ಮಾದೇವ ಚಿತ್ರದ ಬಳಿಕ ವಿನೋದ್ ಪ್ರಭಾಕರ್ ಹೊಸ ಇಮೇಜ್ ಪಡೆದುಕೊಂಡಿದ್ದಾರೆ. ಆ್ಯಕ್ಷನ್ ಚಿತ್ರಗಳಿಗೆ ಮಾತ್ರ ಸೀಮಿತವಾಗಿದ್ದ ವಿನೋದ್, ಪ್ರಯೋಗಾತ್ಮಕ ವಸ್ತುಗಳಲ್ಲಿಯೂ ಕಮರ್ಷಿಯಲ್ ತಾಕತ್ತ್ ಏನು ಎಂದು ತೋರಿಸಿಕೊಡುತ್ತಿದ್ದಾರೆ. ಅದಕ್ಕೆ ಹೊಸ ಉದಾಹರಣೆ ಬಲರಾಮನ ದಿನಗಳು. ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ವಿನೋದ್ ಪ್ರಭಾಕರ್ ಅವರ ಲುಕ್ ಮತ್ತು ಡಾನ್ಸ್ ಎಲ್ಲರ ಮೆಚ್ಚುಗೆ ಪಡೆಯುತ್ತಿದೆ. ಅದ್ಧೂರಿಯಾಗಿ ನಡೆದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ವಿನೋದ್ ಪ್ರಭಾಕರ್ ಕೂಡ ಇದೇ ಖುಷಿಯನ್ನು ಹಂಚಿಕೊಂಡರು.
ಚಿತ್ರದ ನಿರ್ಮಾಪಕಿ ಪದ್ಮಾವತಿ ಖುದ್ದಾಗಿ ವೇದಿಕೆಯೇರಿ ಟೀಸರ್ ಬಿಡುಗಡೆಗೊಳಿಸಿದರು. ಚಿತ್ರದಲ್ಲಿ ತೊಡಗಿಕೊಳ್ಳಲು ತಮ್ಮ ಮಕ್ಕಳು ನೀಡಿದ ಸಹಕಾರದ ಬಗ್ಗೆ ಖುಷಿಯಿಂದ ಹೇಳಿಕೊಂಡರು. ಪುತ್ರ ಶ್ರೇಯಸ್ ಮತ್ತು ಆತನಿಗೆ ಸಹಕಾರಿಯಾಗಿ ನಿಂತ ನವವಧು ಸೊಸೆಯ ಬಗ್ಗೆಯೂ ಮೆಚ್ಚುಗೆ ಮಾತನಾಡಿದರು. ವಿನೋದ್ ಪ್ರಭಾಕರ್ ಮತ್ತು ನಿರ್ದೇಶಕ ಕೆ.ಎಂ ಚೈತನ್ಯ ತಮ್ಮ ಚಿತ್ರಕ್ಕೆ ಶಕ್ತಿಯಾಗಿರುವುದಾಗಿ ಹೇಳಿದರು. ಪದ್ಮಾವತಿಯವರು ನಿರ್ಮಾಣದ ಜತೆಗೆ ಚಿತ್ರದಲ್ಲೊಂದು ಪಾತ್ರವನ್ನು ಕೂಡ ಮಾಡಿರುವುದು ವಿಶೇಷ.
ಇದೇ ಸಂದರ್ಭದಲ್ಲಿ ಮಾತನಾಡಿದ ವಿನೋದ್ ಪ್ರಭಾಕರ್, ನಿರ್ಮಾಪಕರ ಪುತ್ರನಿಗೆ ಒಂದು ಕಿವಿ ಮಾತು ಹೇಳಿದರು. “ಒಂದು ಸಿನಿಮಾದ ಮೂಲಕ ಪಡೆಯುವುದು ಅನುಭವವೇ ಅಲ್ಲ. ನನ್ನ ತಂದೆ ನೂರಾರು ಸಿನಿಮಾಗಳಲ್ಲಿ ನಟಿಸಿದರು. ನಿರ್ಮಿಸಿ, ನಿರ್ದೇಶನವನ್ನೂ ಮಾಡಿದವರು. ಆದರು ಕೂಡ ಸಿನಿಮಾ ಏನು ಎಂದು ಅರ್ಥವಾಗಿಲ್ಲ ಎಂದೇ ಹೇಳುತ್ತಿದ್ದರು. ಹೀಗಾಗಿ ಈ ಚಿತ್ರದಲ್ಲಿ ಸಿಕ್ಕ ಅನುಭವವೇ ಅಂತಿಮ ಎಂದು ಹೇಳಲಾಗದು. ನಾವೆಲ್ಲರೂ ಸಿನಿಮಾ ವಿದ್ಯಾರ್ಥಿಗಳು. ಆದರೂ ಮಾದೇವ ಚಿತ್ರಕ್ಕೆ ಸಿಕ್ಕ ಯಶಸ್ಸು ಕಂಡ ಬಳಿಕ ಈ ಚಿತ್ರ ಅದರ ಎರಡು ಪಟ್ಟು ಗೆಲುವು ಕಾಣುವ ನಿರೀಕ್ಷೆ ಮೂಡಿಸಿದೆ ಎಂದರು.
