ಶ್ರೀಲೀಲಾ ಹಿಂದಿ ಸಿನಿಮಾ ಬಿಡುಗಡೆಗೆ ದಿನಾಂಕ ಫಿಕ್ಸ್

ಕನ್ನಡದಿಂದ ಬಾಲಿವುಡ್‌ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಶ್ರೀಲೀಲಾ ಅವರ ಮೊದಲ ಹಿಂದಿ ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ.

ಬಾಲಿವುಡ್ ಯುವ ನಟ ಕಾರ್ತಿಕ್ ಆರ್ಯನ್ ಜೊತೆಗಿನ ಶ್ರೀಲೀಲಾ ಮೊದಲ ಹಿಂದಿ ಸಿನಿಮಾ  2027ರ ಏಪ್ರಿಲ್ 30ರಂದು   ತೆರೆ ಕಾಣಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.

ಅನುರಾಗ್ ಬಸು ನಿರ್ದೇಶನದ ಈ ರೊಮ್ಯಾಂಟಿಕ್ ಮ್ಯೂಸಿಕಲ್ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್ ಮತ್ತು ಶ್ರೀಲೀಲಾ ಮೊದಲ ಬಾರಿಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.  ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದ್ದರೂ, ಸಿನಿಮಾದ ಅಧಿಕೃತ ಶೀರ್ಷಿಕೆಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಶೀಘ್ರದಲ್ಲೇ ಚಿತ್ರದ ಹೆಸರನ್ನು ಪ್ರಕಟಿಸುವುದಾಗಿ ಚಿತ್ರತಂಡ ತಿಳಿಸಿದೆ.  ಸಿನಿಮಾ ಪ್ರೇಮಿಗಳು ಚಿತ್ರವನ್ನು ‘ಆಶಿಖಿ 3’ ಎಂದು ಕರೆಯುತ್ತಿದ್ದಾರೆ.

ಖ್ಯಾತ ನಿರ್ಮಾಪಕ ಭೂಷಣ್ ಕುಮಾರ್ ಅವರ ಟಿ-ಸೀರೀಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಪ್ರೀತಮ್ ಸಂಗೀತ ಸಂಯೋಜಿಸುತ್ತಿದ್ದು,  ಈ ಸಿನಿಮಾವನ್ನು ಮೊದಲಿಗೆ 2025ರ ಫೆಬ್ರವರಿಯಲ್ಲಿ ವಿಶೇಷ ಪ್ರಚಾರದ ವಿಡಿಯೋ ಮೂಲಕ ಘೋಷಿಸಲಾಗಿತ್ತು.  ಅದೇ ವರ್ಷದ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡುವ ಯೋಜನೆಯಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಚಿತ್ರೀಕರಣಕ್ಕೆ ಅಡ್ಡಿಯುಂಟಾಗಿ ಸಿನಿಮಾ ವಿಳಂಬವಾಗಿತ್ತು.

ಕನ್ನಡ ಚಿತ್ರರಂಗದಿಂದ ವೃತ್ತಿಜೀವನ ಆರಂಭಿಸಿದ ಶ್ರೀಲೀಲಾ, ತೆಲುಗು ಚಿತ್ರರಂಗದಲ್ಲಿ ಜನಪ್ರಿಯತೆ ಗಳಿಸಿದರು. ಪವನ್ ಕಲ್ಯಾಣ್, ಮಹೇಶ್ ಬಾಬು, ಬಾಲಕೃಷ್ಣ ಮತ್ತು ರವಿತೇಜ ಸೇರಿದಂತೆ ಹಲವು ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡರು. ಬಳಿಕ ತಮಿಳು ಚಿತ್ರರಂಗದಲ್ಲೂ ಕಾಣಿಸಿಕೊಂಡ ಅವರು ಈಗ ಹಿಂದಿ ಸಿನಿಮಾದ  ಪ್ರೇಕ್ಷಕರನ್ನು ತಲುಪಲು ಸಿದ್ಧರಾಗಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!