Jerax Web Series Review : ‘ಜೆರಾಕ್ಸ್’ ಮಾಯೆಗೆ ಜೀ5 ವೀಕ್ಷಕರು ಫಿದಾ..!

Movie : ಜೆರಾಕ್ಸ್
Release Date : ಏ.24, 2026
Language : ಕನ್ನಡ
Genre : ಥ್ರಿಲ್ಲರ್‌, ಡ್ರಾಮಾ, ಕಾಮಿಡಿ
Director : ಶ್ರೀನಿಧಿ ಬೆಂಗಳೂರು
Cast : ನಾಗಭೂಷಣ್‌, ಪಾಯಲ್‌ ಚೆಂಗಪ್ಪ, ಮಂಜು ಪಾವಗಡ, ಓಂ ಪ್ರಕಾಶ್‌ ರಾವ್‌, ವಿಜಯ್‌ ಪ್ರಸಾದ್‌, ತುಕಾಲಿ ಸಂತು
Rating: 3.5/5

ಕನ್ನಡದಲ್ಲಿ ವೆಬ್ ಸಿರೀಸ್ ಮೂಲಕ ಕ್ರಾಂತಿ ಸೃಷ್ಟಿಸಿರುವುದು ಜೀ5 ವಾಹಿನಿ ಮಂದಿ. ಸಾಮಾನ್ಯವಾಗಿ ತಮ್ಮದೇ ಇತರ ಭಾಷೆಗಳಲ್ಲಿ ಪ್ರಸಾರವಾದ ಕಥೆಯನ್ನು ಹೊಸ ರೂಪದಲ್ಲಿ ಪ್ರಸ್ತುತ ಪಡಿಸುತ್ತಿದ್ದುದು ಇವರ ರೀತಿ. ಆದರೆ ಈ ಬಾರಿ ಕನ್ನಡದ ನಿರ್ದೇಶಕರೇ ಸೃಷ್ಟಿಸಿದ ಹೊಸ ಕಥೆಯೊಂದಿಗೆ ಅದ್ಭುತವಾಗಿ ಅಡಿ ಇಟ್ಟು ಎಲ್ಲರ ಮನಗೆಲ್ಲುತ್ತಿದ್ದಾರೆ. ಶುಕ್ರವಾರವಷ್ಟೇ ರಿಲೀಸ್ ಆಗಿರುವ ‘ಜೆರಾಕ್ಸ್’ ನೋಡಿದ ಎಲ್ಲರ ಪ್ರತಿಕ್ರಿಯೆ ಕೂಡ ಥೇಟು ಜೆರಾಕ್ಸ್ ನ ಹಾಗೆಯೇ ಸೂಪರ್ ಎಂದೇ ಇದೆ.

ಜೆರಾಕ್ಸ್ ಎನ್ನುವ ಆಸಕ್ತಿಕರ ಹೆಸರಿಗೆ ತಕ್ಕಂತೆ ಇಡೀ ಕಥೆ ಜೆರಾಕ್ಸ್ ಮಶೀನ್ ಸುತ್ತವೇ ತಿರುಗುತ್ತದೆ. ಹಾಗಂತ ಇಲ್ಲೊಂದು ಪ್ರೇಮಕಥೆ ಇಲ್ಲವೆಂದೇನಿಲ್ಲ. ಆದರೆ ಆ ಪ್ರೇಮ ಕಥೆಗೂ ಈ ಜೆರಾಕ್ಸ್ ಮಶೀನ್ ಶಕ್ತಿಯಾಗಿರುತ್ತದೆ! ಅದರ ಜತೆ ರಾಜಕೀಯದ ಆಟಗಳಲ್ಲೂ ಜೆರಾಕ್ಸ್ ಪ್ರಧಾನ ಪಾತ್ರವಹಿಸುತ್ತದೆ‌. ಮಾತ್ರವಲ್ಲ ಹಾಸ್ಯ ಕೂಡ‌ ಜೆರಾಕ್ಸ್ ಜತೆಯಲ್ಲೇ ಸೇರಿಕೊಂಡಿದೆ. ಹೀಗಾಗಿಯೇ ಇಲ್ಲಿನ ಜೆರಾಕ್ಸ್ ಸಾಮಾನ್ಯ ಮಶೀನ್ ಅಲ್ಲ. ಜಾದೂ ಮಾಡುವ ಜೆರಾಕ್ಸ್ ಮಶೀನ್.

