ಬೇಲ್

Movie Review: ಬೇಲ್ ನಲ್ಲಿ ಶಿವರಾಜ್ ಕುಮಾರ್ ಕಮಾಲ್

ಚಿತ್ರ: ಬೇಲ್
ನಿರ್ದೇಶನ: ಪವನ್ ಒಡೆಯರ್
ನಿರ್ಮಾಣ: ಕೆ.ವಿ.ಎನ್
ತಾರಾಗಣ: ಶಿವರಾಜ್ ಕುಮಾರ್, ಸಾಯಿ ಕುಮಾರ್, ಜಯರಾಮ್ ಮುಂತಾದವರು….
ರೇಟಿಂಗ್ : 4/5

ಆರೋಪಿಗಳಿರಲಿ, ಅಪರಾಧಿಗಳಿರಲಿ ಜೈಲು ಸೇರಿದಾಗ ಮೊದಲು ಬಯಸುವುದೇ ಜಾಮೀನು ಪಡೆದು ಹೊರಬರಬೇಕು ಎಂದು. ಆದರೆ ಬೇಲ್ ಸಿಕ್ಕರೂ ಜೈಲ್ ಒಳಗೇ ಇರುತ್ತೇವೆ ಎಂದುಕೊಳ್ಳುವ ವ್ಯಕ್ತಿಗಳು ಇರುತ್ತಾರ? ನಿಜವಾದ ಅಪರಾಧಿಗಳಲ್ಲಿ ಅಂಥ ಮನೋಭಾವ ಸೃಷ್ಟಿಸುವ ಚಿತ್ರವೇ ಬೇಲ್!

ಅಪರಾಧ ಕೃತ್ಯ ನಡೆಸಿದವರು ತಮ್ಮ‌‌ ವಶೀಲಿಬಾಜಿ ಬಳಸಿ ಬೇಲ್ ಪಡೆದುಕೊಳ್ಳುತ್ತಾರೆ. ಆದರೆ ಹೊರಗೆ ಬಂದವರಿಗೆ ಸಾವಿನ ಶಿಕ್ಷೆ ನೀಡಲು ಚಿತ್ರದ ನಾಯಕ ಮುಂದಾಗುತ್ತಾನೆ. ಬೇಲ್ ಪಡೆದು ಹೊರಬರುವ ಕ್ರೂರಿಗಳೆಲ್ಲ ಸಹಜ ಅಥವಾ ಆಕಸ್ಮಿಕ ಎನ್ನುವಂಥ ಸಾವಿಗೊಳಗಾಗುತ್ತಾರೆ. ಆದರೆ ಇವೆಲ್ಲದರ ಹಿಂದೆ ಒಬ್ಬ ವ್ಯಕ್ತಿಯ ಕೈವಾಡ ಇರುವುದು ಒಂದು ಹಂತದಲ್ಲಿ ಬಯಲಾಗುತ್ತದೆ. ಅದು ಹೇಗೆ ಎನ್ನುವುದೇ ಚಿತ್ರದ ಹೈಲೈಟ್. ಕಾನೂನಿನ ಕುಣಿಕೆಯಿಂದ ಪಾರಾಗಲು ನಾಯಕ ನಡೆಸುವ ಉಪಾಯಗಳೇನು ಎನ್ನುವುದನ್ನು ಚಿತ್ರ ಆಕರ್ಷಕವಾಗಿ ತೆರೆದಿಟ್ಟಿದೆ.

ಚಿತ್ರದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ವಿಜಯ್ ಆಗಿ ಶಿವರಾಜ್ ಕುಮಾರ್ ನಟಿಸಿದ್ದಾರೆ. ವಯಸ್ಸಾದ ಪಾತ್ರವಾದರೂ ಕೂಡ, ಒಬ್ಬ ಹಿರಿಯ ನಾಗರಿಕ ಹೇಗೆ ದುಷ್ಟ ಶಕ್ತಿಗಳ‌ ವಿರುದ್ಧ ಹೋರಾಡಬಲ್ಲ ಎಂದು ತೋರಿಸಿರುವ ಚಿತ್ರ ಇದು. ಶಿವಣ್ಣನ ವಯಸ್ಸಿಗೆ ಮೀರಿದ ಪಾತ್ರ ಖಂಡಿತವಾಗಿಯೂ ಅಲ್ಲ. ಆದರೆ ಅವರ ಎನರ್ಜಿಯನ್ನು ಕಾಣುವಾಗ ಈ ವಯಸ್ಸನ್ನು ಒಪ್ಪಿಕೊಳ್ಳುವುದು ಕಷ್ಟ. ಮಾತ್ರವಲ್ಲ, ಕಾನೂನನ್ನು ಕೈಗೆತ್ತಿಕೊಳ್ಳುವ ಪಾತ್ರವಾದರೂ, ಎಲ್ಲ ವಯಸ್ಸಿನವರು ಹೆಮ್ಮೆಯಿಂದ ಚಪ್ಪಾಳೆ ತಟ್ಟುವಂತೆ ನಟನೆ ಮಾಡಿದ್ದಾರೆ.

