ಯುವ ರಾಜಕುಮಾರ್ ಅವರು ನಾಯಕರಾಗಿ ನಟಿಸುತ್ತಿರುವ ಚಿತ್ರದ ಶೀರ್ಷಿಕೆ ‘ಪವರ್ ಮ್ಯಾನ್’ ಗಣೇಶ ಚತುರ್ಥಿಯ ಶುಭದಿನದಂದು ಅನಾವರಣವಾಗಿದೆ.
ರಾಘವೇಂದ್ರ ರಾಜಕುಮಾರ್ ಅವರು ಈ ಚಿತ್ರದ ಶೀರ್ಷಿಕೆ ಅನಾವರಣ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ಮಂಗಳ ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್ ಮುಂತಾದವರು ಶೀರ್ಷಿಕೆ ಅನಾವರಣ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸದಾಶಿವನಗರದ ಡಾ. ರಾಜಕುಮಾರ್ ಅವರು ವಾಸವಿದ್ದ ಜಾಗದಲ್ಲೇ ಚಿತ್ರದ ಶೀರ್ಷಿಕೆ ಅನಾವರಣವಾಗಿರುವುದು ವಿಶೇಷ.
ತರುಣ್ ಸುಧೀರ್ ಹಾಗೂ ಜಗದೀಶ್ ಗೌಡ ಅವರ ನಿರ್ಮಾಣದಲ್ಲಿ ಜಡೇಶ್ ಕೆ ಹಂಪಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ “ಪವರ್ ಮ್ಯಾನ್” ಚಿತ್ರಕ್ಕೆ “ದಿ ಗ್ರೇಟೆಸ್ಟ್ ಪವರ್ ಇನ್ ಎ ಗುಡ್ ಹಾರ್ಟ್” ಎಂದು ಅಡಿಬರಹವಿದೆ.
‘ಇದು ಈ ನೆಲದ ಕಥೆ. ಈ ಹಿಂದಿನ ಚಿತ್ರಗಳಲ್ಲಿ ಈ ನೆಲದ ಕಥೆಯನ್ನು ಬೇರೆ ರೀತಿ ಹೇಳಿದ್ದೆ. ಇದರಲ್ಲಿ ಬೇರೆ ರೀತಿ ಹೇಳಲು ಹೊರಟಿದ್ದೇನೆ. , ಹಾಡುಗಳು ಹಾಗೂ ಸಾಹಸ ಸನ್ನಿವೇಶ ಚಿತ್ರದ ಹೈಲೆಟ್ ಎಂದರೆ ತಪ್ಪಾಗಲಾರದು. ಯುವ ಅವರು ನೃತ್ಯ ಹಾಗೂ ಫೈಟ್ ಎರಡರಲ್ಲೂ ಪರಿಣಿತರು. ತರುಣ್ ಸುಧೀರ್ ಹಾಗೂ ಜಗದೀಶ್ ಗೌಡ ಅವರು ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತದಲ್ಲಿ ಒಳ್ಳೆಯ ಹಾಡುಗಳು ಬರಲಿದೆ. ಈಗ ಸ್ಕ್ರಿಪ್ಟ್ ವರ್ಕ್ ಪೂರ್ಣವಾಗಿದೆ. ಇದು ಪುನೀತ್ ರಾಜಕುಮಾರ್ ಅವರ ಕುರಿತಾದ ಚಿತ್ರವಲ್ಲ. ಮುಂದಿನ ತಿಂಗಳಿನಿಂದ ಚಿತ್ರೀಕರಣ ಆರಂಭವಾಗಲಿದೆ’ ಎಂದು ನಿರ್ದೇಶಕ ಜಡೇಶ್ ಕೆ ಹಂಪಿ ಹೇಳಿದರು.
‘ಇದೊಂದು ಎಲ್ಲರಿಗೂ ಆಪ್ತವಾಗುವ ಕಥೆ. ವಿಶೇಷವಾಗಿ ಮಕ್ಕಳಿಗೆ. ಹಾಗಾಗಿ “ಪವರ್ ಮ್ಯಾನ್” ಎಂದು ಹೆಸರಿಡಲಾಗಿದೆ’ ಎಂದು ನಿರ್ಮಾಪಕ ತರುಣ್ ಸುಧೀರ್ ತಿಳಿಸಿದರು.
‘”ಪವರ್ ಮ್ಯಾನ್” ಹೆಸರಿನಲ್ಲೇ ಪವರ್ ಇದೆ. ಎಲ್ಲರಿಗೂ ಇಷ್ಟವಾಗುವ ಹಾಗೂ ನಾನು ಈ ಹಿಂದೆ ಮಾಡಿರದ ಪಾತ್ರವಿದು. ನಿರ್ಮಾಪಕರಾದ ತರುಣ್ ಸುಧೀರ್, ಜಗದೀಶ್ ಗೌಡ ನಿರ್ಮಾಣದ ಹಾಗೂ ಜಡೇಶ್ ಕೆ ಹಂಪಿ ನಿರ್ದೇಶನದ ಈ ಚಿತ್ರದಲ್ಲಿ ನಟಿಸುತ್ತಿರುವುದು ಬಹಳ ಸಂತೋಷವಾಗಿದೆ’ ಎಂದರು ನಾಯಕ ಯುವ ರಾಜಕುಮಾರ್.
—-





Be the first to comment