ಜೆರಾಕ್ಸ್ ನಲ್ಲಿ ಜೆರಾಕ್ಸ್ ಅಂಗಡಿ ನಡೆಸುವ ವ್ಯಕ್ತಿಯಾಗಿ ನಾಗಭೂಷಣ್ ನಟಿಸಿದ್ದಾರೆ. ಆದರೆ ಇವರ ಅಂಗಡಿಯಲ್ಲಿರುವುದು ಕೆಟ್ಟು ಹೋದ ಜೆರಾಕ್ಸ್ ಮಶೀನ್ ಆಗಿರುತ್ತದೆ‌. ಆದರೆ ಈ‌ ಮಶೀನ್ ಕೆಟ್ಟು ಹೋಗಿರುವುದು ಈ‌‌ ಅಂಗಡಿ ಹಾಕಿಕೊಟ್ಟಂಥ ವ್ಯಕ್ತಿಗೇನೇ ತಿಳಿದಿರುವುದಿಲ್ಲ. ಹೀಗಾಗಿಯೇ ಆತ ಆ ಕೆಟ್ಟ ಯಂತ್ರದಲ್ಲೇ ಜೆರಾಕ್ಸ್ ತೆಗೆಯಲು ಪ್ರಯತ್ನಿಸಿ, ಸೋತು ಮರಳುತ್ತಾನೆ.‌ ಆದರೆ ಆನಂತರ ಅಂಗಡಿಗೆ ಆಗಮಿಸುವ ನಾಗಭೂಷಣ್ ತನ್ನ ಕಣ್ಣನ್ನೇ ನಂಬದಾಗುತ್ತಾರೆ.‌ ಕೆಟ್ಟು ಹೋದ ಕಪ್ಪು ಬಿಳುಪು ಜೆರಾಕ್ಸ್ ಯಂತ್ರದಿಂದ ನಿರಂತರವಾಗಿ ಕಲರ್ ಜೆರಾಕ್ಸ್ ಹೊರಗೆ ಬರುತ್ತಿರುತ್ತದೆ! ಈ ಜಾದೂ ಇಲ್ಲಿಗೆ ಮುಗಿಯುವುದಿಲ್ಲ. ಪೋಟೋ ಜೆರಾಕ್ಸ್ ಗೆ ಕೊಟ್ಟರೆ ಆ ರೂಪದಲ್ಲಿರುವ ವ್ಯಕ್ತಿಯೇ ಪ್ರತ್ಯಕ್ಷವಾಗುತ್ತಾನೆ. ಜೆರಾಕ್ಸ್ ಕೊಟ್ಟ ನಾಗಭೂಷಣ್ ಏನು ಹೇಳುತ್ತಾನೆಯೋ ಅದನ್ನು ಅದೇ ಸಮಯದಲ್ಲೇ ಪ್ರತ್ಯಕ್ಷಗೊಂಡ ವ್ಯಕ್ತಿ ಮಾರ್ನುಡಿಯುತ್ತಾನೆ.‌ ಈ ಫ್ಯಾಂಟಸಿಯನ್ನು ಇಟ್ಟುಕೊಂಡು ಅದ್ಭುತವನ್ನೇ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಶ್ರೀನಿಧಿ.