ಇದು ಎಂಬತ್ತರ ದಶಕದ ಕತೆಯನ್ನು ಹೇಳುವ ಚಿತ್ರವಾಗಿದ್ದು ಟೀಸರ್ ಗಮನಿಸಿದಾಗ ಆ ದಿನಗಳು ಸಿನಿಮಾದೊಂದಿಗೆ ಸಂಬಂಧ ಇರುವುದು ಗೋಚರಿಸುತ್ತದೆ.
ನಿರ್ದೇಶಕ ಕೆ.ಎಮ್ ಚೈತನ್ಯ ಅವರು ತಮ್ಮೊಂದಿಗೆ ಕೈ ಜೋಡಿಸಿದ ಸಹಾಯಕ ನಿರ್ದೇಶಕರ ತಂಡವನ್ನು ವೇದಿಕೆಗೆ ಕರೆದು ಪರಿಚಯಿಸಿದರು. ಚಿತ್ರಕ್ಕಾಗಿ ತಂಡ ಸಮರ್ಪಣಾಭಾವದಿಂದ ಕೆಲಸ ಮಾಡಿರುವುದನ್ನು ಖುಷಿಯಿಂದ ಹೇಳಿಕೊಂಡರು.
ನಟ ರಮೇಶ್ ಇಂದಿರಾ ಅವರು ನಿರ್ದೇಶಕ ಚೈತನ್ಯರನ್ನು ‘ಸ್ವೀಟ್’ ಎಂದು ಕರೆದರು. ತಾವು ಚಿತ್ರದಲ್ಲಿ ಮೋನಪ್ಪ ರೈ ಎನ್ನುವ ಪಾತ್ರ ಮಾಡುತ್ತಿದ್ದು ತುಳು ಮಾತನಾಡಿದ್ದೇನೆ ಎಂದರು.
ಬಿಗ್ ಬಾಸ್ ಮೂಲಕ ಖ್ಯಾತಿ ಪಡೆದ ನಟ ವಿನಯ್ ಗೌಡ ತಮ್ಮದು ಚಿತ್ರದಲ್ಲಿ ‘ಕತ್ತಿ’ ಹೆಸರಿನ ರೌಡಿಯ ಪಾತ್ರ ಎಂದರು.
ಮತ್ತೋರ್ವ ಬಿಗ್ ಬಾಸ್ ಸ್ಪರ್ಧಿ ರಜತ್ ಕೂಡ ಈ ಚಿತ್ರದಲ್ಲಿ ನಟಿಸುತ್ತಿರುವುದು ವಿಶೇಷ. ಚಿಕ್ಕ ಪಾತ್ರವಾದರೂ ಸಾಹಸ ಸನ್ನಿವೇಶದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ನಟ ಡ್ರ್ಯಾಗನ್ ಮಂಜು ಹೇಳಿದರು. ತಮಗೆ ಸಾಹಸ ದೃಶ್ಯಗಳಲ್ಲಿ ಡ್ಯೂಪ್ ನೀಡಿದ್ದಕ್ಕಾಗಿ ಅವರು ನಿರ್ದೇಶಕರಿಗೆ ತ್ಯಾಂಕ್ಸ್ ಹೇಳಿದರು.
ಚಿತ್ರಕ್ಕೆ ಹಾಡುಗಳನ್ನು ಬರೆದಿರುವ ಕವಿರಾಜ್, ನಾಗಾರ್ಜುನ ಶರ್ಮ ಮತ್ತು ಪ್ರಮೋದ್ ಮರವಂತೆ ತಮ್ಮ ಅನುಭವಗಳ ಬಗ್ಗೆ ಮಾತನಾಡಿದರು. ಪೊಲೀಸ್ ಪಾತ್ರಗಳನ್ನು ಮಾಡಿರುವ ಪ್ರತಾಪ್ ನಾರಾಯಣ್ ಮತ್ತು ಅಶ್ವಿನ್ ಹಾಸನ್ ಇದು ಈ ಹಿಂದಿನ ಚಿತ್ರಗಳಿಗಿಂತ ವಿಭಿನ್ನ ಎಂದರು.
ಚಿತ್ರದಲ್ಲಿ ‘ಸಿಂಗ್ಲಿ ಗ್ಯಾಂಗ್’ ಮೂಲಕ ನಿರ್ಮಾಪಕರ ಪುತ್ರ ತೇಜಸ್ ಕೂಡ ನಟಿಸಿದ್ದಾರೆ. ಸಿಂಗ್ಲಿ ಪಾತ್ರಧಾರಿ ಆದಿತ್ಯ ಕೂಡ ತಮ್ಮ ಪಾತ್ರದ ಬಗ್ಗೆ ಖುಷಿ ವ್ಯಕ್ತಪಡಿಸಿದರು. ಆಶಿಷ್ ವಿದ್ಯಾರ್ಥಿ, ಅತುಲ್ ಕುಲಕರ್ಣಿ, ಶರತ್ ಲೋಹಿತಾಶ್ವ ಮೊದಲಾದವರ ನಟನೆ ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರಿಗೆ ಜೋಡಿಯಾಗಿ ಸಂಜನಾ ಆನಂದ್ ನಟಿಸಿದ್ದಾರೆ.





Be the first to comment