಮೇಲಿನ ಅಭಿಮಾನ. ದೇವಣ್ಣ ಅಂದರೆ ಒಬ್ಬ ರೌಡಿ. ಆದರೆ ಕಾಳಿದಾಸನ ಪಾಲಿಗೆ ಸಾಕ್ಷಾತ್ ದೇವರು. ಬಾಲ್ಯದಲ್ಲೊಮ್ಮೆ ಜೀವ ಕಾಪಾಡಿದ್ದ ಎನ್ನುವ ಕೃತಜ್ಞತೆ ಅದಕ್ಕೆ ಕಾರಣ. ಆದರೆ ಅದೊಂದು ಕೆಟ್ಟ ಗಳಿಗೆಯಲ್ಲಿ ದೇವನಿಗೆ ಕಾಳಿದಾಸನ ವಿರುದ್ಧ ದ್ವೇಷ ಹುಟ್ಟುತ್ತದೆ. ಹೀಗೆ ಬಂದ ಕೋಪಕ್ಕೆ ಕಾರಣವೇನು ಅದರ ಪರಿಣಾಮ ಏನಾಗುತ್ತದೆ ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ನೀವು ಕೆ ಡಿ ಚಿತ್ರವನ್ನು ನೋಡಬೇಕು.
ಕಾಳಿದಾಸನಾಗಿ ಧ್ರುವ ಸರ್ಜಾ ಆಕರ್ಷಕ ನಟನೆ ನೀಡಿದ್ದಾರೆ. ಒಂದು ಕಡೆ ಪ್ರೇಮಿಯಾಗಿ, ಮತ್ತೊಂದೆಡೆ ಅಣ್ಣನ ಮೇಲೆ ಅಪಾರ ಪ್ರೀತಿಯಿಟ್ಟ ತಮ್ಮನಾಗಿ ಮಾತ್ರವಲ್ಲ ಆಕ್ಷನ್ ಪ್ರಿನ್ಸ್ ಇಮೇಜ್ ಗೆ ನಿರಾಶೆ ಮಾಡದಂತೆ ಅಭಿನಯ ನೀಡಿದ್ದಾರೆ.
ದೇವಣ್ಣನಾಗಿ ಸಂಜಯ್ ದತ್ ಅಬ್ಬರಿಸಿದ್ದಾರೆ. ಸಂಜಯ್ ದತ್ ಗೆ ಜೋಡಿಯಾಗಿ ಶಿಲ್ಪಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಕಾಳಿದಾಸನ ಅಣ್ಣನ ಪಾತ್ರದಲ್ಲಿ ರಮೇಶ್ ಅರವಿಂದ್ ನಟಿಸಿದ್ದಾರೆ. ಮಧ್ಯಂತರದ ಬಳಿಕ ಇವರ ಪಾತ್ರದಲ್ಲಿ ಒಂದು ಅನಿರೀಕ್ಷಿತ ತಿರುವು ಇದೆ.
ಪ್ರೇಮ, ಪ್ರೀತಿ, ಕೌಟುಂಬಿಕ ಕಾಳಜಿ, ರೌಡಿಸಂ, ರಾಜಕೀಯ, ಕುಸ್ತಿ, ಕಬಡ್ಡಿ. ಹೀಗೆ ಈ ಚಿತ್ರದಲ್ಲಿ ವಿವಿಧ ಆಯಾಮಗಳಿರುವ ಕತೆಯಿದೆ. ಆಕರ್ಷಕ ಲೊಕೇಶನ್ಸ್ ಸೇರಿದಂತೆ ಹಾಡುಗಳು, ಹಿನ್ನೆಲೆ ಸಂಗೀತ ಸೇರಿ ಚಿತ್ರವನ್ನು ಹಬ್ಬವಾಗಿಸಿದೆ.
ಚಿತ್ರದಲ್ಲಿ ಸ್ಟಾರ್ ಕಲಾವಿದರ ಜತೆಗೆ ಯಶ್ ಶೆಟ್ಟಿ, ಸುಚೇಂದ್ರ ಪ್ರಸಾದ್, ಮುನಿ, ಶೋಭರಾಜ್, ಬಿಗ್ ಬಾಸ್ ರಘು, ಮಾನಸಿ ಸುಧೀರ್ ಹೀಗೆ ಜನಪ್ರಿಯ ಕಲಾವಿದರ ದಂಡೇ ತುಂಬಿದೆ. ಎಲ್ಲ ರೀತಿಯಿಂದ ಪ್ರೇಕ್ಷಕರನ್ನು ಸೆಳೆಯುವ ಈ ಚಿತ್ರ ಎರಡನೇ ಭಾಗಕ್ಕೆ ಕುತೂಹಲದಿಂದ ಎದುರು ನೋಡುವಂತೆ ಮಾಡಿದೆ.





Be the first to comment