ಕಥಾನಾಯಕ ನಾಗಭೂಷಣ್ ಅವರಿಗೆ ಇಲ್ಲಿ ಏಕಮುಖಿ ಲವ್ ಸ್ಟೋರಿ ಇದೆ. ಆತನಲ್ಲಿ ಪ್ರೀತಿ ಮೂಡಿಸುವ ಸುಂದರಿಯಾಗಿ ಪಾಯಲ್ ಚೆಂಗಪ್ಪ ನಟಿಸಿದ್ದಾರೆ. ಆದರೆ ಆಕೆಗೆ ಬೇರೊಂದು ಪ್ರೇಮದಲ್ಲಿರುತ್ತಾಳೆ. ಹಾಗಾದರೆ ಆ ಪ್ರೇಮ ಏನಾಗುತ್ತದೆ? ಅದಕ್ಕಾಗಿ ನಾಗಭೂಷಣ್ ಜೆರಾಕ್ಸ್ ಮಶೀನ್ ಮೂಲಕ‌ ಮಾಡುವ ತಂತ್ರವೇನು? ಅದರಿಂದ ಆಗುವ ಅನರ್ಥಗಳೇನು? ಹೀಗೆ ಕುತೂಹಲ ಮೂಡಿಸುತ್ತಾ ಸಾಗುವ ಸಂಚಿಕೆಗಳು ಪ್ರಸ್ತುತ ಜೀ ಫೈನಲ್ಲಿ ಲಭ್ಯ ಇವೆ‌.

ಡಾಲಿ ಧನಂಜಯ ನಿರ್ಮಾಣದಲ್ಲಿ ತಯಾರಾಗಿರುವ ಸಿರೀಸ್ ಇದು ಎನ್ನುವುದೇ ಇದರ ಪ್ರಥಮ ಆಕರ್ಷಣೆ.
ಬ್ಲಿಂಕ್ ಚಿತ್ರದ ಮೂಲಕ ಈಗಾಗಲೇ ವಿಮರ್ಶಕರ ಪ್ರಶಂಸೆ ಪಡೆದಿರುವ ನಿರ್ದೇಶಕ ಶ್ರೀನಿಧಿ ಈ‌ ವೆಬ್ ಸಿರೀಸ್ ನಲ್ಲಿ ಮತ್ತಷ್ಟು ಜಾದೂ ಮಾಡಿದ್ದಾರೆ.

ನಾಗಭೂಷಣ್ ಪ್ರಮುಖ ಪಾತ್ರ ಮಾಡಿದ್ದರೆ, ಪ್ರೇಯಸಿಯಾಗಿ ನಟಿ ಪಾಯಲ್ ಚೆಂಗಪ್ಪ ಅಭಿನಯಿಸಿದ್ದಾರೆ. ‌ನಾಯಕನಿಗೆ ಜೆರಾಕ್ಸ್ ಮಶೀನ್ ಹಾಕಿಕೊಡುವ ಪಾತ್ರದಲ್ಲಿ
ಓಂ‌ ಪ್ರಕಾಶ್ ರಾವ್ ನಟಿಸಿದ್ದಾರೆ. ಇಲ್ಲಿ ಸಾಕಷ್ಟು ಜನಪ್ರಿಯ ಕಲಾವಿದರ ದಂಡೇ ಸೇರಿಕೊಂಡಿದೆ. ‘ಸಿದ್ಲಿಂಗು’ ನಿರ್ದೇಶಕ ವಿಜಯ ಪ್ರಸಾದ್ ರಾಜಕಾರಣಿ ಪಾತ್ರ ನಿರ್ವಹಿಸಿದ್ದಾರೆ. ಬಿಗ್ ಬಾಸ್ ಖ್ಯಾತಿಯ

ಮಂಜು ಪಾವಗಡ,ತುಕಾಲಿ ಸಂತು, ಕಾಮಿಡಿ ಕಿಲಾಡಿ ಜಗ್ಗಪ್ಪ ಮೊದಲಾದ ಕಲಾವಿದರ ಪಾತ್ರಗಳಿಗೆ ವೀಕ್ಷಕರು ಮನಸೋಲುತ್ತಿದ್ದಾರೆ. ಜೀ 5 ಇದುವರೆಗೆ ಪ್ರಸ್ತುತ ಪಡಿಸಿರುವ ವೆಬ್ ಸಿರೀಸ್ ಗಳಲ್ಲೇ ಇದು ಹೆಚ್ಚು ಗಮನಾರ್ಹ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ.

Be the first to comment

Leave a Reply

Your email address will not be published. Required fields are marked *

Translate »
error: Content is protected !!