ಚಿತ್ರ: ಬಾಸ್
ನಿರ್ದೇಶನ: ವಿ. ಲವ
ನಿರ್ಮಾಣ: ಶ್ರೀ ಪ್ರೊಡಕ್ಷನ್ಸ್
ತಾರಾಗಣ: ತನುಷ್ ಶಿವಣ್ಣ, ವಂದಿತಾ ಗೌಡ, ನೀನಾಸಂ ಸಂದೀಪ್, ಪಾಯಲ್ ಚೆಂಗಪ್ಪ ಮುಂತಾದವರು.
ರೇಟಿಂಗ್: 3.5/5
ಆತ ಅಭಿಮಾನಿಗಳ ಪಾಲಿಗೆ ಬಾಸ್. ಆತನೋರ್ವ ಉತ್ತಮ ಕ್ರಿಕೆಟರ್ ಮಾತ್ರವಲ್ಲ, ಕೊಡುಗೈ ದಾನಿಕೂಡ. ಶ್ರಮಪಟ್ಟು ಮೇಲೆ ಬರುವವರು ಅಂದರೆ ವಿಶೇಷ ಅಭಿಮಾನ. ಇಂಥ ಬಾಸ್ ಅನಿರೀಕ್ಷಿತವಾಗಿ ವೈಯಕ್ತಿಕ ಬಾಳಿನಲ್ಲಿ ಸಂಕಷ್ಟಕ್ಕೆ ಈಡಾಗುತ್ತಾನೆ. ಅದು ಸಣ್ಣಪುಟ್ಟ ತೊಂದರೆಯೇನಲ್ಲ. ಕೊಲೆಯ ಆಪಾದನೆ! ಇದನ್ನು ಬಾಸ್ ಹೇಗೆ ಎದುರಿಸುತ್ತಾನೆ ಎನ್ನುವುದೇ ಚಿತ್ರದ ಕಥೆ.
ಚಿತ್ರದ ಒಂದೆಳೆ ಕಥೆ ನೋಡಿದರೆ ಇದು ಎಲ್ಲೋ ಕನ್ನಡ ಚಿತ್ರರಂಗದಲ್ಲಿ ನಡೆದಿರುವ ಘಟನೆಯಂತೆ ಗೋಚರಿಸುತ್ತದೆ. ಆದರೆ ಇದು ಯಾವುದೇ ನೈಜ ಘಟನೆಗೆ ಸಂಬಂಧಿಸಿಲ್ಲ ಎಂದು ಚಿತ್ರತಂಡ ಆರಂಭದಲ್ಲೇ ಹೇಳುತ್ತದೆ. ತನುಷ್ ಎನ್ನುವ ಕ್ರಿಕೆಟರ್ ಅಲಿಯಾಸ್ ಬಾಸ್ ಆಗಿ ತನುಷ್ ಶಿವಣ್ಣ ನಟಿಸಿದ್ದಾರೆ.
ಈ ಚಿತ್ರದಲ್ಲಿ ತನುಷ್ ಗೆ ಪತ್ನಿಯಲ್ಲದೆ ಮತ್ತೊಂದು ಸಂಬಂಧ ಕೂಡ ಇದೆ. ಪೂರ್ತಿ ಘಟನಾವಳಿಗೆ ಆಕೆಯೇ ಮೂಲ ಕಾರಣವಾಗುತ್ತಾಳೆ ಎಂದರೂ ತಡಪ್ಪಲ್ಲ. ಶೀಲ ಎನ್ನುವ ಆ ಪಾತ್ರವನ್ನು ವಂದಿತಾ ಗೌಡ ನಿಭಾಯಿಸಿದ್ದಾರೆ.
ಕಥೆಯಲ್ಲಿ ಸ್ವಾಮಿ ಎನ್ನುವ ಒಂದು ಪಾತ್ರ ವಿಶೇಷ ಪ್ರಾಮುಖ್ಯತೆ ಹೊಂದಿದೆ. ಇಂಥದೊಂದು ಪಾತ್ರವನ್ನು ಒಪ್ಪಿಕೊಂಡು ಸಮರ್ಥವಾಗಿ ನಿಭಾಯಿಸಿದ್ದಕ್ಕಾಗಿ ಸಂದೀಪ್ ನೀನಾಸಂ ಅವರನ್ನು ಅಭಿನಂದಿಸಲೇಬೇಕು.
ಚಿತ್ರದಲ್ಲೊಂದು ಹಾಡು ಬಾಸ್ ನ ಬವಣೆಯನ್ನು ಸಾರುವಂತಿದೆ. ನಿಜವಾದ ಅಭಿಮಾನಿಗಳ ಕಣ್ಣಲ್ಲಿ ನೀರು ಹರಿಸುವಂತೆ ಮಾಡಿರುವ ಈ ಗೀತೆ ಅಭಿಮಾನದ ಗೀತೆಯಾಗುವುದರಲ್ಲಿ ಸಂದೇಹವೇ ಇಲ್ಲ.
ಎಂಥ ಕತೆಗಳನ್ನು ಕೂಡ ನೈಜವಾಗಿ ಚಿತ್ರಿಸುವಲ್ಲಿ ವಿ.ಲವ ಅವರು ಸಿದ್ಧಹಸ್ತರು. ಈ ಬಾರಿ ಕೂಡ ಅಂಥದ್ದೇ ಕೆಲಸ ಮಾಡಿದ್ದಾರೆ. ಭ್ರಷ್ಟ ರಾಜಕಾರಣಿ ಮತ್ತು ಪೊಲೀಸರ ಮುಖವಾಡ ಕಳಚಬಲ್ಲಂಥ ಒಂದೊಳ್ಳೆಯ ಸಿನಿಮಾ ಮಾಡಿದ್ದಾರೆ. ಸಿನಿಮಾ ಪ್ರಿಯರು ನೋಡಿ ಖುಷಿಯಾಗುವುದರಲ್ಲಿ ಸಂದೇಹವಿಲ್ಲ.






Be the first to comment