Grey Game : ಮೇ 10ಕ್ಕೆ ‘ಗ್ರೇ ಗೇಮ್ಸ್‌’ ಸಿನಿಮಾ ರಿಲೀಸ್

ಗಂಗಾಧರ್‌ ಸಾಲಿಮಠ ನಿರ್ದೇಶನದಲ್ಲಿ ಮೂಡಿಬಂದಿರುವ ಗ್ರೇ ಗೇಮ್ಸ್‌ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಫ್ಯಾಮಿಲಿ ಸಸ್ಪೆನ್ಸ್‌ ಡ್ರಾಮಾ ಶೈಲಿಯ ಈ ಸಿನಿಮಾದಲ್ಲಿ ನಾಯಕನಾಗಿ ವಿಜಯ್‌ ರಾಘವೇಂದ್ರ ನಟಿಸಿದ್ದಾರೆ. ಇಲ್ಲಿ ಚಿಂತನೆಗಳ ಪ್ರಚೋದನೆ ನಡೆಯುತ್ತದೆ. ಸರಿ ತಪ್ಪುಗಳ ಗ್ರಹಿಕೆಗಳಿಗೂ ಸವಾಲೆಸೆಯುತ್ತದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಆನ್‌ಲೈನ್‌ ಗೇಮಿಂಗ್‌ ಪೈಪೂಟಿ ಜತೆಗೆ ಮೆಟಾವರ್ಸ್‌ನ ಸಂಕೀರ್ಣತೆಗಳ ಬೆಸುಗೆಯೂ ಗ್ರೇ ಗೇಮ್ಸ್‌ ಸಿನಿಮಾದ ಹೈಲೈಟ್.‌ ಸದ್ಯ ಬಹುತೇಕ ಎಲ್ಲ ಕೆಲಸಗಳನ್ನು ಮುಗಿಸಿಕೊಂಡಿರುವ ಈ ಚಿತ್ರ ರಿಲೀಸ್‌ ದಿನಾಂಕವನ್ನೂ ಬಹಿರಂಗಪಡಿಸಿದೆ. ಮೇ 10ರಂದು ರಾಜ್ಯಾದ್ಯಂತ ಗ್ರೇ ಗೇಮ್ಸ್‌ ಸಿನಿಮಾ ಬಿಡುಗಡೆ ಆಗಲಿದೆ.

ಸೆನ್ಸಾರ್‌ ಮಂಡಳಿಯಿಂದ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಪಡೆದಿರುವ ಈ ಸಿನಿಮಾ ಸದ್ಯ ಪ್ರಚಾರ ಕಣಕ್ಕಿಳಿಯುತ್ತಿದೆ. ವಿಜಯ್‌ ರಾಘವೇಂದ್ರ ಜತೆಗೆ ಭಾವನಾ ರಾವ್‌, ಶ್ರುತಿ ಪ್ರಕಾಶ್‌, ಅಪರ್ಣಾ ವಸ್ತ್ರೇಯ, ರವಿ ಭಟ್‌ ಮುಖ್ಯಭೂಮಿಕೆಯಲ್ಲಿದ್ದರೆ, ಇನ್ನುಳಿದಂತೆ ಜೈ, ಇಶಿತಾ ಸಿಂಗ್‌, ರಾಮ್‌ ಮಂಜೋನ್ನಾಥ್‌ ಬೆನ್ಸಕಾನ್‌ ಚಾಕೋ ಇನ್ನುಳಿದ ಪಾತ್ರವರ್ಗವದಲ್ಲಿದ್ದಾರೆ. ಇತ್ತೀಚೆಗೆ ಗೋವಾದಲ್ಲಿ ನಡೆದ 54ನೇ ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲೂ ಈ ಸಿನಿಮಾ ಪ್ರದರ್ಶನ ಕಂಡಿತ್ತು.

ಆನ್‌ಲೈನ್‌ ಗೇಮಿಂಗ್‌ ಹಿನ್ನೆಲೆಯಲ್ಲಿ ಸಾಗುವ ಈ ಸಿನಿಮಾದಲ್ಲಿ ಸೈಕಾಲಜಿಸ್ಟ್‌ ಆಗಿ ವಿಜಯ್‌ ರಾಘವೇಂದ್ರ ನಟಿಸಿದರೆ, ಸೈಬರ್‌ ಕ್ರೈಂ ತನಿಖಾಧಿಕಾರಿಯಾಗಿ ಭಾವನಾ ರಾವ್‌ ಕಾಣಿಸಿಕೊಂಡಿದ್ದಾರೆ. ವೃತ್ತಿಪರ ಗೇಮರ್‌ ಆಗಿ ಜೈ, ಚಿತ್ರನಟಿಯಾಗಿ ಶ್ರುತಿ ಪ್ರಕಾಶ್‌ ಸಿನಿಮಾದಲ್ಲಿದ್ದಾರೆ. ಆನ್‌ಲೈನ್‌ ಗೇಮಿಂಗ್‌ ಜತೆಗೆ ಮಾನಸಿಕ ಆರೋಗ್ಯ, ತಂತ್ರಜ್ಞಾನದ ವಿಚಾರವೂ ಸಿನಿಮಾದಲ್ಲಿರಲಿದೆ. ನೋಡುಗನನ್ನು ಭಾವನಾತ್ಮಕವಾಗಿಯೂ ಯೋಚನೆಗೆ ಇಳಿಸುವ ಶಕ್ತಿ ಈ ಚಿತ್ರಕ್ಕಿದೆ ಎಂಬುದು ಚಿತ್ರತಂಡದ ಅಂಬೋಣ.