ಕಥಾ ನಾಯಕನ ಈ ಹೋರಾಟದಲ್ಲಿ ಇಬ್ಬರು ಸ್ನೇಹಿತರು ಜತೆಯಾಗುತ್ತಾರೆ. ಅವರಲ್ಲಿ ಒಬ್ಬರು ನಿವೃತ್ತ ನ್ಯಾಯಾಧೀಶ. ಮತ್ತೋರ್ವ ವ್ಯಕ್ತಿ ನಿವೃತ್ತ ವಿಜ್ಞಾನಿ. ಅಲಿ ಮತ್ತು ರಾಬರ್ಟ್ ಎನ್ನುವ ಎರಡು ಪಾತ್ರಗಳನ್ನು ಸಾಯಿಕುಮಾರ್ ಮತ್ತು ಮಲಯಾಳಂ‌ ನಟ ಜಯರಾಮ್ ಅಭಿನಯಿಸಿದ್ದಾರೆ. ಈ ಮೂವರು ಸೇರಿ ನಡೆಸುವ ಹೋರಾಟ ಚಿತ್ರವನ್ನು ಆಸಕ್ತಿಯಿಂದ ನೋಡಿಕೊಂಡು ಹೋಗುವಂತೆ ಮಾಡಿದೆ.

ಶಿವರಾಜ್ ಕುಮಾರ್ ಪಾತ್ರದ ಜೋಡಿಯಾಗಿ ಸಂಗೀತಾ ನಟಿಸಿದ್ದಾರೆ. ಗಂಡನನ್ನ ಸದಾ ಬೆದರಿಸಿ ಅಮ್ಮಾವ್ರ ಗಂಡನಂತೆ ಇರಿಸಿಕೊಳ್ಳುವ ಪತ್ನಿಯಾಗಿ ಸಂಗೀತಾ ಮತ್ತು ಹೆಂಡತಿಗೆ ಹೆದರಿದಂತೆ ನಟಿಸುವ ಶಿವಣ್ಣನ ಅಭಿನಯ ಹಾಸ್ಯದ ಸನ್ನಿವೇಶಗಳನ್ನು ಸೃಷ್ಟಿಸುತ್ತದೆ.

ಶಿವರಾಜ್ ಕುಮಾರ್ ಪುತ್ರಿಯಾಗಿ ಸಂಜನಾ ಆನಂದ್ ನಟಿಸಿದ್ದಾರೆ. ಅವರಿಗೆ ತಂದೆಯೊಂದಿಗಿನ‌ ಪ್ರೀತಿ ಮತ್ತು ಭಾವಿ ಪತಿಯೊಂದಿಗಿನ ಒಲವು ಎರಡನ್ನು ಪ್ರದರ್ಶಿಸುವ ವಿಶೇಷ ಅವಕಾಶ ದೊರಕಿದೆ. ಭಾವೀ‌ಪತಿಯಾಗಲು ಸಿದ್ಧನಾಗುವ ಪೊಲೀಸ್ ಪಾತ್ರದಲ್ಲಿ ದೀಕ್ಷಿತ್ ಶೆಟ್ಟಿ ಅಭಿನಯಿಸಿದ್ದಾರೆ.

ಚಿತ್ರದ ಒಂದು‌ ಪ್ರಮುಖ ಘಟ್ಟದಲ್ಲಿ ಎಂಟ್ರಿ ನೀಡುವ ಲೂಸ್ ಮಾದ ಯೋಗಿ ಅದ್ಭುತ ಅಭಿನಯ ನೀಡಿದ್ದಾರೆ. ಖಳನಟನಾಗಿ ಕ್ರೌರ್ಯ ಮೆರೆಯುವ ಅವಕಾಶ ಯೋಗಿ ಅವರಿಗೆ ಸಿಕ್ಕಿದೆ. ಯೋಗಿ, ರಮೇಶ್ ಇಂದಿರಾ, ಗೋಪಾಲಕೃಷ್ಣ ದೇಶಪಾಂಡೆ ಹೀಗೆ ಪ್ರತಿಯೊಂದು ಪಾತ್ರಗಳಿಂದಲೂ ಅದ್ಭುತ ಅಭಿನಯ ತೆಗೆಸಿರುವ ಕೀರ್ತಿ ನಿರ್ದೇಶಕ ಮಂಡಳಿಯ ಪವನ್ ಒಡೆಯರ್ ಗೆ ಸಲ್ಲುತ್ತದೆ.

ಕುಟುಂಬ ಪ್ರೀತಿ, ಸ್ನೇಹ, ಪ್ರೇಮ, ದೇಶಭಕ್ತಿ, ಸಾಹಸ, ಕುತೂಹಲ, ರೋಮಾಂಚನ ಹೀಗೆ ಪ್ರತಿಯೊಂದು ಭಾವನೆಗಳನ್ನು ಕೂಡ ಒಂದೇ ಚಿತ್ರದಲ್ಲಿ ಅನುಭವಿಸಬೇಕಾದರೆ ಬೇಲ್ ಚಿತ್ರವನ್ನು ನೋಡಬಹುದು.

Be the first to comment

Leave a Reply

Your email address will not be published. Required fields are marked *

Translate »
error: Content is protected !!