ಕೋಟ್ಯಂತರ ರೂಪಾಯಿ ವಂಚನೆ ಆರೋಪದಡಿ ಜೈಲು ಸೇರಿರುವ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ್ ಪ್ರಕರಣದಲ್ಲಿ ಸ್ಯಾಂಡಲ್‌ವುಡ್‌ನ ಹಲವು ಸ್ಟಾರ್‌ಗಳ ಹೆಸರುಗಳು ಕೇಳಿ ಬಂದಿದ್ದು, ಸಂಕಷ್ಟ ಉಂಟಾಗಿದೆ.
ವಂಚನೆ ಹಣವನ್ನು ಬಳಸಿ ಆಯೋಜಿಸಲಾದ ಅದ್ದೂರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿನಿತಾರೆಯರಿಗೆ ಸಿಐಡಿ ಶೀಘ್ರದಲ್ಲೇ ನೋಟಿಸ್ ಜಾರಿ ಮಾಡಲು ಮುಂದಾಗಿದೆ. ಕಳೆದ ವರ್ಷ ಡಿಸೆಂಬರ್ 27ರಂದು ಬೆಳಗಾವಿಯಲ್ಲಿ ನಡೆದ ‘ಬೆಳಗಾವಿ ಹಬ್ಬ’ ಕಾರ್ಯಕ್ರಮದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಸಾರ್ವಜನಿಕರಿಂದ ಡೆಪಾಸಿಟ್ ರೂಪದಲ್ಲಿ ಸಂಗ್ರಹಿಸಲಾಗಿದ್ದ ಹಣವನ್ನು ಈ ಕಾರ್ಯಕ್ರಮಕ್ಕೆ ಬಳಸಲಾಗಿದೆ ಎಂಬ ಶಂಕೆ ತನಿಖೆಯಲ್ಲಿ ವ್ಯಕ್ತವಾಗಿದೆ.
ಅಭಿಲಾಷ್ ನೇತೃತ್ವದಲ್ಲಿ ನಡೆದಿದ್ದ ಅದ್ದೂರಿ ಸಮಾರಂಭದಲ್ಲಿ ಡಾಲಿ ಧನಂಜಯ, ಸಪ್ತಮಿ ಗೌಡ, ನೀನಾಸಂ ಸತೀಶ್, ರಾಗಿಣಿ ದ್ವಿವೇದಿ, ದಿಗಂತ್, ಐಂದ್ರಿತಾ ರೈ, ವಶಿಷ್ಠ ಸಿಂಹ ಹಾಗೂ ಗಾಯಕ ರಾಜೇಶ್ ಕೃಷ್ಣನ್ ಸೇರಿದಂತೆ ಹಲವು ಸಿನಿತಾರೆಯರು ಭಾಗವಹಿಸಿದ್ದರು. ಈ ಕಲಾವಿದರಿಗೆ ಎಷ್ಟು ಸಂಭಾವನೆ ನೀಡಲಾಗಿದೆ? ಹಣದ ಪಾವತಿ ಬ್ಯಾಂಕ್ ಮೂಲಕವೇ ನಡೆದಿದೆಯೇ? ನಗದು ರೂಪದಲ್ಲೇ ನಡೆದಿದೆಯೇ ಎಂಬ ಮಾಹಿತಿ ಕಲೆಹಾಕಲು ಸಿಐಡಿ ಬ್ಯಾಂಕ್ ವ್ಯವಹಾರಗಳ ಪರಿಶೀಲನೆ ನಡೆಸುತ್ತಿದೆ.
ಅಗತ್ಯವಿದ್ದರೆ ನಟ-ನಟಿಯರನ್ನು ವಿಚಾರಣೆಗೆ ಕರೆಯಲಾಗುವುದು ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.
—–





Be the first to comment