ವರನಟ ಡಾ. ರಾಜ್ ಕುಮಾರ್ ಅವರಿಂದ ಉದ್ಘಾಟನೆಗೊಂಡು, 5,000ಕ್ಕೂ ಹೆಚ್ಚು ಸಿನಿಮಾಗಳಿಗೆ ಸಾಕ್ಷಿಯಾಗಿದ್ದ ‘ಊರ್ವಶಿ’ ಚಿತ್ರಮಂದಿರವನ್ನು ಕೋರ್ಟ್ ಆದೇಶದಂತೆ ನೆಲಸಮಗೊಳಿಸುವ ಕಾರ್ಯ ಆರಂಭವಾಗಿದೆ.
1970ರಲ್ಲಿ ನಿರ್ಮಾಣಗೊಂಡಿದ್ದ ಊರ್ವಶಿ ಚಿತ್ರಮಂದಿರ ಕನ್ನಡ ಸೇರಿದಂತೆ ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳ ಪ್ರದರ್ಶನಕ್ಕೆ ಹೆಸರುವಾಸಿಯಾಗಿತ್ತು. ಬೆಂಗಳೂರಿನ ಸಿನಿರಸಿಕರ ಪಾಲಿಗೆ ಇದು ಸಿನಿಮಾಗಳ ಹಬ್ಬವನ್ನು ಸಂಭ್ರಮಿಸುವ ಪ್ರಮುಖ ತಾಣವಾಗಿತ್ತು.
ಈ ಭೂಮಿಯನ್ನು 1970 ರಲ್ಲಿ ಜಮೀನಿನ ಮೂಲ ಮಾಲೀಕರಾದ ಬಾಸೆಟ್ಟಿ ಟ್ರಸ್ಟ್ ಅವರಿಂದ ಶ್ರೀನಿವಾಸ ಎಂಟರ್‌ಪ್ರೈಸಸ್ ಸಂಸ್ಥೆ ಜಾಗವನ್ನು ಲೀಸ್‌ಗೆ ಪಡೆದು ಚಿತ್ರಮಂದಿರವನ್ನು ನಿರ್ಮಿಸಿತ್ತು. ಗುತ್ತಿಗೆ ಅವಧಿ 2018ರ ಏಪ್ರಿಲ್‌ನಲ್ಲೇ ಅಂತ್ಯಗೊಂಡಿತ್ತು. ಬಳಿಕ ನಡೆದ ಕಾನೂನು ಹೋರಾಟದ ನಂತರ ಕೋರ್ಟ್ ಆದೇಶದಂತೆ ಈಗ ಚಿತ್ರಮಂದಿರವನ್ನು ನೆಲಸಮಗೊಳಿಸಲಾಗುತ್ತಿದೆ.
ಸುಮಾರು 1,100 ಆಸನಗಳ ಬೃಹತ್ ಸಾಮರ್ಥ್ಯ ಹೊಂದಿದ್ದ ಈ ಏಕಪರದೆ ಚಿತ್ರಮಂದಿರ ಕನ್ನಡ ಚಿತ್ರರಂಗದ ಅನೇಕ ಬ್ಲಾಕ್‌ಬಸ್ಟರ್ ಸಿನಿಮಾಗಳಿಗೆ ಸಾಕ್ಷಿಯಾಗಿದೆ. ಶಿವರಾಜ್ ಕುಮಾರ್ ಅಭಿನಯದ ‘ಎಕೆ 47’ ಸಿನಿಮಾ 100 ದಿನಗಳ ಕಾಲ ಯಶಸ್ವಿ ಪ್ರದರ್ಶನ ಕಂಡು ಇತಿಹಾಸ ನಿರ್ಮಿಸಿತ್ತು. ಕೆಜಿಎಫ್, ಕಾಂತಾರ ಸೇರಿದಂತೆ ಹಲವು ಯಶಸ್ವಿ ಚಿತ್ರಗಳು ಇಲ್ಲಿ ಪ್ರದರ್ಶನ ಕಂಡಿದ್ದವು. ಇತ್ತೀಚೆಗಷ್ಟೇ ಬಿಡುಗಡೆಯಾದ ‘ಜನನಾಯಗನ್’ ಚಿತ್ರ ಇದೇ ಚಿತ್ರಮಂದಿರದಲ್ಲಿ ಪ್ರದರ್ಶನವಾಗಿತ್ತು.
ಯಶ್ ಅಭಿನಯದ ಬಹು ನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಪ್ರದರ್ಶನಕ್ಕೂ ಊರ್ವಶಿ ಸಜ್ಜಾಗಿತ್ತು. ಚಿತ್ರಮಂದಿರದ ಮುಂದೆ ಯಶ್ ಅವರ ಭಾರೀ ಕಟೌಟ್‌ಗಳು ಮತ್ತು ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ಆದರೆ ಐತಿಹಾಸಿಕ ಚಿತ್ರಮಂದಿರ ಧರೆಗುರುಳುತ್ತಿರುವ ದೃಶ್ಯ ಸಿನಿಪ್ರಿಯರಲ್ಲಿ ಬೇಸರ ಮೂಡಿಸಿದೆ.
—-





Be the first to comment