ಈ ಬಗ್ಗೆ ನಿರ್ದೇಶಕ ಗಂಗಾಧರ್‌ ಸಾಲಿಮಠ ಹೇಳುವುದೇನೆಂದರೆ, ಗ್ರೇ ಗೇಮ್ಸ್‌ ವಾಸ್ತವ ಮತ್ತು ವರ್ಚುವಾಲಿಟಿ ಹೆಣೆದುಕೊಂಡಿರುವ ಜಗತ್ತಿನಲ್ಲಿ ಸರಿ ಮತ್ತು ತಪ್ಪುಗಳ ನಮ್ಮ ಗ್ರಹಿಕೆಗೆ ಸವಾಲು ಹಾಕುತ್ತದೆ. ಅಸಾಧಾರಣವಾದ ಪಾತ್ರವರ್ಗ ಮತ್ತು ತಂಡದ ಜತೆಗೆ, ಸಿನಿಮೀಯ ಅನುಭವವನ್ನು ನೀಡಲು ದಣಿವರಿಯಿಲ್ಲದೆ ಕೆಲಸ ಮಾಡಿದ್ದೇವೆ. ಅದು ಖಂಡಿತವಾಗಿಯೂ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಇದರಿಂದ ಅಷ್ಟೇ ಇಂಪ್ಯಾಕ್ಟ್‌ ಸಹ ಆಗಲಿದೆ ಎಂದಿದ್ದಾರೆ ನಿರ್ದೇಶಕರು.

ನಿರ್ಮಾಪಕ ಆನಂದ್‌ ಮುಗದ್‌, “ಕರ್ನಾಟಕದಾದ್ಯಂತ ಸಿನಿಮಾ ಪ್ರೇಕ್ಷಕರಿಗೆ ನಮ್ಮ ಚಲನಚಿತ್ರವನ್ನು ಅವರ ಮಡಿಲಿಗೆ ಹಾಕಲು ನಾವು ಉತ್ಸುಕರಾಗಿದ್ದೇವೆ. ಗ್ರೇ ಗೇಮ್ಸ್ ಸಿನಿಮಾ ಮಾಡಲು ತಮ್ಮ ಉತ್ಸಾಹ ಮತ್ತು ಬದ್ಧತೆಯನ್ನು ತೋರಿಸಿದ ನಮ್ಮ ಅದ್ಭುತ ತಂಡದ ಅಚಲವಾದ ಸಮರ್ಪಣೆಗೆ ಈ ಸಿನಿಮಾ ಸಾಕ್ಷಿಯಾಗಿದೆ” ಎನ್ನುತ್ತಾರೆ. ಇನ್ನು ಚಿತ್ರಕ್ಕೆ ಸತೀಶ್‌ ಗ್ರಾಮಪುರೋಹಿತ್‌, ಅರವಿಂದ ಜೋಶಿ, ಡೊಳೇಶ್ವರ್ ರಾಜ್‌ ಸುಂಕು ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ.

DEES FILMS ಬ್ಯಾನರ್‌ನಲ್ಲಿ ಗ್ರೇ ಗೇಮ್ಸ್‌ ಸಿನಿಮಾ ನಿರ್ಮಾಣವಾಗಿದೆ. ಗಂಗಾಧರ್‌ ಸಾಲಿಮಠ ಈ ಚಿತ್ರದ ನಿರ್ದೇಶಕರು. ವರುಣ್‌ ಡಿಕೆ ಛಾಯಾಗ್ರಹಣ, ಜಗದೀಶ್ ಎನ್‌ ಸಂಕಲನ, ಶ್ರೀಯಾಂಶ ಶ್ರೀರಾಮ್‌, ಡೊಳೇಶ್ವರ್‌ ರಾಜ್‌ ಸುಂಕು, ಅಶ್ವಿನ್‌ ಹೇಮಂತ್‌ ಸಂಗೀತ ನೀಡಿದ್ದಾರೆ. ಕಿರಣ್‌ ಕಾವೇರಪ್ಪ ಸಾಹಿತ್ಯ, ಟಗರು ರಾಜು ನೃತ್ಯ ನಿರ್ದೇಶನ ಮಾಡಿದ್ದು, ಬಸವರಾಜ್‌ ಖೇಡದ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!